ಸಾರಾಂಶ
ಎತ್ತಿನಹೊಳೆಯಲ್ಲಿ ಹಲವು ಕಾಮಗಾರಿ ಅನಧಿಕೃತ: ಕಿಡಿ
---- ಕೇಂದ್ರದ ಸಮಿತಿ ಕಿಡಿ
--ಈಗಾಗಲೇ ಕೈಗೊಂಡ ಯೋಜನೆಗಳಲ್ಲಿ ಅನಧಿಕೃತ ಕಾಮಗಾರಿ ಆರೋಪ
ಮೊದಲ ಹಂತದ ಯೋಜನೆಯಿಂದ ಪರಿಸರದ ಮೇಲೆ ಗಂಭೀರ ಪರಿಣಾಮಕಾನೂನು ಬಾಹಿರ ಕಾಮಗಾರಿ ನಡೆಸಿದ್ದಕ್ಕೆ ಕೇಂದ್ರ ಸರ್ಕಾರ ತೀವ್ರ ಗರಂ
ಕಾಮಗಾರಿ ಪರಿಶೀಲನೆ ಬಳಿಕವೇ ಹೊಸ ಅನುಮತಿ ಬಗ್ಗೆ ಕೇಂದ್ರದ ನಿರ್ಧಾರ==
ಪಿಟಿಐ ನವದೆಹಲಿಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಸೇರಿ ದಕ್ಷಿಣ ಕರ್ನಾಟಕದ 7 ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶ ಹೊಂದಿರುವ ಎತ್ತಿನಹೊಳೆ ಏತ ನೀರಾವರಿ ಯೋಜನೆಯ ಮುಂದಿನ ಹಂತಕ್ಕೆ ಕೇಂದ್ರ ಸರ್ಕಾರ ಬ್ರೇಕ್ ಹಾಕಿದೆ. ಯೋಜನೆಯ ಮೊದಲ ಹಂತದಲ್ಲಿ ಹಲವು ಕಾಮಗಾರಿಗಳು ಅನಧಿಕೃತವಾಗಿದೆ. ಇಂಥ ಕಾಮಗಾರಿಗಳಿಂದ ಪರಿಸರದ ಮೇಲೆ ಭಾರೀ ಅನಾಹುತವಾಗಿದೆ ಎಂದು ಹೇಳಿರುವ ಕೇಂದ್ರ ಪರಿಸರ ಇಲಾಖೆಯ ಸಲಹಾ ಸಮಿತಿಯು, ಕೆಲಸಗಳನ್ನು ಆಳವಾಗಿ ಪರಿಶೀಲಿಸದ ಹೊರತೂ ಯೋಜನೆಯ ಮುಂದುವರೆದ ಭಾಗಕ್ಕೆ ಅನುಮತಿ ನೀಡದಂತೆ ಸಲಹೆ ನೀಡಿದೆ.
ಅ.27ರಂದು ನಡೆದ ನಡೆದ ಕೇಂದ್ರ ಪರಿಸರ ಇಲಾಖೆಯ ಸಭೆಯಲ್ಲಿ ಎತ್ತಿನಹೊಳೆ ಮೊದಲ ಹಂತದ ಯೋಜನೆಯ ಕುರಿತು ದಾಖಲಾದ ಹಲವು ಆರೋಪಗಳ ಕುರಿತು ಸಲಹಾ ಸಮಿತಿ ಬೆಳಕು ಚೆಲ್ಲಿದೆ. ಅದರಲ್ಲಿ, ಮೊದಲ ಹಂತದ ಯೋಜನೆಯಿಂದಾಗಿಯೇ ಜೈವಿಕವಾಗಿ ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುವ ಪಶ್ಚಿಮ ಘಟ್ಟದ ಹಲವು ಪ್ರದೇಶಗಳಲ್ಲಿ ಭೂಕುಸಿದಂಥ ಘಟನೆ ಸಂಭವಿಸಿದೆ. ಇಷ್ಟೆಲ್ಲ ಕಾಮಗಾರಿ ಹೊರತಾಗಿಯೂ ನಿಗದಿತ ಪ್ರದೇಶಕ್ಕೆ ಕುಡಿಯುವ ನೀರು ಪೂರೈಕೆ ಮಾಡುವುದು ಸಾಧ್ಯವಾಗಿಲ್ಲ. ಹೀಗಾಗಿ ಯೋಜನೆಗೆ ಮತ್ತಷ್ಟು ಅನುಮತಿಗೂ ಮುನ್ನ, ಈಗಾಗಲೇ ಕೈಗೊಂಡಿರುವ ಕಾಮಗಾರಿಯ ಪೂರ್ವಾಪರ ಪರಿಶೀಲನೆ ಅತ್ಯಂತ ಅಗತ್ಯ’ ಎಂದು ಹೇಳಿದೆ.ಯೋಜನೆ ಕುರಿತಂತೆ ಕರ್ನಾಟಕ ಸರ್ಕಾರ ಮೊದಲಿಗೆ 173.31 ಹೆಕ್ಟೇರ್ ಎಕರೆ ಅರಣ್ಯ ಭೂಮಿ ಬಳಕೆಗೆ ಅನುಮತಿ ಕೇಳಿತ್ತು. ಪರಿಷ್ಕೃತ ಪ್ರಸ್ತಾಪದಲ್ಲಿ ಅರಣ್ಯ ಭೂಮಿ ಪ್ರದೇಶವನ್ನು 11 ಹೆಕ್ಟೇರ್‌ಗೆ ಇಳಿಸಲಾಗಿದೆ. ಇನ್ನು ಈಗಾಗಲೇ ಕೈಗೊಂಡಿರುವ ಕಾಮಗಾರಿಗಳ ಪೈಕಿ 10.13 ಕಿ.ಮೀ ಉದ್ದದ ಕಾಲುವೆ ಸೇರಿದಂತೆ ಹಲವು ಕೆಲಸಗಳನ್ನು ಪೂರ್ವಾನುಮತಿ ಇಲ್ಲದೆಯೇ ನಡೆಸಲಾಗಿದೆ. ಇದು, 1980ರ ಸಂರಕ್ಷಣೆ ಮತ್ತು ಸಂವರ್ಧನ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ.
ಈ ಸಂಬಂಧ ಈಗಾಗಲೇ ಯೋಜನೆ ಕೈಗೊಂಡಿರುವ ವಿಶ್ವೇಶರಾಯ ಜಲನಿಗಮದ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. 2019ರಲ್ಲಿ ಎಫ್‌ಐಆರ್ ದಾಖಲಿಸಿದ ಬಳಿಕವೂ ಸಾಕಷ್ಟು ಕಾಮಗಾರಿ ನಡೆಸಿರುವುದು ಇತ್ತೀಚಿನ ಉಪಗ್ರಹ ಚಿತ್ರಗಳ ಮೂಲಕ ಕಂಡುಬಂದಿದೆ. ಹೀಗಾಗಿ ಇಂಥ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪರಿಸರ ಸಚಿವಾಲಯದ ಸಲಹಾ ಸಮಿತಿ ಕರ್ನಾಟಕ ಸರ್ಕಾರಕ್ಕೆ ಸೂಚಿಸಿದೆ.ಜೊತೆಗೆ, ಕಾಲುವೆ ಕಾಮಗಾರಿಗಾಗಿ 2 ರಿಂದ 18 ಮೀಟರ್‌ನಷ್ಟು ನೇರವಾಗಿ ಭೂಪ್ರದೇಶ ಕಡಿಯಲಾಗಿದೆ. ಆದರೆ ಈ ಪ್ರದೇಶದಲ್ಲಿ ಕೇವಲ 5.5 ಮೀಟರ್‌ನಷ್ಟು ಎತ್ತರಕ್ಕೆ ಮಾತ್ರವೇ ಸಿಮೆಂಟ್ ತಡೆಗೋಡೆ ಹಾಕಲಾಗಿದೆ. ಈ ಪ್ರದೇಶಗಳಲ್ಲಿ ಭಾರೀ ಇಳಿಜಾರು ನಿರ್ಮಾಣವಾಗಿದ್ದು, ಅದು ಭೂಸವಕಳಿ ಮತ್ತು ಭೂಕುಸಿತದ ಸಾಧ್ಯತೆ ಸೃಷ್ಟಿಸಿದೆ. ಇದನ್ನು ತಡೆಯಲು ರಾಜ್ಯ ಸರ್ಕಾರ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ. ಹೀಗಾಗಿ ಈ ಅಪಾಯ ತಡೆಯಲು ತಾಂತ್ರಿಕ ಮತ್ತು ಅರಣ್ಯೀಕರಣ ಒಳಗೊಂಡ ವಿಸ್ತೃತ ವರದಿ ಸಲ್ಲಿಸುವಂತೆ ಸಮಿತಿ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಇದರ ಜೊತೆಗೆ, ಕಾಮಗಾರಿ ಕೈಗೊಂಡ ಪ್ರದೇಶದಿಂದ ಹೊರತೆಗೆದ 42.3 ಲಕ್ಷ ಕ್ಯುಬಿಕ್ ಮೀಟರ್‌ನಷ್ಟು ವಸ್ತುಗಳನ್ನು 210 ಎಕರೆ ಪ್ರದೇಶದಲ್ಲಿ ಸುರಿಯಲಾಗಿದೆ. ಯೋಜನೆಯ ಉಳಿದ 6 ಕಿ.ಮೀ ಕಾಮಗಾರಿಯಿಂದ ಇನ್ನೂ 10.77 ಲಕ್ಷ ಕ್ಯುಬಿಕ್ ಮೀಟರ್‌ನಷ್ಟು ವಸ್ತು ಅರಣ್ಯಕ್ಕೆ ಸುರಿಯುವ ಸಾಧ್ಯತೆ ಇದೆ. ವಾಸ್ತವವಾಗಿ ಈ ಮಣ್ಣು ಸುರಿಯಲು ರಾಜ್ಯ ಸರ್ಕಾರ ಮೊದಲಿಗೆ 103 ಹೆಕ್ಟೇರ್ ಅರಣ್ಯ ಭೂಮಿಗೆ ಪ್ರಸ್ತಾಪ ಇಟ್ಟಿತ್ತು. ಇದು ಒಟ್ಟು ಅರಣ್ಯದಲ್ಲಿನ ಶೇ.60ಕ್ಕಿಂತ ಹೆಚ್ಚು ಪ್ರದೇಶವಾಗಿದೆ. ಆದರೆ ಸಚಿವಾಲಯದ ಆಕ್ಷೇಪದ ಬಳಿಕ ಈ ಬಳಕೆ ಪ್ರದೇಶವನ್ನು 38 ಹೆಕ್ಟೇರ್‌ಗೆ ಇಳಿಸಿತು. ಹೀಗೆ ಅರಣ್ಯ ಭೂಮಿಯನ್ನು ಮಣ್ಣು ಸುರಿಯಲು ಯಾವುದೇ ಕಾರಣಕ್ಕೂ ಬಿಡಲಾಗದು. ಇದಕ್ಕೆ ಸರ್ಕಾರ ಅನ್ಯ ಜಾಗ ಹುಡುಕಿಕೊಳ್ಳಬೇಕು ಎಂದು ಸಲಹಾ ಸಮಿತಿ ಸಭೆಗೆ ಮಾಹಿತಿ ನೀಡಿದೆ.ಇನ್ನು ಯೋಜನೆ ಸಾಗುವ ಮಾರಶೆಟ್ಟಿ ರಕ್ಷಿತ ಅರಣ್ಯವು, ಸಾಗುವಾನಿ, ಬೀಟೆ, ಶ್ರೀಗಂಧದ ಅಪರೂಪದ ಸಸ್ಯ ಸಂಕುಲವನ್ನು ಹೊಂದಿದೆ. ಯೋಜನೆ ಜಾರಿಯಾದರೆ ಇಂಥ ಸಾವಿರಾರು ಮರಗಳನ್ನು ಕಡಿಯಬೇಕಾಗಿ ಬರುತ್ತದೆ. ಅಲ್ಲದೆ ಪ್ರಸ್ತಾಪಿತ ಕಾಲುವೆಯ 18 ಮೀಟರ್ ಎತ್ತರ, 28ರಿಂದ 60 ಮೀಟರ್‌ನಷ್ಟು ಅಗಲ ಬರುತ್ತದೆ. ಇವುಗಳ ಸುತ್ತ ಸೂಕ್ತ ರೀತಿಯ ಬೇಲಿ ಅಳವಡಿಸದೇ ಹೋದಲ್ಲಿ ಆನೆ ಸೇರಿದಂತೆ ಇತರೆ ಪ್ರಾಣಿಗಳ ಜೀವಕ್ಕೆ ಅಪಾಯವಿದೆ ಎಂದು ಸಮಿತಿ ಹೇಳಿದೆ.---
7 ಜಿಲ್ಲೆಗಳಿಗೆ ನೀರು:ಹಾಸನ ಜಿಲ್ಲೆ ಸಕಲೇಶಪುರದಲ್ಲಿ ಹರಿಯುವ ಎತ್ತಿನಹೊಳೆ ನದಿಯಿಂದ ಏತ ನೀರಾವರಿ ಮೂಲಕ ಹಾಸನ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ವ್ಯಾಪ್ತಿಯ ಕೆರೆಗಳನ್ನು ತುಂಬಿಸಿ ಕುಡಿಯವ ನೀರು ಪೂರೈಸಲು ಯೋಜನೆ ರೂಪಿಸಲಾಗಿದೆ. ಯೋಜನೆ ಮೂಲಕ 24 ಟಿಎಂಸಿ ನೀರು ಹರಿಸುವ ಉದ್ದೇಶವಿದೆ.
----ಶರಾವತಿ ಪಂಪ್ಡ್ ಸ್ಟೋರೇಜ್‌ನಿಂದ ಪರಿಸರಕ್ಕೆ ಹಾನಿ- ಕೇಂದ್ರ ಪರಿಸರ ಇಲಾಖೆ ಆಕ್ಷೇಪ
===- ಯೋಜನೆಗೆ 15000 ಮರ ಬಲಿ । ಅಪರೂಪದ ಪ್ರಾಣಿಸಂಕುಲಕ್ಕೂ ಅಪಾಯ- ಭೂಸವಕಳಿ, ಭೂಕುಸಿತಕ್ಕೂ ಕಾರಣವಾಗುವ ಸಾಧ್ಯತೆ: ಸಮಿತಿ ಎಚ್ಚರಿಕೆ- ರಾಜ್ಯ ಸರ್ಕಾರಕ್ಕೆ ಹಿನ್ನಡೆ । ಪರಿಸರವಾದಿಗಳು, ಸ್ಥಳೀಯರ ಹೋರಾಟಕ್ಕೆ ಜಯ
==ಪಿಟಿಐ ನವದೆಹಲಿರಾಜ್ಯ ಸರ್ಕಾರದ ಉದ್ದೇಶಿತ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗಾಗಿ ಪರಿಸರ ಸೂಕ್ಷ್ಮ ಪ್ರದೇಶವಾದ ಪಶ್ಚಿಮ ಘಟ್ಟದ ಸುಮಾರು 54 ಹೆಕ್ಟೇರ್ ಅರಣ್ಯ ಭೂಮಿಯನ್ನು ಬಳಸುವ ಕರ್ನಾಟಕ ಸರ್ಕಾರದ ಪ್ರಸ್ತಾವವನ್ನು ಕೇಂದ್ರ ಸರ್ಕಾರ ತಡೆಹಿಡಿದಿದೆ.ಪರಿಸರ ಸಚಿವಾಲಯದ ಅರಣ್ಯ ಸಲಹಾ ಸಮಿತಿ ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ ಯೋಜನೆಯ ಜಾರಿಗೆ ಪಟ್ಟು ಹಿಡಿದಿದ್ದ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿದ್ದರೆ, ಪರಿಸರವಾದಿಗಳು ಮತ್ತು ಸ್ಥಳೀಯರ ಹೋರಾಟಕ್ಕೆ ಸದ್ಯಕ್ಕೆ ಗೆಲುವು ಸಿಕ್ಕಂತಾಗಿದೆ.ಸಮಿತಿ ಆಕ್ಷೇಪ:
ಅ.27ರಂದು ಪರಿಸರ ಸಚಿವಾಲಯದ ಅರಣ್ಯ ಸಲಹಾ ಸಮಿತಿ ಸಭೆ ನಡೆಸಿದ್ದು, ಅದರಲ್ಲಿ ಯೋಜನೆಯ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಯೋಜನೆಯು 15000ಕ್ಕೂ ಹೆಚ್ಚು ಮರಗಳ ಕಡಿತಕ್ಕೆ ಕಾರಣವಾಗುತ್ತದೆ. ಈ ಮರಗಳಲ್ಲಿ ಹಲವು ವಿಶ್ವದ 34 ಜೀವವೈವಿಧ್ಯ ಕೇಂದ್ರಗಳಲ್ಲಿ ಒಂದಾದ ಪಶ್ಚಿಮ ಘಟ್ಟಕ್ಕೆ ಮಾತ್ರವೇ ಸೀಮಿತವಾಗಿವೆ.ಯೋಜನಾ ಸ್ಥಳವು ಸಿಂಗಳೀಕ, ಹುಲಿ, ಚಿರತೆ, ಕರಡಿ, ಕಾಡು ನಾಯಿಗಳು, ಕಾಳಿಂಗ ಸರ್ಪ, ಮಲಬಾರ್ ದೊಡ್ಡ ಅಳಿಲು ಮತ್ತು ಇತರ ಅಪರೂಪದ ಹಾಗೂ ಸ್ಥಳೀಯ ಪ್ರಭೇದಗಳಿಗೆ ನೆಲೆಯಾಗಿದೆ. ಶರಾವತಿ ಕಣಿವೆ ಅಭಯಾರಣ್ಯದಲ್ಲಿ 730 ಸಿಂಗಳೀಕಗಳು ದಾಖಲಾಗಿವೆ. ಆವಾಸಸ್ಥಾನದ ನಷ್ಟವು ಇವುಗಳ ಉಳಿವಿಗೆ ಗಂಭೀರ ಅಪಾಯವನ್ನುಂಟುಮಾಡುತ್ತದೆ ಎಂದು ಸಮಿತಿ ಎಚ್ಚರಿಸಿದೆ.ಯೋಜನೆಯ ಪ್ರಸ್ತಾಪಕರು (ರಾಜ್ಯ ಸರ್ಕಾರ) ನೀಡಿದ ಪರಿಹಾರ ಅರಣ್ಯೀಕರಣ ಸ್ಥಳವು ಸಿಂಹ ಬಾಲದ ಸಿಂಗಳೀಕಗಳ ಆವಾಸಸ್ಥಾನದ ನಷ್ಟವನ್ನು ಸರಿದೂಗಿಸಲು ಸಾಧ್ಯವಿಲ್ಲ. ಶಾಶ್ವತ ಮಳೆಕಾಡುಗಳು ಸಂಕೀರ್ಣ ಪರಿಸರ ವ್ಯವಸ್ಥೆಗಳಾಗಿದ್ದು, ಅವುಗಳನ್ನು ಪುನರಾವರ್ತಿಸುವುದು ತುಂಬಾ ಕಷ್ಟ ಎಂದು ಸಮಿತಿ ಆಕ್ಷೇಪ ದಾಖಲಿಸಿದೆ.ಅಪಾಯದ ಎಚ್ಚರಿಕೆ:
ಸಮಿತಿಯು ಯೋಜನೆಯ ಎಂಜಿನಿಯರಿಂಗ್ ವಿನ್ಯಾಸವನ್ನು ಪರಿಶೀಲಿಸಿದೆ. ಈ ಯೋಜನೆಯು 2 ಜಲಾಶಯಗಳು, 3.2 ಕಿ.ಮೀ ಉದ್ದದ ಸುರಂಗಗಳು, 500 ಮೀ. ಆಳದವರೆಗೆ ಉತ್ಖನನ ಮತ್ತು ಭೂಗತ ಕಾಮಗಾರಿಗಳಿಗಾಗಿ ಡ್ರಿಲ್ಲಿಂಗ್ ಮತ್ತು ಸ್ಫೋಟ ಕಾರ್ಯಗಳನ್ನು ಒಳಗೊಂಡಿದೆ. ಈ ಪ್ರದೇಶವು ಭೂಕಂಪನ ವಲಯ 3ರ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ಇಲ್ಲಿ ಇಂಥ ಕಾರ್ಯಗಳನ್ನು ನಡೆಸುವುದು ಭೂಕುಸಿತ ಮತ್ತು ಮಣ್ಣುಸವೆತದ ಅಪಾಯಗಳನ್ನು ಹೆಚ್ಚಿಸಬಹುದು. ಇದರಿಂದಾಗಿ ಪರಿಸರಕ್ಕೆ ಮಾತ್ರವಲ್ಲದೆ ಮಾನವ ವಾಸಸ್ಥಳಗಳಿಗೂ ಅಪಾಯ ಎದುರಾಗಬಹುದು ಎಂದು ಸಮಿತಿ ಎಚ್ಚರಿಸಿದೆ.==ಏನಿದು ಯೋಜನೆ?ಶರಾವತಿಗೆ ಸಾಗರ ತಾಲೂಕಿನ ತಲಕಳಲೆಯಲ್ಲಿ ಅಣೆಕಟ್ಟು ಕಟ್ಟಲಾಗಿದೆ. ಇಲ್ಲಿ ನೀರನ್ನು ವಿದ್ಯುತ್ ಉತ್ಪಾದನೆಗಾಗಿ ಬಳಸಿಕೊಂಡು, ಮುಂದೆ ಗೇರುಸೊಪ್ಪ ಅಣೆಕಟ್ಟೆಗೆ ಬಿಡಲಾಗುತ್ತಿದೆ. ಗೇರುಸೊಪ್ಪದಲ್ಲಿಯೂ ವಿದ್ಯುತ್ ಉತ್ಪಾದಿಸಿ, ನಂತರ ಶರಾವತಿ ನದಿ ಹೊನ್ನಾವರದ ಮೂಲಕ ಅರಬ್ಬಿ ಸಮುದ್ರ ಸೇರುತ್ತದೆ. ಆದರೆ ರಾಜ್ಯ ಸರ್ಕಾರ ಉದ್ದೇಶಿಸಿರುವ ಪಂಪ್ಡ್ ಸ್ಟೋರೇಜ್ ಯೋಜನೆಯು, ಗೇರುಸೊಪ್ಪೆಯಲ್ಲಿ ವಿದ್ಯುತ್ ಉತ್ಪಾದನೆಗೆ ಬಳಕೆಯಾದ ನೀರನ್ನು ಪುನಃ ತಲಕಳಲೆಗೆ ಅಂದರೆ ಗುರುತ್ವಾಕರ್ಷಣೆಗೆ ವಿರುದ್ಧವಾಗಿ ಮೇಲ್ದಿಕ್ಕಿಗೆ ಕಳಿಸುವ ಗುರಿ ಹೊಂದಿದೆ. ಹಾಗೆ ಗೇರುಸೊಪ್ಪೆಯಿಂದ ಎತ್ತಿ ತಂದ ನೀರಿನಿಂದ ಮತ್ತೆ 2,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವುದು ಯೋಜನೆಯ ಉದ್ದೇಶ.
ಇದರಿಂದಾಗಿ ಪಶ್ಚಿಮ ಘಟ್ಟದ ಸುಮಾರು 54 ಹೆಕ್ಟೇರ್ ಅರಣ್ಯ ಭೂಮಿಗೆ ಹಾನಿಯುಂಟಾಗುತ್ತದೆ. ಇದು ಅಪರೂಪದ ವನ್ಯಜೀವಿಗಳು ಮತ್ತು ಮಾನವ ವಾಸಸ್ಥಾನಕ್ಕೂ ಅಪಾಯ ತಂದೊಡ್ಡುತ್ತದೆ ಎಂದು ಆತಂಕ ವ್ಯಕ್ತಪಡಿಸಿ ಸ್ಥಳೀಯರು ಮತ್ತು ಪರಿಸರವಾದಿಗಳು ಹೋರಾಟ ಆರಂಭಿಸಿದ್ದರು. ಕೇಂದ್ರದ ನಿರ್ಣಯದಿಂದ ಅವರ ಹೋರಾಟಕ್ಕೆ ಜಯ ದೊರಕಿದೆ.---;Resize=(128,128))