ಸಾರಾಂಶ
ಎಲ್ಲ ಸರ್ಕಾರಿ ಕಚೇರಿ,ಅನುದಾನಿತ, ಅನುದಾನ ರಹಿತ ಶಾಲಾ ಕಾಲೇಜಗಳಲ್ಲಿಯೂ ಶ್ರದ್ಧಾ ಭಕ್ತಿಯೊಂದಿಗೆ ಸಂತ ಶ್ರೀಸೇವಾಲಾಲ್ ಜಯಂತಿ ಕಡ್ಡಾಯವಾಗಿ ಆಚರಿಸಬೇಕು
ಶಿರಹಟ್ಟಿ: ದೇಶದ ನೆಲ ಸಾಂಸ್ಕೃತಿಕ ವೈವಿಧ್ಯತೆಯಲ್ಲಿ ಏಕತೆ ಹೊಂದಿದ್ದು, ಈವೈವಿದ್ಯತಾ ಸಂಸ್ಕೃತಿಗೆ ಹಲವಾರು ಸಾಂಸ್ಕೃತಿಕ ರಾಯಬಾರಿಗಳು ಕಾರಣೀಭೂತರು. ಭಾರತ ನೆಲದಲ್ಲಿ ಹಲವು ಸಂತರು, ಧರ್ಮ ಸುಧಾರಕರು, ತತ್ವಜ್ಞಾನಿಗಳು ಜನ್ಮತಾಳಿ ಜನರಲ್ಲಿನ ತಮಂಧತೆ ಹೋಗಲಾಡಿಸಿದ್ದಾರೆ. ಇಂತಹ ಮಹಾನ್ ಸಂತರುಗಳಲ್ಲಿ ಲಂಬಾಣಿ ಸಮುದಾಯದ ಆರಾಧ್ಯ ದೈವ ಸದ್ಗುರು ಸಂತ ಸೇವಾಲಾಲ್ ಮಹಾರಾಜರು ಒಬ್ಬರಾಗಿದ್ದು, ಇವರ ಜಯಂತಿ ಅರ್ಥಪೂರ್ಣವಾಗಿ ಆಚರಣೆ ಮಾಡಬೇಕು ಎಂದು ತಹಸೀಲ್ದಾರ ಅನಿಲ ಬಡಿಗೇರ ಕರೆ ನೀಡಿದರು.
ಶ್ರೀಸೇವಾಲಾಲ್ ಜಯಂತಿ ಆಚರಣೆ ಮಾಡುವ ಕುರಿತು ತಹಸೀಲ್ದಾರ ಕಾರ್ಯಾಲಯದ ಸಭಾ ಭವನದಲ್ಲಿ ಸೋಮವಾರ ಕರೆಯಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕಾಡಳಿತದಿಂದ ಸಂತ ಶ್ರೀಸೇವಾಲಾಲ್ ಜಯಂತ್ಯುತ್ಸವ ಕಾರ್ಯಕ್ರಮ ಫೆ. ೧೫ರಂದು ಬೆಳಗ್ಗೆ ೧೧ ಗಂಟೆಗೆ ತಹಸೀಲ್ದಾರ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.ತಾಲೂಕಿನ ಎಲ್ಲ ಸರ್ಕಾರಿ ಕಚೇರಿ,ಅನುದಾನಿತ, ಅನುದಾನ ರಹಿತ ಶಾಲಾ ಕಾಲೇಜಗಳಲ್ಲಿಯೂ ಶ್ರದ್ಧಾ ಭಕ್ತಿಯೊಂದಿಗೆ ಸಂತ ಶ್ರೀಸೇವಾಲಾಲ್ ಜಯಂತಿ ಕಡ್ಡಾಯವಾಗಿ ಆಚರಿಸಬೇಕು. ಅಂದು ಎಲ್ಲ ಇಲಾಖೆಯಲ್ಲಿಯೂ ಕಡ್ಡಾಯವಾಗಿ ಜಯಂತಿ ಆಚರಣೆ ಮಾಡಬೇಕು. ಶರಣರ, ಸಂತರ, ದಾರ್ಶನಿಕರ, ಮಹನೀಯರ ಜಯಂತಿಗಳು ಕೇವಲ ಅವರವರ ಜಾತಿಗಳಿಗೆ ಮಾತ್ರ ಸೀಮಿತವಾಗುತ್ತಿರುವುದು ಸರಿಯಾದ ಬೆಳವಣಿಗೆಯಲ್ಲ.ಎಲ್ಲರೂ ಒಗ್ಗೂಡಿ ಆಚರಣೆ ಮಾಡಬೇಕು ಎಂದು ತಿಳಿಸಿದರು.
ಸಮಾಜದ ಮುಖಂಡ ತಾಪಂ ಮಾಜಿ ಅಧ್ಯಕ್ಷ ಜಾನು ಲಮಾಣಿ, ದೇವಪ್ಪ ಲಮಾಣಿ, ಈರಣ್ಣ ಚವ್ಹಾಣ, ಎಂ.ಕೆ.ಲಮಾಣಿ, ತಿಪ್ಪಣ್ಣ ಲಮಾಣಿ, ಖಜಾನೆ ಇಲಾಖೆ ಅಧಿಕಾರಿ ಶಿವಪ್ಪ ಹದ್ಲಿ, ಬಿಇಓ ಎಚ್.ಎನ್. ನಾಯಕ, ಸಮಾಜ ಕಲ್ಯಾಣ ಇಲಾಖೆಯ ಗೋಪಾಲ ಲಮಾಣಿ, ಎಂ.ಎಸ್. ಸಂಕನೂರ, ನಿಂಗಪ್ಪ ಓಲೇಕಾರ, ರಾಮಪ್ಪ ಪೂಜಾರ, ರೇವಣೆಪ್ಪ ಮನಗೂಳಿ, ಮಾರೂತಿ ರಾಠೋಡ, ಮರಿಗೌಡ ಸುರಕೋಡ ಸೇರಿ ಇಲಾಖೆಯ ಅಧಿಕಾರಿಗಳು ಇದ್ದರು.