ಸಾರಾಂಶ
ಕನಕಪುರ: ನಗರದ ಚನ್ನಬಸಪ್ಪ ವೃತ್ತದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ನಿವೇಶನದಲ್ಲಿ ಕಾಂಗ್ರೆಸ್ ಪಕ್ಷದ ನೂತನ ವಾಣಿಜ್ಯ ಮಳಿಗೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಮಾಜಿ ಸಂಸದ, ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಭೂಮಿಪೂಜೆ ನೆರವೇರಿಸಿದರು.
ಸ್ವಾತಂತ್ರ್ಯ ನಂತರದಲ್ಲಿ ಇದೇ ಚೆನ್ನಬಸಪ್ಪ ವೃತ್ತದಲ್ಲಿ ಕಾಂಗ್ರೆಸ್ ಪಕ್ಷ ಕಚೇರಿಯನ್ನು ತೆರೆದಿತ್ತು. ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಆ ಜಾಗ ತನಗೆ ಸೇರಿದ್ದೆಂದು ಜೆಡಿಎಸ್ ಅಲ್ಲಿ ಕಚೇರಿ ನಿರ್ಮಿಸಿಕೊಂಡಿತ್ತು. ಕಾಂಗ್ರೆಸ್ ಪಕ್ಷ ಆ ಜಾಗ ತನಗೆ ಸೇರಿದ್ದೆಂದು ಹೋರಾಟ ನಡೆಸಿತು. ಜಾಗದ ಮಾಲೀಕತ್ವ ವಿಚಾರವಾಗಿ ಎರಡು ಪಕ್ಷಗಳಲ್ಲಿ ವಿವಾದ ಉಂಟಾಗಿತ್ತು. ಕಾಂಗ್ರೆಸ್ ಪಕ್ಷ ಜಾಗದ ಮಾಲೀಕತ್ವಕ್ಕಾಗಿ ಕೋರ್ಟ್ ಮೊರೆ ಹೋಗಿತ್ತು. ನ್ಯಾಯಾಲಯದಲ್ಲಿ ಅಂತಿಮವಾಗಿ ಆ ಜಾಗ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೆಂದು ತೀರ್ಪು ನೀಡಿದ್ದರಿಂದ ಜಾಗದ ಮಾಲೀಕತ್ವದ ಸಮಸ್ಯೆ ಇತ್ಯರ್ಥವಾಗಿತ್ತು. ಆದರೆ ಈಗಾಗಲೇ ಕಾಂಗ್ರೆಸ್ ಪಕ್ಷದ ಕನಕಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಚೇರಿಯನ್ನು ನಿರ್ಮಾಣ ಮಾಡಿದ್ದರಿಂದ ಅಂತಿಮವಾಗಿ ಹಳೆ ಕಾಂಗ್ರೆಸ್ ಕಚೇರಿ ಜಾಗದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಲು ಪಕ್ಷ ತೀರ್ಮಾನಿಸಿದೆ. ಬಹುಕೋಟಿ ವೆಚ್ಚದಲ್ಲಿ 3 ಅಂತಸ್ತಿನ ವಾಣಿಜ್ಯ ಮಳಿಗೆ ನಿರ್ಮಾಣ ಕಾಮಗಾರಿಗೆ ಸಹಸ್ರಾರು ಮುಖಂಡರ ಸಮ್ಮುಖದಲ್ಲಿ ಭೂಮಿಪೂಜೆ ನೆರವೇರಿಸಿದರು.ಬಳಿಕ ಮಾತನಾಡಿದ ಇದು ಕಾಂಗ್ರೆಸ್ ಪಕ್ಷದ ಆಸ್ತಿಯಾಗಿದ್ದು ಇಲ್ಲಿ ವಾಣಿಜ್ಯ ಮಳಿಗೆಯನ್ನು ನಿರ್ಮಾಣ ಮಾಡಲಾಗುವುದು, ಅದರಿಂದ ಕಾಂಗ್ರೆಸ್ ಪಕ್ಷದ ಆರ್ಥಿಕ ಪ್ರಗತಿಗೆ ಮುಂದೆ ಸಹಾಯವಾಗಲಿದೆ. ಕನಕಪುರ ತಾಲೂಕಿನ ಪಕ್ಷದ ಕಾರ್ಯಕರ್ತರು, ಮುಖಂಡರು ಸ್ವ ಇಚ್ಛೆಯಿಂದ ಧನಸಹಾಯ ಮಾಡಬೇಕು. ಇಷ್ಟೇ ಕೊಡಬೇಕೆಂದೇನಿಲ್ಲ, ತಮ್ಮ ಕೈಲಾದಷ್ಟು ಸಹಾಯ ಮಾಡಿ ಎಂದು ತಿಳಿಸಿದರು.
ಈ ವೇಳೆ ವಿಧಾನ ಪರಿಷತ್ ಸದಸ್ಯ ಎಸ್.ರವಿ, ಆರ್‌ಇಎಸ್ ಅಧ್ಯಕ್ಷ ಎಚ್.ಕೆ.ಶ್ರೀಕಂಠ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂಡಿ ವಿಜಯ ದೇವ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್, ಕನಕಪುರ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಆರ್.ಮಧು, ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಮುತ್ತುರಾಜು, ಸಾತನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಜೆ.ನಾಗರಾಜು ಜಿಪಂ, ತಾಪಂ ಮಾಜಿ ಅಧ್ಯಕ್ಷರು, ಸದಸ್ಯರು, ನಗರಸಭೆ ಅಧ್ಯಕ್ಷರು ಸದಸ್ಯರು, ಕಾಂಗ್ರೆಸ್ ಮುಖಂಡರು ಭೂಮಿಪೂಜೆಯಲ್ಲಿ ಉಪಸ್ಥಿತರಿದ್ದರು.56 ಲಕ್ಷ ಸಂಗ್ರಹ: ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಮುಖಂಡರು 1 ಸಾವಿರದಿಂದ, 1 ಲಕ್ಷದವರೆಗೆ ವಾಣಿಜ್ಯ ಮಳಿಗೆಗಳ ಕಟ್ಟಡ ನಿರ್ಮಾಣಕ್ಕೆ ದೇಣಿಗೆ ನೀಡಿದರು. ಒಂದೇ ದಿನಕ್ಕೆ ಸ್ಥಳದಲ್ಲಿಯೇ 56 ಲಕ್ಷ ಹಣ ಸಂಗ್ರಹವಾಯಿತು.
(ಫೋಟೋ ಕ್ಯಾಫ್ಷನ್)ಕನಕಪುರದ ಚನ್ನಬಸಪ್ಪ ವೃತ್ತದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ನಿವೇಶನದಲ್ಲಿ ಕಾಂಗ್ರೆಸ್ ಪಕ್ಷದ ನೂತನ ವಾಣಿಜ್ಯ ಮಳಿಗೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಮಾಜಿ ಸಂಸದ, ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಭೂಮಿಪೂಜೆ ನೆರವೇರಿಸಿದರು.
;Resize=(128,128))