ದಾವಣಗೆರೆ ಪಾಲಿಕೆ ನೂತನ ಮೇಯರ್ ಚಮನ್‌ ಸಾಬ್‌

| Published : Sep 28 2024, 01:16 AM IST

ಸಾರಾಂಶ

ದಾವಣಗೆರೆ ಮಹಾ ನಗರ ಪಾಲಿಕೆ ನೂತನ ಮೇಯರ್ ಆಗಿ ಕಾಂಗ್ರೆಸ್ ಪಕ್ಷದ 14ನೇ ವಾರ್ಡ್‌ನ ಕೆ.ಚಮನ್ ಸಾಬ್‌ ಹಾಗೂ ಉಪ ಮೇಯರ್ 18ನೇ ವಾರ್ಡ್ ಸದಸ್ಯ ಶಾಂತಕುಮಾರ ಸೋಗಿ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ನಿರೀಕ್ಷೆಯಂತೆ ದಾವಣಗೆರೆ ಮಹಾ ನಗರ ಪಾಲಿಕೆ ನೂತನ ಮೇಯರ್ ಆಗಿ ಕಾಂಗ್ರೆಸ್ ಪಕ್ಷದ 14ನೇ ವಾರ್ಡ್‌ನ ಕೆ.ಚಮನ್ ಸಾಬ್‌ ಹಾಗೂ ಉಪ ಮೇಯರ್ 18ನೇ ವಾರ್ಡ್ ಸದಸ್ಯ ಶಾಂತಕುಮಾರ ಸೋಗಿ ಆಯ್ಕೆಯಾಗಿದ್ದಾರೆ. ನಗರದ ಪಾಲಿಕೆ ಸಭಾಂಗಣದಲ್ಲಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್‌ ಅಧ್ಯಕ್ಷತೆಯಲ್ಲಿ ನಡೆದ ಮೇಯರ್-ಮೇಯರ್ ಚುನಾವಣೆಯಲ್ಲಿ ಬಿಸಿಎಂ ಎ ವರ್ಗಕ್ಕೆ ಮೀಸಲಾಗಿದ್ದ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಕೆ.ಚಮನ್ ಸಾಬ್‌, ಬಿಜೆಪಿಯಿಂದ ಕೆ.ಪ್ರಸನ್ನಕುಮಾರ ಹಾಗೂ ಬಿಸಿಎಂ ಬಿ ವರ್ಗಕ್ಕೆ ಮೀಸಲಾಗಿದ್ದ ಉಪ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಶಾಂತಕುಮಾರ ಸೋಗಿ, ಬಿಜೆಪಿಯಿಂದ ಮಾಜಿ ಮೇಯರ್ ಎಸ್.ಟಿ.ವೀರೇಶ ಸ್ಪರ್ಧಿಸಿದ್ದರು.

ಮೇಯರ್-ಉಪ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ಸಿನ ಇಬ್ಬರೂ ಅಭ್ಯರ್ಥಿಗಳು ಸಂಸದರು, ಸಚಿವರು, ಶಾಸಕರು, ವಿಪ ಸದಸ್ಯರು ಸೇರಿದಂತೆ ಒಟ್ಟು 30 ಮತ ಪಡೆದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಮೇಯರ್-ಉಪ ಮೇಯರ್ ಸ್ಥಾನದ ಅಭ್ಯರ್ಥಿಗಳು ತಲಾ 17 ಮತ ಗಳಿಸುವುದರೊಂದಿಗೆ 13 ಮತಗಳ ಅಂತರದ ಜಯದೊಂದಿಗೆ ಮೇಯರ್‌, ಉಪ ಮೇಯರ್ ಪಟ್ಟ ಕಾಂಗ್ರೆಸ್ ಗಿಟ್ಟಿಸಿಕೊಂಡಿತು. ಇಲ್ಲಿನ 14ನೇ ವಾರ್ಡ್‌ನಿಂದ ಪಾಲಿಕೆಗೆ ಸತತವಾಗಿ ಆಯ್ಕೆಯಾದ ಕೆ.ಚಮನ್ ಸಾಬ್ ತಮಗೆ ಮೇಯರ್ ಸ್ಥಾನ ನೀಡುವಂತೆ ಪ್ರಬಲ ಆಕಾಂಕ್ಷಿಯಾಗಿ ವರಿಷ್ಟರಿಗೆ ಮನವಿ ಮಾಡಿದ್ದರು. ಅಲ್ಲದೇ, ಅಭಿವೃದ್ಧಿ ಕಾರ್ಯಗಳ ಬಗ್ಗೆ ತಮ್ಮದೇ ದೂರದೃಷ್ಟಿತ್ವ, ಎಲ್ಲಾ ಜಾತಿ, ಸಮುದಾಯಗಳ ಜನರೊಂದಿಗಿನ ಒಡನಾಟ, ಸದಸ್ಯರೊಂದಿಗೆ, ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಬೆರೆಯುವ ಗುಣವೇ ಚಮನ್‌ರಿಗೆ ಮೇಯರ್ ಪಟ್ಟದ ಹಾದಿ ಸುಗಮವಾಗಲು ಕಾರಣವಾಯಿತು ಎನ್ನಲಾಗಿದೆ.

ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದಿದ್ದ ಶಾಂತಕುಮಾರ ಸೋಗಿ ಲೋಕಸಭೆ ಚುನಾವಣೆ ಮುನ್ನ ಕಾಂಗ್ರೆಸ್‌ ಜೊತೆಗೆ ಗುರುತಿಸಿಕೊಂಡಿದ್ದರು. ಪಕ್ಷ ಬದಲಿಸಿದ್ದಕ್ಕೆ ಉಪ ಮೇಯರ್ ಪಟ್ಟವು ಸಿಕ್ಕ ಸಂಭ್ರಮದಲ್ಲಿ ಶಾಂತಕುಮಾರ ಲವಲವಿಕೆಯಿಂದಿದ್ದರು. ಬಿಸಿಎಂ ಬಿ ವರ್ಗಕ್ಕೆ ಮೀಸಲಾಗಿದ್ದ ಉಪ ಮೇಯರ್ ಸ್ಥಾನಕ್ಕೆ ಸೋಗಿ ಶಾಂತಕುಮಾರ ಅಚ್ಚರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರೂ, ಬಿಜೆಪಿಯಲ್ಲಿ ಯಾವುದೇ ಸ್ಥಾನಮಾನ ಕೊಡಲಿಲ್ಲ. ನಾವು ನೋಡಿ ಉಪ ಮೇಯರ್ ಮಾಡಿದ್ದೇವೆಂಬ ಸಂದೇಶವನ್ನು ಎದುರಾಳಿ ಬಿಜೆಪಿಗೆ ರವಾನಿಸುವಂತೆ ಕಾಂಗ್ರೆಸ್ ಉಪ ಮೇಯರ್ ಪಟ್ಟ ಕಟ್ಟಿ, ಗೆಲ್ಲಿಸಿಕೊಂಡಿದೆ. ಅಲ್ಲದೇ, ಹಳೆ ಭಾಗದ ಕಾಯಿಪೇಟೆ, ಸ್ವಾಗೇರಪೇಟೆ ಭಾಗದಲ್ಲಿ ಹೆಚ್ಚಾಗಿರುವ ಪ್ರಬಲ ಪಂಚಮಸಾಲಿ ಸಮುದಾಯದವರು, ಮೇಯರ್, ಉಪ ಮೇಯರ್ ಸ್ಥಾನ ನೀಡಿದ್ದು ಬರಲಿರುವ ಪಾಲಿಕೆ ಚುನಾವಣೆ ಗಮನದಲ್ಲಿಟ್ಟುಕೊಂಡು ಎಂಬುದೂ ಅಷ್ಟೇ ಸ್ಪಷ್ಟವಾಗಿದೆ.

ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ವಿಪ ಸದಸ್ಯ ಕೆ.ಅಬ್ದುಲ್ ಜಬ್ಬಾರ್ ಸೇರಿದಂತೆ ಕಾಂಗ್ರೆಸ್‌ ಅಭ್ಯರ್ಥಿಗಳೆಲ್ಲರೂ ತಮ್ಮ ವರಿಷ್ಟರು ಸೂಚಿಸಿದ ಮೇಯರ್, ಉಪ ಮೇಯರ್ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ಕಾಂಗ್ರೆಸ್ಸಿನ ಪಾಳೆಯದಲ್ಲಿ ನಗು ಬೀರಲು ಕಾರಣರಾದರು. ಅತ್ತ ಲೋಕಸಭೆ ಚುನಾವಣೆ, ವಿಧಾನಸಭೆ ಚುನಾವಣೆ ಮುನ್ನ ಕಾಂಗ್ರೆಸ್ ಸೇರಿದ್ದ ಜೆ.ಎನ್.ಶ್ರೀನಿವಾಸ, ಶ್ವೇತಾ ಶ್ರೀನಿವಾಸ, ಎಲ್.ಡಿ.ಗೋಣೆಪ್ಪ ಸಹ ಕಾಂಗ್ರೆಸ್‌ ಪರ ನಿಲ್ಲುವ ಮೂಲಕ ಬಿಜೆಪಿಗೆ ನಿರಾಸೆಯನ್ನುಂಟು ಮಾಡಿದ್ದು ಸುಳ್ಳಲ್ಲ.

ಪಾರದರ್ಶಕ ಆಡಳಿತಕ್ಕೆ ಒತ್ತು: ಮೇಯರ್ ಕೆ.ಚಮನ್‌

ದಾವಣಗೆರೆ ಮಹಾ ನಗರ ಸಮಗ್ರ ಅಭಿವೃದ್ಧಿಗೆ, ಜನರಿಗೆ ಅತ್ಯಗತ್ಯ ಮೂಲ ಸೌಕರ್ಯ ಕಲ್ಪಿಸುವ ಜೊತೆಗೆ ಪಾಲಿಕೆಯಲ್ಲಿ ಪಾರದರ್ಶಕ ಆಡಳಿತ ನೀಡುವುದಾಗಿ ನೂತನ ಮೇಯರ್ ಕೆ.ಚಮನ್ ಸಾಬ್ ಮಹಾ ಜನತೆಗೆ ಭರವಸೆ ನೀಡಿದ್ದಾರೆ.ಇಲ್ಲಿನ ಪಾಲಿಕೆಯಲ್ಲಿ ನೂತನ ಮೇಯರ್ ಆಗಿ ಆಯ್ಕೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪಾಲಿಕೆ 4 ತಿಂಗಳು 20 ದಿನಗಳ ಅವದಿಯಲ್ಲಿ ಸಂಸದರು, ಶಾಸಕರು, ಸದಸ್ಯರು, ಎಲ್ಲರ ಸಹಕಾರದಲ್ಲಿ ಅತ್ಯಂತ ಪಾರದರ್ಶಕ ಆಡಳಿತ ನೀಡುತ್ತೇವೆ. ನೀರು, ಚರಂಡಿ, ರಸ್ತೆ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದರು.

ಕಾಂಗ್ರೆಸ್ ಅಧಿಕಾರಾವದಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಜಿಲ್ಲಾ ಕೇಂದ್ರದಲ್ಲಿ ಜಲಸಿರಿ ಯೋಜನೆ ಕಾಮಗಾರಿಗಾಗಿ ರಸ್ತೆ ಅಗೆಯಲಾಗಿದೆ. ಇನ್ನೊಂದು ತಿಂಗಳಲ್ಲೇ ಆ ಎಲ್ಲಾ ಗುಂಡಿಗಳನ್ನು ಮುಚ್ಚಿಸಿ, ಹಿಂದೆ ಸಚಿವ ಎಸ್ಸೆಸ್ ಮಲ್ಲಿಕಾರ್ಜುನವರು ಮಾಡಿಸಿದ್ದ ಸಿಸಿ ರಸ್ತೆಗಳಂತೆ ರಸ್ತೆಗಳ ನಿರ್ಮಾಣ ಮಾಡಲಾಗುವುದು. ಹಿರಿಯ ನಾಯಕರಾದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಎಲ್ಲಾ ಸದಸ್ಯರು ಇಂದು ನಾನು ಮೇಯರ್ ಆಗಲು ಕಾರಣರಾಗಿದ್ದಾರೆ. ಆ ಎಲ್ಲರಾ ವಿಶ್ವಾಸದಂತೆ ಉತ್ತಮವಾಗಿ ಕೆಲಸ ಮಾಡುತ್ತೇನೆ. ಶಾಸಕರು, ಸಚಿವರು, ಸಂಸದರ ಮಾರ್ಗದರ್ಶನದಲ್ಲಿ ಮಾದರಿ ಮಹಾ ನಗರ ಮಾಡುವ ಗುರಿ ನಮ್ಮದು ಎಂದು ಮೇಯರ್ ಕೆ.ಚಮನ್ ಸಾಬ್‌ ಹೇಳಿದರು.