ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಕರ್ನಾಟಕ ರತ್ನ ಪರಮಪೂಜ್ಯ ಡಾ. ಶ್ರೀ ಶಿವಕುಮಾರ್ ಸ್ವಾಮೀಜಿಗಳ 119ನೇ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಹುಳಿಯಾರಿನ ರಾಮಗೋಪಾಲ್ ಸರ್ಕಲ್ ಬಳಿಯ ಭೈರವೇಶ್ವರ ಮೆಡಿಕಲ್ಸ್ ಮುಂಭಾಗದಲ್ಲಿ ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

​ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷರಾದ ಚನ್ನಬಸವಯ್ಯ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಮಾಜಿ ಶಾಸಕರಾದ ಕೆ.ಎಸ್. ಕಿರಣ್ ಕುಮಾರ್ ಚಾಲನೆ ನೀಡಿದರು. ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ಡಾ. ಶಿವಕುಮಾರ್ ಸ್ವಾಮೀಜಿ ಇಡೀ ವಿಶ್ವಕ್ಕೇ ಮಾದರಿಯಾದವರು. ಅವರ ದಾಸೋಹ ಸಂಸ್ಕೃತಿ ಮತ್ತು ಬದುಕಿನ ಆದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಜಿಲ್ಲೆಯ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಶ್ರೀಗಳ ಆಶೀರ್ವಾದವೇ ನಮಗೆ ದಾರಿದೀಪ ಎಂದು ಕಿರಣ್ ಕುಮಾರ್ ನುಡಿದರು. ​ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನದವರೆಗೆ ನೂರಾರು ಭಕ್ತಾದಿಗಳಿಗೆ ಲಘು ಉಪಹಾರ ಹಾಗೂ ಪಾಯಸ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಕವಿತಾ ಕಿರಣ್, ಚನ್ನಬಸವಯ್ಯ, ಪ್ರಕಾಶ್, ಗೌಡಿ, ದಯಾನಂದ್, ಹೇಮಂತ್ ಕುಮಾರ್, ರಾಘವೇಂದ್ರ, ಬಾಲರಾಜು, ರವಿರಾಜ್, ತಮ್ಮಯ್ಯ, ಡಾ. ಚಂದ್ರಧರ್, ಜಗದೀಶ್, ಬಾಳೆಕಾಯಿ ಲಕ್ಷ್ಮೀಕಾಂತ್, ಕೊರಿಯರ್ ಹರೀಶ್, ಧನಂಜಯ್, ರಘುನಾಥ್, ಬಸವರಾಜು, ನವೀನ್, ಸಿದ್ದೇಶ್, ಯೋಗೇಶ್ ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು.