ಕವಿತಾಳ: ಬೀದಿನಾಯಿಗಳ ಹಾವಳಿಗೆ ಬೇಸತ್ತ ಸಾರ್ವಜನಿಕರು

| Published : Feb 09 2024, 01:53 AM IST

ಸಾರಾಂಶ

ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬೀದಿ ನಾಯಿಗಳು ಗುಂಪಾಗಿ ಓಡಾಡುತ್ತಿರುವುದು ಜನರಲ್ಲಿ ಆತಂತ ಮೂಡಿಸಿದೆ. ಹಿನ್ನೆಲೆ ಬೀದಿ ನಾಯಿಗಳಿಗೆ ಕಡಿವಾಣ ಹಾಕಬೇಕು ಎಂದು ಪಪಂ ಮಾಜಿ ಸದಸ್ಯ ಮೌನೇಶ್ ಹಿರೇ ಕುರುಬುರ್ ಆಗ್ರಹಿಸಿದ್ದಾರೆ.

ಕವಿತಾಳ: ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು ಇದರಿಂದಾಗಿ ಅಂಗನವಾಡಿಗೆ ಹೋಗುವ ಚಿಕ್ಕ ಮಕ್ಕಳು, ವಿದ್ಯಾರ್ಥಿಗಳು ಮತ್ತು ಮಹಿಳೆಯರು ಸೇರಿದಂತೆ ಬೈಕ್ ಸವಾರರು ಭೀತಿಯಲ್ಲಿ ಓಡಾಡುವಂತಾಗಿದೆ.ಪಟ್ಟಣದ ಪ್ರಮುಖ ರಸ್ತೆಗಳಾದ ಹಳೇ ಬಸ್ ನಿಲ್ದಾಣ ಅನ್ವರಿ ಕ್ರಾಸ್, ಆನ್ವರಿ ರಸ್ತೆ, ಇಂಡಿಯನ್ ಪೆಟ್ರೋಲ್ ಬಂಕ್, ತಪ್ಪಲದೊಡ್ಡಿ ಅಗಸಿ ಸೇರಿದಂತೆ ಅನೇಕ ಕಡೆ ನಾಯಿಗಳ ಹಾವಳಿ ವಿಪರೀತವಾಗಿ ಹೆಚ್ಚಾಗಿದೆ.

ಬೆಳಗ್ಗೆ ಬಹುತೇಕ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹೋಗುವ ಸಮಯದಲ್ಲಿ ಹಿಂಡು ಹಿಂಡಾಗಿ ಓಡೋಡಿ ಬರುತ್ತಿರುವುದರಿಂದ ವಿದ್ಯಾರ್ಥಿಗಳು ಭಯಭೀತರಾಗಿ ಓಡಾಡುತ್ತಿದ್ದಾರೆ. ಬೈಕ್ ಸವಾರರಿಗಂತೂ ಸ್ವಲ್ಪ ಯಾಮಾರಿದ್ರು ಅದೋ ಗತಿ ಎನ್ನುವಂತಾಗಿದೆ.

ಅನೇಕ ಕಡೆ ನಾಯಿಗಳು ಮಕ್ಕಳನ್ನು ಎಳೆದಾಡಿ ಕಚ್ಚಿದ ಉದಾಹರಣೆಗಳು, ಮನುಷ್ಯರ ಮೇಲೆ ಆಕ್ರಮಣ ಮಾಡಿದ ಉದಾಹರಣೆಗಳು ಇರುವಾಗ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕೂಡಲೇ ಬೀದಿ ನಾಯಿಗಳನ್ನು ಬೇರಡೆಗೆ ಸ್ಥಳಾಂತರಿಸಲು ಮುಂದಾಗಬೇಕು ಎಂದು ಸಾರ್ವಜನಿಕ ಒತ್ತಾಯಿಸುತ್ತಿದ್ದಾರೆ.

ಬೀದಿ ನಾಯಿಗಳಿಂದ ಜನ ಸಾಮನ್ಯರಿಗೆ ತುಂಬಾ ತೊಂದರೆಯಾಗುತ್ತಿದೆ. ಕಾರಣ ಬೀದಿ ನಾಯಿಗಳಿಗೆ ಕಡಿವಾಣ ಹಾಕಬೇಕು ಎಂದು ಪಪಂ ಮಾಜಿ ಸದಸ್ಯ ಮೌನೇಶ್ ಹಿರೇ ಕುರುಬುರ್ ಆಗ್ರಹಿಸಿದ್ದಾರೆ.