ಕನ್ನಡಪ್ರಭ ವಾರ್ತೆ ಬೈಲಹೊಂಗಲ ಮರಕುಂಬಿ ಗ್ರಾಮದ ಶ್ರೀಚಕ್ರ ಸಮೇತ ಚಾಮುಂಡೇಶ್ವರಿ ದೇವಸ್ಥಾನ ಜಾತ್ರಾ ಮಹೋತ್ಸವದ ಅಂಗವಾಗಿ ನಗರದಲ್ಲಿ ಮೈಸೂರ ದಸರಾ ಮಹೋತ್ಸವ ಮಾದರಿಯಲ್ಲಿ ಬೃಹತ್ ಅಂಬಾರಿ ಉತ್ಸವ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ನಗರದ ಈಶಪ್ರಭು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ರಾಜ್ಯದ ವಿವಿಧ ಮೂಲೆಗಳಿಂದ ಬಂದಿಳಿದ ಶ್ರೀಚಕ್ರ ಸಮೇತ ಚಾಮುಂಡೇಶ್ವರಿ ದೇವಸ್ಥಾನ ಭಕ್ತರು, ಕಲಾತಂಡಗಳು, ವಿವಿಧ ವಾದ್ಯಮೇಳಗಳು, ಗಜರಾಜ ನೋಡಲು ಜನ ಜಮಾಯಿಸಿದ್ದರು. ಹೀಗಾಗಿ, ಎಲ್ಲೆಡೆ ಹಬ್ಬದ ವಾತಾವರಣ ಕಂಡು ಬಂದಿತು.
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಮರಕುಂಬಿ ಗ್ರಾಮದ ಶ್ರೀಚಕ್ರ ಸಮೇತ ಚಾಮುಂಡೇಶ್ವರಿ ದೇವಸ್ಥಾನ ಜಾತ್ರಾ ಮಹೋತ್ಸವದ ಅಂಗವಾಗಿ ನಗರದಲ್ಲಿ ಮೈಸೂರ ದಸರಾ ಮಹೋತ್ಸವ ಮಾದರಿಯಲ್ಲಿ ಬೃಹತ್ ಅಂಬಾರಿ ಉತ್ಸವ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ನಗರದ ಈಶಪ್ರಭು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ರಾಜ್ಯದ ವಿವಿಧ ಮೂಲೆಗಳಿಂದ ಬಂದಿಳಿದ ಶ್ರೀಚಕ್ರ ಸಮೇತ ಚಾಮುಂಡೇಶ್ವರಿ ದೇವಸ್ಥಾನ ಭಕ್ತರು, ಕಲಾತಂಡಗಳು, ವಿವಿಧ ವಾದ್ಯಮೇಳಗಳು, ಗಜರಾಜ ನೋಡಲು ಜನ ಜಮಾಯಿಸಿದ್ದರು. ಹೀಗಾಗಿ, ಎಲ್ಲೆಡೆ ಹಬ್ಬದ ವಾತಾವರಣ ಕಂಡು ಬಂದಿತು.ಎಪಿಎಂಸಿಯ ಗಣೇಶ ದೇವಸ್ಥಾನಲ್ಲಿ ಗಣಪತಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಶ್ರೀಚಕ್ರ ಸಮೇತ ಚಾಮುಂಡೇಶ್ವರಿ ಅಂಬಾರಿ ಉತ್ಸವ ಮೆರವಣಿಗೆಗೆ ಮೂರುಸಾವಿರ ಮಠದ ಪೀಠಾಧಿಪತಿ ಪ್ರಭುನೀಲಕಂಠ ಸ್ವಾಮೀಜಿ, ಶ್ರೀಚಕ್ರ ಸಮೇತ ಚಾಮುಂಡೇಶ್ವರಿ ದೇವಿ ದೇವಸ್ಥಾನ ಧರ್ಮದರ್ಶಿ ಡಾ.ಜಿ.ಬಿ.ಮಲ್ಲೇಶ, ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕ ಮಹಾಂತಯ್ಯಶಾಸ್ತ್ರಿ ಆರಾದ್ರಿಮಠ, ವೀರಯ್ಯಸ್ವಾಮಿ ಹಿರೇಮಠ, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಶಾಸಕ ಮಹಾಂತೇಶ ಕೌಜಲಗಿ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಮುಖಂಡರಾದ ವಿಜಯ ಮೆಟಗುಡ್ಡ, ಕಾರ್ತಿಕ ಪಾಟೀಲ, ಭೂ ದಾನಿ ಮಹಾಂತೇಶ ಕೌಜಲಗಿ ಪೂಜೆ ಸಲ್ಲಿಸಿ ಅಂಬಾರಿ ಉತ್ಸವ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು. ಚಾಮುಂಡೇಶ್ವರಿ ಪ್ರತಿಮೆಯ ಅಂಬಾರಿಗೆ ವಿವಿಧ ಫಲಪುಷ್ಪಮಾಲೆಗಳಿಂದ ಸಿಂಗರಿಸಿ ಪೂಜೆಯನ್ನು ಸಲ್ಲಿಸಲಾಯಿತು.ಈ ಮೆರವಣಿಗೆಯಲ್ಲಿ ಹುಬ್ಬಳ್ಳಿಯ ಛಬ್ಬಿ ಕಲಾ ಅಜಿತ್ ಇವೆಂಟ್ಸ್, ಹಾನಗಲ್ಲದ ಡೊಳ್ಳು ಶೇಷಗಿರಿ, ಗದಗದ ಸೂಡಿ ಚಂಡಿಮೇಳ, ಹಾವೇರಿಯ ನಂದಿಕೋಲು, ವೀರಗಾಸೆ ನೆಟ್ಟೂರ, ಧಾರವಾಡದ ಕರಡಿ ಮಜಲು, ಹುಬ್ಬಳ್ಳಿಯ ಜಗ್ಗಲಗಿ ಕುಣಿತ, ಮರಗಲ್ಲ ಕುಣಿತ, ಶಿಂಗಾವದ ದೊಡ್ಡಾಟ, ದಾಬಸಪೇಟೆಯ ಕೆಂಗಲಹಟ್ಟಿ ಅಲಗು ಕುಣಿತ, ರಾಮನಗರದ ಗಾರುಡಿ ಗೊಂಬೆ, ಕುದೂರದ ಮಹಿಳಾ ಚಂಡೆ, ತುಮಕೂರ ಕೋಲಾಟ, ಬೃಹತ ಗಾತ್ರದ ಹನುಮಂತನ ವೇಷಭೂಷಣ ನೋಡುಗರ ಕಣ್ಮನ ಸೆಳೆಯಿತು.ಮೆರವಣಿಗೆ ಮರಕುಂಬಿ ಗ್ರಾಮದ ಬಳಿ ಆಗಮಿಸುತ್ತಿದ್ದಂತೆ ಸಹಸ್ರಾರು ಮಹಿಳೆಯರು ಅಂಬಾರಿ ಉತ್ಸವ ಮೆರವಣಿಗೆಯಲ್ಲಿ ಪೂರ್ಣಕುಂಭ ಹೊತ್ತು ಸಾಗಿದರು. ಪ್ರತಿಯೊಬ್ಬರು ವರವ ಕೊಡು ತಾಯೆ, ವರವ ಕೊಡು ಎಂದು ಅಂಬಾರಿಗೆ ಕೈ ಮುಗಿದು ಶ್ರದ್ಧಾಭಕ್ತಿಯಿಂದ ಪ್ರಾರ್ಥನೆ ಸಲ್ಲಿಸುತ್ತಿರುವುದು ಕಂಡು ಬಂದಿತು.ಸಾವಿರಾರು ಸದ್ಭಕ್ತರು, ಗಣ್ಯರು, ಶ್ರೀಚಕ್ರ ಸಮೇತ ಚಾಮುಂಡೇಶ್ವರಿ ದೇವಸ್ಥಾನ ಕಮೀಟಿಯ ಮುಖಂಡರು ಪಾಲ್ಗೊಂಡಿದ್ದರು. ಟ್ರಾಫಿಕ್ ಸಮಸ್ಯೆ ಆಗದಂತೆ ಮತ್ತು ಭದ್ರತೆಗಾಗಿ ಹೆಚ್ಚಿನ ಪೊಲೀಸ್ ಬಿಗಿ ಭದ್ರತೆಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ಕೈಗೊಳ್ಳಲಾಗಿತ್ತು. ಜಾತ್ರೋತ್ಸವದ ಹಿನ್ನಲೆಯಲ್ಲಿ ಭಕ್ತಾದಿಗಳಿಗೆ ದೇವಸ್ಥಾನ ಆವರಣದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.