ಸಾರಾಂಶ
- ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಪಿಎಸ್‌ಐ ಕುಮಾರ್
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ವಿದ್ಯಾರ್ಥಿಗಳು ತಮ್ಮ ಈಗಿರುವ ವಯಸ್ಸಿಗಿಂತ 10 ವರ್ಷ ಮುಂಚಿತವಾಗಿ ಯೋಚನೆ ಮಾಡುವುದನ್ನು ಕಲಿಯಬೇಕು. ಪ್ರತಿ ಕ್ಷಣವೂ ಮುಂದೆ ಏನು ಎನ್ನುವ ಪ್ರಶ್ನೆ ನಮಗೆ ನಾವೇ ಹಾಕಿಕೊಳ್ಳಬೇಕು ಎಂದು ಪಿಎಸ್‌ಐ ಕುಮಾರ್ ಹೇಳಿದರು.ಶುಕ್ರವಾರ ಪಟ್ಟಣದ ಶ್ರೀ ಮೃತ್ಯುಂಜಯ ಶಿವಾಚಾರ್ಯ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಭಾಂಗಣದಲ್ಲಿ 2025-26ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್ ಮತ್ತು ವಿವಿಧ ವೇದಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಸ್ಪಷ್ಟ ಗುರಿ ನಿರ್ಧಾರ ಮಾಡಿಕೊಳ್ಳಬೇಕು. ಅದಕ್ಕೆ ತಕ್ಕ ಶ್ರಮ ಹಾಕಬೇಕು. ಆಗ ಮಾತ್ರ ತಮ್ಮ ಪ್ರಯತ್ನ ಫಲ ನೀಡುತ್ತದೆ. ಇತ್ತೀಚೆಗೆ ಫೋಕ್ಸೋ ಕೇಸುಗಳು ತುಂಬಾ ಜಾಸ್ತಿಯಾಗುತ್ತಿವೆ. ಇದಕ್ಕೆ ಯಾರು ಕಾರಣ? ಫೋಕ್ಸೋ ಕೇಸ್ ಬಗ್ಗೆ ಗಂಡು, ಹೆಣ್ಣುಮಕ್ಕಳು ಎಚ್ಚರಿಕೆಯಿಂದ (ಅಲರ್ಟ್) ಇರಬೇಕು ಎಂದು ಎಚ್ಚರಿಸಿದರು.ಶ್ರೀ ಚನ್ನಪ್ಪಸ್ವಾಮಿ ವಿದ್ಯಾಪೀಠದ ಅಧ್ಯಕ್ಷರಾದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶಿಕ್ಷಣದಲ್ಲಿ ಸಂಸ್ಕೃತಿ, ಸಂಸ್ಕಾರವನ್ನು ಕಾಣಬೇಕು, ವಿದ್ಯಾರ್ಥಿ ದೆಸೆಯಲ್ಲಿ ಜ್ಞಾನಾರ್ಜನೆ, ವಿದ್ಯಾರ್ಜನೆ ನಿಮ್ಮ ಉದ್ದೇಶವಾಗಿರಬೇಕು. ಹೊರಗಡೆ ಆಡುವ ಮಾತುಕತೆಗಳು ಒಣಹರಟೆ ಆಗುತ್ತವೆ. ಅದೇ ವಿಚಾರಗಳನ್ನು ವೇದಿಕೆಗಳಲ್ಲಿ, ಚರ್ಚೆಗಳಲ್ಲಿ, ಸ್ಪರ್ಧೆಗಳಲ್ಲಿ ಆಡುವ ಮೂಲಕ ಜ್ಞಾನಸಂಪತ್ತನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
ವಿದ್ಯಾಪೀಠದ ಕಾರ್ಯದರ್ಶಿ ಚನ್ನಯ್ಯ ಬೆನ್ನೂರುಮಠ ಮಾತನಾಡಿದರು. ಉಪನ್ಯಾಸಕ ಹಾಗೂ ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಕೆ.ನಾಗೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೊಲ್ಲರಹಳ್ಳಿ ಮಂಜುನಾಥ್ ಉಪನ್ಯಾಸ ನೀಡಿದರು. ವಿದ್ಯಾಪೀಠದ ನಿರ್ದೇಶಕ ಎಂ.ಮಾದಪ್ಪ, ಸಾಂಸ್ಕೃತಿಕ ಸಂಚಾಲಕ ಕೆ.ಶಾಂತರಾಜ್, ಅಧೀಕ್ಷಕ ಲೋಕೇಶ್ವರ್, ಸಹಾಯಕ ಪ್ರಾಧ್ಯಾಪಕ ಡಾ.ಬಸವರಾಜಪ್ಪ, ಕುಮಾರ ನಾಯ್ಕ, ದೈಹಿಕ ಶಿಕ್ಷಣ ಶಿಕ್ಷಕ ಪ್ರಕಾಶ ನರಗಟ್ಟಿ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ಸತೀಶ್ ಕಾರ್ಯಕ್ರಮ ನಡೆಸಿಕೊಟ್ಟರು.- - -
(ಕೋಟ್) ಹದಿಹರೆಯದ ಯುವಕರು ಬಸ್ಸುಗಳಿಲ್ಲ ಎಂದು ನೆಪವೊಡ್ಡಿ ಬೈಕ್‌ನಲ್ಲಿ ಮೂರು ಜನ ಓಡಾಡುತ್ತಾರೆ. ಇದರಿಂದ ಅಪಘಾತಗಳು ಸಹಜವಾಗಿ ಹೆಚ್ಚಾಗುತ್ತವೆ. ರಸ್ತೆಯ ಮೇಲೆ ನಿಮ್ಮ ರಕ್ತ ಚೆಲ್ಲಬೇಡಿ, ಒಂದು ಜೀವ ಉಳಿಸುವಲ್ಲಿ ಮಾತ್ರ ನಿಮ್ಮ ರಕ್ತ ಕೊಡಿ. ಎಲ್ಲರೂ ಹೆಲ್ಮೆಟ್ ಹಾಕಿ ಅಪಘಾತ ತಪ್ಪಿಸಿ ಎಂದ ಅವರು, ನಿಮ್ಮ ಮನೋರಂಜನೆ ಪ್ರಾಣಕ್ಕೆ ಕುತ್ತು ತರಬಾರದು.- ಕುಮಾರ್, ಪಿಎಸ್‌ಐ.
- - --8ಎಚ್.ಎಲ್.ಐ2.ಜೆಪಿಜಿ:
ಸಮಾರಂಭವನ್ನು ಡಾ. ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು.;Resize=(128,128))