ಧಾರವಾಡ:

ಹನುಮ ಜಯಂತಿ ನಿರೀಕ್ಷೆಯಂತೆ ಗುರುವಾರ ಧಾರವಾಡದ ಎಲ್ಲ ಹನುಮಂತ ದೇವಸ್ಥಾನದಲ್ಲಿ ವಿಶೇಷ ಪೂಜೆ-ಪುನಸ್ಕಾರ, ಅಲಂಕಾರ ಸೇರಿದಂತೆ ಸಂಭ್ರಮದಿಂದ ಜರುಗಿತು.

ನಗರ ಹಾಗೂ ಗ್ರಾಮೀಣದಲ್ಲಿ ಮೊದಲೇ ನಿರ್ಧರಿಸಿದಂತೆ ಕೆಲವು ದೇವಸ್ಥಾನದಲ್ಲಿ ಅಭಿಷೇಕ, ತೊಟ್ಟಿಲೋತ್ಸವ ಹಾಗೂ ಇತರೆ ಧಾರ್ಮಿಕ ಕಾರ್ಯಕ್ರಮ ಜರುಗಿದರೆ, ಕೆಲವೆಡೆ ರಥೋತ್ಸವ ಮೂಲಕ ಹನುಮ ಜಯಂತಿ ಯಶಸ್ವಿಗೊಳಿಸಲಾಯಿತು. ಡಯಟ್‌ ಬಳಿಯ ಎಂ.ಎಂ. ದಾಮೋದರ ಮನೆ ಆವರಣದಲ್ಲಿರುವ ಹನುಮ ದೇವಸ್ಥಾನ ಹಾಗೂ ಎದುರಿನ ರಸ್ತೆಯ ಎರಡೂ ಬದಿಗೆ ಆಕರ್ಷಕ ವಿದ್ಯುತ್‌ ಅಲಂಕಾರದಿಂದ ಭಕ್ತರ ಗಮನ ಸೆಳೆಯಿತು. ಬೆಳಗ್ಗೆ ದೇವರಿಗೆ ಅಭಿಷೇಕ ಹಾಗೂ ತೊಟ್ಟಿಲೋತ್ಸವ ವಿಜೃಂಬಣೆಯಿಂದ ಕಿಶೋರ ದಾಮೋದರ ನೇತೃತ್ವದಲ್ಲಿ ಜರುಗಿತು. 11ನೇ ಶತಮಾನದ ಪುರಾತನ ಮುದಿ ಮಾರುತಿ ದೇವಸ್ಥಾನ ಹಾಗೂ ಗುಲಗಂಜಿಕೊಪ್ಪ ಮಾರುತಿ ದೇವಸ್ಥಾನದಲ್ಲಿ ಹನುಮಂತ ದೇವರ ಜಾತ್ರೆ ಹಾಗೂ ರಥೋತ್ಸವ ಜರುಗಿತು. ಮಧ್ಯಾಹ್ನ ಅನ್ನಪ್ರಸಾದವೂ ಇತ್ತು. ತಾಲೂಕಿನ ಯಾದವಾಡದಲ್ಲಿ ಎರಡ್ಮೂರು ದಿನಗಳಿಂದ ಹನುಮಂತನ ಜಾತ್ರೆ ಜರುಗುತ್ತಿದ್ದು, ಗುರುವಾರ ಸಂಜೆ 5ಕ್ಕೆ ರಥೋತ್ಸವ ನಡೆಯಿತು.

ಕಾಮನಕಟ್ಟಿ ಹನುಮಂತ ದೇವರ ಗುಡಿ ಓಣಿಯಲ್ಲಿ ಅನುಗ್ರಹ ಆಂಜನೇಯ ದೇವಸ್ಥಾನದಲ್ಲಿ ಬೆಳಗಿನ ಪಂಚಾಮೃತ ಅಭಿಷೇಕ, ಅಲಂಕಾರ, ತೀರ್ಥ ಪ್ರಸಾದ ಸೇವೆಗಳು ನಡೆದವು. ಗುರುವಾರ ಸಂಜೆ 5ಕ್ಕೆ ರಥೋತ್ಸವ ಜರುಗಿತು.