ಸಾರಾಂಶ
ಕನ್ನಡಪ್ರಭ ವಾರ್ತೆ, ಬಸವಕಲ್ಯಾಣ
ಕಳೆದ 25 ವರ್ಷಗಳಿಂದ ನಿರಂತರವಾಗಿ ರಾಷ್ಟ್ರೀಯ ಬಸವ ದಳದ ಶ್ರೇಯೋಭಿವೃದ್ಧಿಗಾಗಿ ದುಡಿಯುತ್ತಿರುವ ಬಸವರಾಜ ಪಾಟೀಲ್ ಶಿವಪುರ ಅವರನ್ನು ದಳದ ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಜಗದ್ಗುರು ಡಾ.ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು.ಅವರು ಸ್ವಾಭಿಮಾನಿ ಕಲ್ಯಾಣ ಪರ್ವದ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಪೂಜ್ಯ ಮಾತಾಜಿಯವರು ಕಟ್ಟಿದ ತತ್ವನಿಷ್ಠರ ಪಡೆ ಇನ್ನು ಮುಂದೆ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗೆ ಹೋರಾಟ ನಡೆಸಲಿದೆ. ಅದಕ್ಕಾಗಿಯೇ ಬೀದರ್ ಲಿಂಗಾಯತ ಧರ್ಮ ಮಹಾಸಭಾದ ಜಿಲ್ಲಾಧ್ಯಕ್ಷರಾಗಿ ಹಾವಶೆಟ್ಟಿ ಪಾಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.
ಚಿಕ್ಕಮಗಳೂರಿನ ಪೂಜ್ಯ ಡಾ.ಜಯಬಸವಾನಂದ ಸ್ವಾಮೀಜಿ ಮಾತನಾಡಿ, ಪೂಜ್ಯ ಮಾತಾಜಿಯವರು ಕಟ್ಟಿದ ಸಂಸ್ಥೆ ಹಾಳಾಗದಂತೆ ನೋಡಿಕೊಂಡರೆ ಅದೇ ಅವರಿಗೆ ಸಲ್ಲಿಸುವ ಕೃತಜ್ಞತೆ ಎಂದರು.ಪ್ರಾಧ್ಯಾಪಕ ಪ್ರೊ.ವೀರಶೆಟ್ಟಿ ಮೈಲೂರಕರ್ ಮಾತನಾಡಿ, ನೊಂದವರ, ತುಳಿತಕ್ಕೊಳಗಾದವರ ಧ್ವನಿಯಾಗಿ ಬಸವಾದಿ ಶರಣರು ಹೋರಾಡಿದ್ದಾರೆ. ಹೀಗಾಗಿ ಇಂತಹ ಶರಣರ ಸಂದೇಶಗಳನ್ನು ವಿಶ್ವದೆಲ್ಲೆಡೆ ಪಸರಿಸುವ ಅವಶ್ಯಕತೆ ಇದೆ ಎಂದರು.
ಇದೇ ವೇಳೆ ಜಿಲ್ಲಾ, ತಾಲೂಕು ಹಾಗೂ ರಾಜ್ಯಮಟ್ಟದ ರಾಷ್ಟ್ರೀಯ ಬಸವದಳದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಬೇಗ್ ಸಭಾಂಗಣದ ಹೊರಭಾಗದಲ್ಲಿ ಭವ್ಯ ಧ್ವಜಾರೋಹಣ ನೆರವೇರಿತು. ವೇದಿಕೆ ಮೇಲೆ ಹುಬ್ಬಳ್ಳಿಯ ಗಂಗಾಧರ ದೊಡ್ಡವಾಡ, ಲಿಂಗಾಯತ ಧರ್ಮ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಜ ಪಾಟೀಲ್ ಅತಿವಾಳ, ಬೆಳಗಾವಿ ದಳದ ಅಧ್ಯಕ್ಷ ಅಶೋಕ ಬೆಂಡಿಗೇರಿ, ಪ್ರಮುಖರಾದ ಭೀಮರಾವ್ ಬಿರಾದಾರ, ಕಲ್ಮೇಶ ಚಿತ್ರದುರ್ಗ, ಧನರಾಜ ಬಿರಾದಾರ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.ಸ್ವಾಭಿಮಾನಿ ಕಲ್ಯಾಣ ಪರ್ವದಲ್ಲಿ 7 ಪ್ರಮುಖ ನಿರ್ಣಯಗಳು:
ಬಸವಕಲ್ಯಾಣ: ಮಹಾಜಗದ್ಗುರು ಡಾ.ಮಾತೆ ಗಂಗಾದೇವಿಯವರು ಬಸವ ಧರ್ಮಪೀಠದ ಮೂಲ ಧ್ಯೇಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಪ್ರಯುಕ್ತ ಅವರನ್ನು ಬಸವಧರ್ಮ ಪೀಠದ ಗೌರವಾಧ್ಯಕ್ಷರಾಗಿ ಮಾಡಿ, ಬಸವ ಧರ್ಮಪೀಠದ ನೂತನ ಅಧ್ಯಕ್ಷರನ್ನಾಗಿ ಚನ್ನಬಸವೇಶ್ವರ ಜ್ಞಾನಪೀಠ, ಬೆಂಗಳೂರಿನ ಪೀಠಾಧ್ಯಕ್ಷ ಪೂಜ್ಯ ಜಗದ್ಗುರು ಡಾ.ಚನ್ನಬಸವಾನಂದ ಸ್ವಾಮೀಜಿಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.ಸ್ವಾಭಿಮಾನಿ ಕಲ್ಯಾಣ ಪರ್ವದ ಸಮಾರೋಪ ಸಮಾರಂಭದಲ್ಲಿ 7 ನಿರ್ಣಯಗಳನ್ನು ಕೈಗೊಳ್ಳಲಾಯಿತು.1. ಮಹಾಜಗದ್ಗುರು ಡಾ.ಮಾತೆ ಗಂಗಾದೇವಿಯವರು ಬಸವ ಧರ್ಮ ಪೀಠದ ಮೂಲ ಧ್ಯೇಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಪ್ರಯುಕ್ತ ಅವರನ್ನು ಬಸವ ಧರ್ಮ ಪೀಠದ ಗೌರವಾಧ್ಯಕ್ಷರಾಗಿ ಮಾಡಿ, ಬಸವ ಧರ್ಮ ಪೀಠದ ನೂತನ ಅಧ್ಯಕ್ಷರನ್ನಾಗಿ ಚನ್ನಬಸವೇಶ್ವರ ಜ್ಞಾನಪೀಠ ಬೆಂಗಳೂರಿನ ಪೀಠಾಧ್ಯಕ್ಷ ಪೂಜ್ಯ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.2. ಧಾರವಾಡದ ಜಗನ್ಮಾತಾ ಅಕ್ಕಮಹಾದೇವಿ ಅನುಭಾವ ಪೀಠದ ನೂತನ ಪೀಠಾಧ್ಯಕ್ಷರನ್ನಾಗಿ ಸ್ವಾಭಿಮಾನಿ ಕಲ್ಯಾಣ ಪರ್ವದಲ್ಲಿ ಆಯ್ಕೆ ಮಾಡಲಾಯಿತು.
3. ಬಸವೇಶ್ವರರನ್ನು ಕರ್ನಾಟಕದ ‘ಸಾಂಸ್ಕೃತಿಕ ನಾಯಕ’ ಎಂದು ಘೋಷಣೆ ಮಾಡಿರುವುದು ಸ್ವಾಗತಾರ್ಹ. ಆದರೆ ನವೆಂಬರ್ 1ರಂದು ರಾಜ್ಯೋತ್ಸವ ದಿನ ಗ್ರಾಮ ಪಂಚಾಯತ್‌ನಿಂದ ಹಿಡಿದು ವಿಧಾನಸೌಧದವರೆಗೆ ಪ್ರತಿಯೊಂದು ಕಚೇರಿಗಳಲ್ಲಿ ಭಾವಚಿತ್ರ ಇಟ್ಟು ಪೂಜಿಸುವಂತೆ ಸೂಚಿಸಬೇಕು. ವಚನ ಸಾಹಿತ್ಯ ಪ್ರಚಾರ ಪ್ರಸಾರಕ್ಕಾಗಿ ವಿಶೇಷ ಅನುದಾನ ಸರ್ಕಾರ ಮೀಸಲಿಡಬೇಕು.4.ಆಲಮಟ್ಟಿ ಕೂಡಲಸಂಗಮ ಚಿತ್ರದುರ್ಗ ರೈಲ್ವೆ ಸಮೀಕ್ಷೆ ಆಗಿದೆ. ಕಾಮಗಾರಿ ಬೇಗ ಪೂರ್ಣಗೊಳಿಸಿದರೆ ಬೆಂಗಳೂರು ಮುಂಬಯಿ ಮತ್ತು ಸೋಲಾಪುರದಿಂದ ಕೂಡಲಸಂಗಮಕ್ಕೆ ನೇರ ಸಂಪರ್ಕ ಒದಗಿಸಿದಂತಾಗುತ್ತದೆ. ಬೇಗ ಕಾಮಗಾರಿ ಪೂರ್ಣಗೊಳಿಸಬೇಕು.5. ಬಸವರಾಜ ಪಾಟೀಲ್ ಶಿವಪುರ ಅವರನ್ನು ರಾಷ್ಟ್ರೀಯ ಬಸವ ದಳದ ರಾಜ್ಯಾಧ್ಯಕ್ಷರಾಗಿ ಹಾಗೂ ಎಂಜಿನಿಯರ್ ಹಾವಶೆಟ್ಟಿ ಪಾಟೀಲ್ ಅವರನ್ನು ಲಿಂಗಾಯತ ಧರ್ಮ ಮಹಾಸಭಾದ ಬೀದರ್ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಮಾಡಿ ನಿರ್ಣಯ ಕೈಗೊಳ್ಳಲಾಯಿತು.6. ಬೀದರ್ ವಿಮಾನ ನಿಲ್ದಾಣಕ್ಕೆ ವಿಶ್ವಗುರು ಬಸವೇಶ್ವರರ ಹೆಸರಿಡಬೇಕು
7. ಲಿಂಗಾಯತ ಹೋರಾಟ ತೀವ್ರಗೊಳಿಸುವ ನಿರ್ಣಯ ಕೈಗೊಳ್ಳಲಾಯಿತು.ಈ ನಿರ್ಣಯಗಳನ್ನು ಬಸವರಾಜ ಪಾಟೀಲ್ ಶಿವಪುರ ಮಂಡಿಸಿದರು. ವೇದಿಕೆ ಮೇಲಿರುವ ಎಲ್ಲಾ ಪೂಜ್ಯರು ಹಾಗೂ ಗಣ್ಯರು ಅನುಮೋದಿಸಿದರು. ಸಭೀಕರು ಕರತಾಡನ ಮೂಲಕ ಒಪ್ಪಿಗೆ ಸೂಚಿಸಿದರು.