ಸಾರಾಂಶ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ತಾಲೂಕಿನ ಆಲ್ದೂರು ಗ್ರಾಮದಲ್ಲಿ ವಿವಾದಿತ ಜಾಗಕ್ಕೆ ಸಂಬಂಧಿಸಿದಂತೆ ದಲಿತ ಹಾಗೂ ಒಕ್ಕಲಿಗ ಸಮಾಜದ ನಡುವಿನ ಗಲಾಟೆ ತೀವ್ರವಾಗಿದ್ದು, ವಿವಾದಿತ ಸ್ಥಳದಲ್ಲೇ ಶುಕ್ರವಾರ ದಲಿತರು ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ನಡೆಸಿದ್ದಾರೆ. ಈ ವೇಳೆ ಒಕ್ಕಲಿಗ ಸಮುದಾಯ ಹಾಗೂ ದಲಿತರ ನಡುವೆ ವಾಗ್ದಾಳಿ ನಡೆದಿದ್ದಲ್ಲದೆ ಒಕ್ಕಲಿಗ ಸಮುದಾಯದ ಮಹಿಳೆ ಶವ ಸಂಸ್ಕಾರದ ಗುಂಡಿಯೊಳಗೆ ಇಳಿದು ಪ್ರತಿಭಟನೆ ನಡೆಸಿದ್ದಾರೆ.ಆಲ್ದೂರು ಗ್ರಾಮದ ರಸ್ತೆ ಪಕ್ಕದ ಜಾಗದ ಬಗ್ಗೆ ಹಿಂದಿನಿಂದಲೂ ವಿವಾದವಿತ್ತು. ದಲಿತರು ಈ ಜಾಗ ತಮ್ಮ ಸ್ಮಶಾನಕ್ಕೆ ಸೇರಿದ್ದು ಎಂದರೆ, ಒಕ್ಕಗಲಿರು ಇದು ಒಕ್ಕಲಿಗರ ಸಮುದಾಯ ಭವನಕ್ಕೆ ಸೇರಿದ ಜಾಗ ಎಂದು ಹೇಳುತ್ತಲೇ ಬಂದಿದ್ದರು. ಹೀಗಾಗಿ ದಶಕಗಳಿಂದಲೂ ಈ ಜಾಗ ವಿವಾದಿತ ಪ್ರದೇಶವೇ ಆಗಿತ್ತು.
ಈ ನಡುವೆ ಶುಕ್ರವಾರ ಆಲ್ದೂರು ಗ್ರಾಮದಲ್ಲಿ ದಲಿತ ಮಹಿಳೆಯೊಬ್ಬರು ಮೃತಪಟ್ಟಿದ್ದು, ವಿವಾದಿತ ಜಾಗದಲ್ಲೇ ಗುಂಡಿ ತೆಗೆದು ಮಹಿಳೆ ಅಂತ್ಯ ಸಂಸ್ಕಾರಕ್ಕೆ ದಲಿತರು ಮುಂದಾಗಿದ್ದರು. ವಿಷಯ ತಿಳಿದ ಒಕ್ಕಲಿಗ ಸಮುದಾಯದವರು ಸ್ಥಳಕ್ಕೆ ತೆರಳಿ ಅಂತ್ಯ ಸಂಸ್ಕಾರ ಮಾಡಲು ಮುಂದಾದವರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಜಾಗ ಒಕ್ಕಲಿಗರ ಸಮುದಾಯ ಭವನಕ್ಕೆ ಸೇರಿದೆ. ಸದರಿ ಜಾಗದ ವಿವಾದ ಪ್ರಕರಣ ನ್ಯಾಯಾಲಯದಲ್ಲಿದ್ದು ಯಾವ ಕಾರಣಕ್ಕೂಇಲ್ಲಿ ಅಂತ್ಯಸಂಸ್ಕಾರ ನಡೆಸಬಾರದು ಎಂದು ಪಟ್ಟು ಹಿಡಿದರು. ಈ ವೇಳೆ ಎರಡು ಸಮುದಾಯದವರ ನಡುವೆ ವಾಕ್ಸಮರ ನಡೆದಿದೆ.ಇದೇ ವೇಳೆ ಆಲ್ದೂರು ಗ್ರಾಪಂ ಮಾಜಿ ಅಧ್ಯಕ್ಷೆ ಪೂರ್ಣಿಮಾ ಶ್ರೀನಿವಾಸ್ ಸ್ಮಶಾನದ ಗುಂಡಿಗೆ ಇಳಿದು ಇಲ್ಲಿ ಶವ ಸಂಸ್ಕಾರ ಮಾಡಬಾರದು ಎಂದು ಪಟ್ಟು ಹಿಡಿದರು. ಆಗ ಪರಿಸ್ಥಿತಿ ಕೈಮೀರದಂತೆ ತಡೆಯಲು ಪೊಲೀಸರು ಮಹಿಳೆಯನ್ನು ಗುಂಡಿಯಿಂದ ಹೊರಗೆ ಕರೆತಂದಿದ್ದಾರೆ.
ಆಗ ದಲಿತ ಸಮಾಜದವರು ಗುಂಡಿ ಸುತ್ತಲೂ ಮಾನವ ಸರಪಳಿ ನಿರ್ಮಾಣ ಮಾಡಿಕೊಂಡು ನಿಂತು ಮಹಿಳೆ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರದ ವಿಧಿವಿದಾನ ಪೂರ್ಣಗೊಳಿಸಿದ್ದಾರೆ. ಇದರಿಂದ ಆಲ್ದೂರಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.ಇದರಿಂದ ಕೆರಳಿದ ಒಕ್ಕಲಿಗ ಸಮಾಜದವರು ಆಲ್ದೂರು ಪೊಲೀಸ್ ಠಾಣೆಗೆ ತೆರಳಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ 2 ಸಮುದಾಯದ ಜನರ ಅಹವಾಲು ಆಲಿಸಿದ್ದಾರೆ. ಆದರೂ ಪರಿಸ್ಥಿತಿ ಇನ್ನೂ ಬೂದಿ ಮುಚ್ಚಿದ ಕೆಂಡದಂತೆಯೇ ಇದೆ. ಪೊಲೀಸ್ ಠಾಣೆಯಲ್ಲಿ ಎರಡು ಸಮುದಾಯದವರು ಜಮಾಯಿಸಿದ್ದರಿಂದ ಆಲ್ದೂರಿನಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ತಹಸೀಲ್ದಾರ್ ಡಾ.ಸುಮಂತ್, ಎಎಸ್ಪಿ ಕೃಷ್ಣಮೂರ್ತಿ, ಡಿವೈಎಸ್ಪಿ ಶೈಲೇಂದ್ರ ಸೇರಿದಂತೆ ಇತರೆ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. 6 ಕೆಸಿಕೆಎಂ 5ಆಲ್ದೂರಿನ ವಿವಾದಿತ ಜಾಗದಲ್ಲಿ ಶುಕ್ರವಾರ ದಲಿತರು ಶವ ಸಂಸ್ಕಾರ ಮಾಡಲು ತೆಗೆದ ಗುಂಡಿಗೆ ಇಳಿದು ಒಕ್ಕಲಿಗ ಸಮುದಾಯದ ಮಹಿಳೆಯೋರ್ವರು ಪ್ರತಿಭಟಿಸಿದರು.