ಕೋವಿಡ್ ಅವಧಿಯಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದ್ದ ಆಕ್ಸಿಜನ್ ದುರಂತ ಹಾಗೂ 30ಕ್ಕೂ ಹೆಚ್ಚು ಮಂದಿ ಸಾವಿನ ಕಾರಣ ಕುರಿತ ಅಂತಿಮ ತನಿಖಾ ವರದಿಯನ್ನು ನಿವೃತ್ತ ನ್ಯಾ.ಮೈಕಲ್ ಡಿ. ಕುನ್ಹಾ ನೇತೃತ್ವದ ಸಮಿತಿ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ.
ಬೆಂಗಳೂರು : ಕೋವಿಡ್ ಅವಧಿಯಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದ್ದ ಆಕ್ಸಿಜನ್ ದುರಂತ ಹಾಗೂ 30ಕ್ಕೂ ಹೆಚ್ಚು ಮಂದಿ ಸಾವಿನ ಕಾರಣ ಕುರಿತ ಅಂತಿಮ ತನಿಖಾ ವರದಿಯನ್ನು ನಿವೃತ್ತ ನ್ಯಾ.ಮೈಕಲ್ ಡಿ. ಕುನ್ಹಾ ನೇತೃತ್ವದ ಸಮಿತಿ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ.
ಆಕ್ಸಿಜನ್ ಕೊರತೆಯಿಂದ 36 ಮಂದಿ ಮೃತಪಟ್ಟಿದ್ದರು
ಐದು ವರ್ಷಗಳ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಕ್ಸಿಜನ್ ಕೊರತೆಯಿಂದ 36 ಮಂದಿ ಮೃತಪಟ್ಟಿದ್ದರು. ಇದರಲ್ಲಿ 32 ಮಂದಿ ಅಧಿಕೃತವಾಗಿ ಆಕ್ಸಿಜನ್ ಕೊರತೆಯಿಂದಲೇ ಸಾವಿಗೀಡಾಗಿದ್ದಾಗಿ ಸಾಬೀತಾಗಿತ್ತು. ಇದು ದೊಡ್ಡ ವಿವಾದಕ್ಕೆ ಕಾರಣವಾಗಿ 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಚುನಾವಣಾ ವಿಷಯವಾಗಿ ಪರಿಣಮಿಸಿತ್ತು. ತಪ್ಪಿತಸ್ಥರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು.
ತನಿಖೆಗೆ ರಚಿಸಲಾಗಿದ್ದ ನ್ಯಾ. ಮೈಕಲ್ ಡಿ. ಕುನ್ಹಾ ನೇತೃತ್ವದ ಸಮಿತಿ
ಈ ಕುರಿತ ತನಿಖೆಗೆ ರಚಿಸಲಾಗಿದ್ದ ನ್ಯಾ. ಮೈಕಲ್ ಡಿ. ಕುನ್ಹಾ ನೇತೃತ್ವದ ಸಮಿತಿಯು ಇದೀಗ ಮುಖ್ಯಮಂತ್ರಿಗಳಿಗೆ ಅಂತಿಮ ವರದಿ ಸಲ್ಲಿಸಿದ್ದು, ದುರಂತ ಬಗ್ಗೆ ಯಾವ ಅಂಶಗಳನ್ನು ಉಲ್ಲೇಖಿಸಲಾಗಿದೆ ಹಾಗೂ ಯಾರನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
2021ರ ಮೇ 2 ಹಾಗೂ 3ರ ನಡುವೆ ನಡೆದ ಈ ದುರಂತದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಲವು ರೋಗಿಗಳು ಮೃತಪಟ್ಟಿದ್ದರು. ಜಿಲ್ಲಾಡಳಿತ ಮತ್ತು ಆಸ್ಪತ್ರೆ ಅಧಿಕಾರಿಗಳ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣ ಎಂದು ಆರೋಪ ಕೇಳಿ ಬಂದಿತ್ತು. ಈ ಘಟನೆ ಕುರಿತು ನ್ಯಾಯಾಂಗ ಆಯೋಗದ ತನಿಖೆಗಾಗಿ ನ್ಯಾ. ಬಿ.ಎ.ಪಾಟೀಲ್ ಆಯೋಗ ರಚನೆ ಮಾಡಲಾಗಿತ್ತು. ಆದರೆ, ಆಯೋಗದ ವರದಿ ಬಗ್ಗೆ ಸಮಾಧಾನಗೊಳ್ಳದ ಸರ್ಕಾರ ಮರು ತನಿಖೆ ನಡೆಸಿ ವರದಿ ನೀಡುವಂತೆ ನ್ಯಾ.ಕುನ್ಹಾ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಿತ್ತು.
