ಹಾವೇರಿ ಗುರುಭವನದಲ್ಲಿ ಸೇವಾ ನಿವೃತ್ತಿ ಹೊಂದಿದ ಜಿಲ್ಲೆಯ ಪ್ರಾಥಮಿಕ ಹಾಗೂ ಫ್ರೌಢಶಾಲಾ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಹಾವೇರಿ: ಸಮಾಜದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವವಾದದ್ದು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪಿ.ಎಲ್. ಪಾಟೀಲ್ ಹೇಳಿದರು.ನಗರದ ಜಿಲ್ಲಾ ಗುರುಭವನದಲ್ಲಿ ಜರುಗಿದ ಮಲೆನಾಡ ಗಾಂಧಿ ಗೋವಿಂದೇಗೌಡರ ಸ್ಮರಣೋತ್ಸವ ನಿಮಿತ್ತ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಸೇವಾ ನಿವೃತ್ತಿ ಹೊಂದಿದ ಶಿಕ್ಷಕರ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಶಿಕ್ಷಕರು ಕೇವಲ ಪಾಠ ಬೋಧಕರಲ್ಲ, ಅವರು ಸಮಾಜದ ಭವಿಷ್ಯ ರೂಪಿಸುವ ಶಿಲ್ಪಿಗಳು. ವಿದ್ಯಾರ್ಥಿಗಳಲ್ಲಿ ಶಿಸ್ತಿನೊಂದಿಗೆ ಜ್ಞಾನ, ನೈತಿಕತೆ ಮತ್ತು ಸಂಸ್ಕಾರಗಳನ್ನು ಬೆಳೆಸುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ಒಬ್ಬ ಉತ್ತಮ ಶಿಕ್ಷಕ ಅನೇಕ ಉತ್ತಮ ವಿದ್ಯಾರ್ಥಿಗಳನ್ನು ರೂಪಿಸಿ, ಅವರ ಮೂಲಕ ದೇಶದ ಅಭಿವೃದ್ಧಿಗೆ ದಾರಿ ಮಾಡುತ್ತಾರೆ ಎಂದರು.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಕರು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಶಿಕ್ಷಣದ ಜೊತೆಗೆ ಜೀವನ ಮೌಲ್ಯಗಳನ್ನು ಬೋಧಿಸುವುದು ಅತ್ಯಂತ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಇನ್ನಷ್ಟು ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟರು.ನಗರಸಭೆಯ ಮಾಜಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ಮಲೆನಾಡ ಗಾಂಧಿ ಎಂದು ಬಿರುದಾಕಿಂತ ಗೋವಿಂದೇಗೌಡ್ರು ಶಿಕ್ಷಣ ಸಚಿವರಾಗಿ ಮಾಡಿದ ಕಾರ್ಯ ಶ್ಲಾಘನೀಯ. ಅವರು ಮಾಡಿದ ಕೆಲಸವನ್ನು ಸ್ಮರಿಸಿ ಶಿಕ್ಷಕರಿಗೆ ಕೃತಜ್ಞತಾ ಸಮಾರಂಭವನ್ನು ಮಾಡಿರುವುದು ಇತರರಿಗೆ ಮಾದರಿಯಾಗುವುದು, ಶಿಕ್ಷಕ ವೃತ್ತಿ ಎಲ್ಲ ವೃತ್ತಿಗಳಿಗಿಂತಲೂ ಶ್ರೇಷ್ಠವಾದುದು, ವಿದ್ಯಾರ್ಥಿಗಳ ಜೀವನ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಬಹಳಷ್ಟು ಮಹತ್ವದ್ದಾಗಿದೆ ಎಂದರು.ಕಾರ್ಯಕ್ರಮದಲ್ಲಿ ಕೃಷಿ ಪಂಡಿತ ಪ್ರಶಸ್ತಿ ವಿಜೇತೆ ಮಂಗಳಾ ನೀಲಗುಂದ, ರಾಮಮೋಹನ್ ರಾವ್, ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಮಾತನಾಡಿದರು.ಶ್ರೀಶೈಲದ ಶಿವಲಿಂಗೇಶ್ವರ ಸ್ವಾಮೀಜಿ, ಸಾಹಿತಿ ವಿ.ಎಸ್. ಚರಂತಿಮಠ, ಬಸಲಿಂಗಯ್ಯ ಹಿರೇಮಠ, ವಿ.ಎಸ್. ಹಿರೇಮಠ ಇತರರು ಇದ್ದರು. ಇದೇ ಸಂದರ್ಭದಲ್ಲಿ ಜಿಲ್ಲೆಯ 25ಕ್ಕೂ ಅಧಿಕ ಸೇವಾ ನಿವೃತ್ತಿ ಹೊಂದಿದ ಪ್ರಾಥಮಿಕ ಹಾಗೂ ಫ್ರೌಢಶಾಲಾ ಶಿಕ್ಷಕರನ್ನು ಗೌರವಿಸಲಾಯಿತು. ಗದಿಗೆಯ್ಯಸ್ವಾಮಿ ಹಿರೇಮಠ ಸ್ವಾಗತಿಸಿದರು. ದಾವಣಗೆರೆಯ ಗೌರಿ ಜೋಶಿ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಶಿಕ್ಷಕ ನಾಗರಾಜ ನಡುವಿನಮಠ ನಿರೂಪಿಸಿ, ವಂದಿಸಿದರು.ಶಿಗ್ಗಾಂವಿ ತಾಲೂಕಿನ ನೆಗಳೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಶಿಕ್ಷಕರಾದ ಎಸ್.ಜಿ. ಪಾಟೀಲ (ಹಿರೇಮಠ), ಎಂ.ಡಿ. ಹಿರೇಮಠ, ಹಾಗೂ ಎಂ.ಪಿ.ಎಸ್ ಪ್ರಭಾರಿ ಮುಖ್ಯ ಶಿಕ್ಷಕ ಆರ್.ಎಸ್. ಲಮಾಣಿ ಸೇರಿದಂತೆ ವರ್ಗಾವಣೆಗೊಂಡ ಶಾಲೆಯ ಮುಖ್ಯ ಶಿಕ್ಷಕ ಎಸ್.ಜಿ. ಹರವಿ ಅವರುಗಳನ್ನು ಶಾಲಾ ಅಭಿವೃದ್ಧಿ ಸಮಿತಿ ಹಾಗೂ ವಿದ್ಯಾರ್ಥಿಗಳು ಸನ್ಮಾನಿಸಿದರು.