ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2026-27ರ ಕೇಂದ್ರ ಬಜೆಟ್ ಬಲಿಷ್ಠ ಸ್ವಾವಲಂಬಿ ಬಜೆಟ್ ಆಗಿದ್ದು, ಮುಂದಿನ 25 ವರ್ಷಗಳನ್ನು ಗಮನದಲ್ಲಿಟ್ಟು ಮಾಡಿದ ವಿಕಸಿತ ಭಾರತದ ಸಂಕಲ್ಪವಿರುವ ಕರ್ತವ್ಯಪರ ಬಜೆಟ್ ಆಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2026-27ರ ಕೇಂದ್ರ ಬಜೆಟ್ ಬಲಿಷ್ಠ ಸ್ವಾವಲಂಬಿ ಬಜೆಟ್ ಆಗಿದ್ದು, ಮುಂದಿನ 25 ವರ್ಷಗಳನ್ನು ಗಮನದಲ್ಲಿಟ್ಟು ಮಾಡಿದ ವಿಕಸಿತ ಭಾರತದ ಸಂಕಲ್ಪವಿರುವ ಕರ್ತವ್ಯಪರ ಬಜೆಟ್ ಆಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ತವ್ಯ ಭವನದಿಂದ ಕರ್ತವ್ಯಪರವಾದ ಈ ಬಜೆಟ್ ಅಭಿವೃದ್ಧಿಯ ವೇಗ ಹೊಂದಿದ್ದು, ಜನ ಕೇಂದ್ರಿತ ಸಾಮರ್ಥ್ಯವನ್ನು ವೃದ್ಧಿಪಡಿಸುವ ಬಜೆಟ್ ಆಗಿದೆ. 2047ರ ಇಸವಿಗೆ ಜಗತ್ತಿನ ದೊಡ್ಡ ಆರ್ಥಿಕಶಕ್ತಿಯಾಗಿ ಭಾರತ ಬರಲಿದ್ದು, ಜನಪರ ಸುಧಾರಣೆ ದೃಷ್ಠಿಯಿಂದ ಮತ್ತು ಗ್ರಾಮೀಣಾಭಿವೃದ್ಧಿಯನ್ನು ಚಿಂತಿಸಿ ಈ ಬಜೆಟ್ಟನ್ನು ಮಂಡಿಸಲಾಗಿದೆ ಎಂದರು.
ಜನಪ್ರತಿನಿಧಿಯಾಗಿ ಕೇಂದ್ರ ಸರ್ಕಾರದ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನತೆಗೆ ಮುಟ್ಟಿಸುವುದು ನನ್ನ ಕರ್ತವ್ಯವಾಗಿದೆ. ಈ ಬಜೆಟ್‌ನಲ್ಲಿ ದೀರ್ಘಾವಧಿಯ ಯೋಚನೆಯಿದೆ. ವಿಕಸಿತ ಭಾರತದ ದೃಷ್ಟಿಯಿಂದ ಮೂಲಭೂತ ಸೌಲಭ್ಯಕ್ಕೆ 12.2 ಲಕ್ಷ ಕೋಟಿ ಇಡಲಾಗಿದೆ. ಹಿಂದಿನ ಸರ್ಕಾರದ ಅವಧಿಗಿಂತ ಇದು ಏಳುಪಟ್ಟು ಹೆಚ್ಚಳವಾಗಿದೆ. ಇಡೀ ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಭಾರತಕ್ಕೆ ಅಗತ್ಯವಾದ ಬಯೋ ಉತ್ಪಾದನೆಗಳು ವೈದ್ಯಕೀಯ ಪ್ರವಾಸೋದ್ಯಮ, 5 ಪ್ರಾದೇಶಿಕ ಸಂಶೋಧನಾ ಕೇಂದ್ರಗಳು, ಕ್ಯಾನ್ಸರ್‌ನಿಂದ ಬಳಲುತ್ತಿರುವ ಬಡದೇಶವಾಸಿಗಳಿಗೆ ಕ್ಯಾನ್ಸರ್ ಚಿಕಿತ್ಸೆಗೆ ಅವಶ್ಯಕವಾದ 17 ಜೀವ ಉಳಿಸುವ ಔಷಧಿಗಳಿಗೆ ಸುಂಕ ಕಡಿತಗೊಳಿಸಲಾಗಿದ್ದು, ಆಯುರ್ವೇದ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.ಮಹಿಳಾ ಸಬಲೀಕರಣಕ್ಕಾಗಿ ಸೀಮಾರ್ಟ್ ಸ್ಥಾಪಿಸಿ, ಗ್ರಾಮೀಣ ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ. ಎಂ.ಎಸ್.ಎಂ.ಇ. ಮೇಲ್ದರ್ಜೆಗೇರಿಸಲು ಪ್ರಯತ್ನಿಸಲಾಗಿದೆ. 27 ಯೋರೋಪಿನ್ ದೇಶಗಳು ಮತ್ತು ಯುಎಸ್‌ಎ ಜೊತೆಗೆ ಮಾಡಿದ ಒಪ್ಪಂದಗಳು ದೇಶದ ಅಭಿವೃದ್ಧಿಗೆ ಕಾರಣವಾಗಲಿದೆ. ಇಷ್ಟೆಲ್ಲಾ ಅಭಿವೃದ್ಧಿಪರ ಬಜೆಟ್ ಮಂಡಿಸಿದ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯದ ಮುಖ್ಯಮಂತ್ರಿ ಅಸಬಂದ್ಧವಾಗಿ ಟೀಕಿಸುತ್ತಿದ್ದಾರೆ ಎಂದು ಆರೋಪಿಸಿದರು.
ವಿಬಿಜಿ ರಾಮ್-ಜಿ ಯೋಜನೆಗೆ ಈಗಾಗಲೇ ಕೇಂದ್ರ 1.25 ಲಕ್ಷ ಕೋಟಿ ರು. ತೆಗೆದಿರಿಸಿದ್ದು ಮನರೇಗಾ ಯೋಜನೆಯ ಬಾಕಿ ಪಾವತಿಗೆ 25 ಸಾವಿರ ಕೋಟಿ ತೆಗೆದಿರಿಸಿದ್ದು, 16ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಹಿಂದೆ ನೀಡುತ್ತಿದ್ದ 3.6 ಶೇಕಡದಿಂದ ಈಗ 4.12 ಶೇ. ಹಣಕಾಸು ಅನುದಾನ ಹೆಚ್ಚಳವಾಗಿದ್ದು, ರಾಜ್ಯಕ್ಕೆ ಪ್ರತಿವರ್ಷ 7838 ಕೋಟಿ ಹೆಚ್ಚುವರಿಯಾಗಿ ದೊರೆಯಲಿದೆ ಎಂದರು.ವಿರೋಧ ಪಕ್ಷವಾದ ಕಾಂಗ್ರೆಸ್ ಸಂವಿಧಾನಕ್ಕೆ ಕಳಂಕ ತರುವ ಕೆಲಸ ಮಾಡುತ್ತಿದ್ದು, ದೇಶದ ಅಭಿವೃದ್ಧಿಗೆ ಹಿನ್ನಡೆಯಾಗುವಂತೆ ವರ್ತನೆ ತೋರುತ್ತಿದೆ ಎಂದ ಅವರು ಆಕ್ರೋಶ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಶಾಸಕ ಡಾ.ಧನಂಜಯ ಸರ್ಜಿ, ಡಿ.ಎಸ್. ಅರುಣ್, ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಪ್ರಮುಖರಾದ ಮಾಲತೇಶ್, ಹರೀಶ್‌ನಾಯ್ಕ, ಶಿವರಾಜ್, ರಾಜೇಶ್‌ಕಾಮತ್, ದಿವಾಕರಶೆಟ್ಟಿ, ಎಸ್. ಚಂದ್ರಶೇಖರ್ ಇದ್ದರು.