ಕುಂದಗೋಳ:
ಪಟ್ಟಣದ ಕರಿಬಂಡಿ ಉತ್ಸವವು ಸೋಮವಾರ ಅತ್ಯಂತ ಸಡಗರ ಹಾಗೂ ವಿಜೃಂಭಣೆಯಿಂದ ಜರುಗಿತು.ಪಟ್ಟಣದ ಬಿಳೆಬಾಳ ಹಾಗೂ ಅಲ್ಲಾಪುರ ಅವರ ಕರಿಬಂಡಿಯನ್ನು ವಿಶೇಷವಾಗಿ ಸಿಂಗರಿಸಲಾಗಿತ್ತು. ಹಿರೇಮಠದ ಶ್ರೀಶಿಥಿಕಂಠೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಕಲ್ಯಾಣಪುರ ಮಠದ ಶ್ರೀಬಸವಣ್ಣಜ್ಜನವರು ಹಾಗೂ ಶಿವಾನಂದ ಮಠದ ಶಿವಾನಂದ ಶ್ರೀಗಳ ಸಮ್ಮುಖದಲ್ಲಿ ಶಾಸಕ ಎಂ.ಆರ್. ಪಾಟೀಲ ಅವರು ಕರಿಬಂಡಿ ಉತ್ಸವಕ್ಕೆ ಚಾಲನೆ ನೀಡಿದರು.
ಉತ್ಸವದ ಅಂಗವಾಗಿ ಕರೋಗಲ್ ಮನೆಯ ಹತ್ತಿರ 14 ವೀರಗಾರರು ಕರಿಬಂಡಿಯನ್ನು ಏರಿ ಮಂತ್ರ ಪಠಣ, ಮಂತ್ರಘೋಷಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಕರಿಬಂಡಿಯು ಸಾರ್ವಜನಿಕರ ಗಮನ ಸೆಳೆಯಿತು. ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ಸಲ್ಲಿಸಲಾಯಿತು.ಈ ಬಾರಿ ಸಕಾಲಕ್ಕೆ ಮಳೆಯಾಗದೆ ತೀವ್ರ ಕಂಗಾಲಾಗಿದ್ದ ಈ ಭಾಗದ ರೈತರು, ಕರಿಬಂಡಿ ಉತ್ಸವದಲ್ಲಿ ತಮ್ಮ ಎತ್ತುಗಳನ್ನು ಬಂಡಿಗೆ ಹೂಡಿ ಉತ್ತಮ ಮಳೆ-ಬೆಳೆ ಹಾಗೂ ಇಷ್ಟಾರ್ಥ ಸಿದ್ಧಿಗಾಗಿ ಭಕ್ತಿಯಿಂದ ಪ್ರಾರ್ಥಿಸಿದರು. ರೈತರ ಪ್ರಾರ್ಥನೆಗೆ ಉತ್ಸವದ ಸಂದರ್ಭದಲ್ಲಿಯೇ ಮಳೆಯು ಸುರಿದಿದ್ದರಿಂದ ಬರದ ಆತಂಕದಲ್ಲಿದ್ದ ಅನ್ನದಾತರ ಮುಖದಲ್ಲಿ ಮಂದಹಾಸ ಮೂಡಿತು ಎಂದು ಅರ್ಚಕ ಸುನೀಲ ಕರೋಗಲ್ ಸಂತಸ ವ್ಯಕ್ತಪಡಿಸಿದರು.
ಈ ಧಾರ್ಮಿಕ ಮಹೋತ್ಸವದಲ್ಲಿ ಮುಖಂಡರಾದ ಅರವಿಂದ ಕಟಗಿ, ಅರ್ಜುನ ನಾಡಿಗೇರ, ನಾಗರಾಜ ದೇಶಪಾಂಡೆ, ದಾನಪ್ಪ ಗಂಗಾಯಿ, ಶೇಖಣ್ಣ ಬಾಳಿಕಾಯಿ, ಸತೀಶ ಪಾಟೀಲ್, ಪ್ರಕಾಶ ಪಾಟೀಲ್ ಸೇರಿದಂತೆ ಪಟ್ಟಣದ ನೂರಾರು ಭಕ್ತರು ಹಾಗೂ ರೈತರು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.