ಸಾರಾಂಶ
ಹಿರಿಯೂರು: ಕಾಂಗ್ರೆಸ್ ಪಕ್ಷದ್ದು ಪ್ರಚಾರ ಕಡಿಮೆ, ಕೆಲಸ ಜಾಸ್ತಿ ಅಭಿವೃದ್ಧಿಯೇ ಮೊದಲ ಆದ್ಯತೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು. ತಾಲೂಕಿನ ಐಮಂಗಲ ಹೋಬಳಿಯಲ್ಲಿ ಸೋಮವಾರ ಆಯೋಜಿಸಿದ್ದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಅಭಿವೃದ್ಧಿ ಬಗ್ಗೆ, ಬಡ ಜನರ ಬಗ್ಗೆ, ದೀನ ದಲಿತರ ಬಗ್ಗೆ ಬಿಜೆಪಿಗೆ ಕಾಳಜಿಯಿಲ್ಲ. ಅವರದೇನಿದ್ದರೂ ಬರೀ ಸುಳ್ಳು ಪ್ರಚಾರಗಳು. ಚುನಾವಣೆಗಳನ್ನು ಗೆಲ್ಲುವ ತಂತ್ರ ಕಲಿತಿದ್ದಾರೆ. ಜನರನ್ನು ಭಾವನಾತ್ಮಕವಾಗಿ ಮರುಳು ಮಾಡುವುದನ್ನೇ ರಾಜಕೀಯ ಎಂದು ಭಾವಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಈಗಾಗಲೇ ಹಲವಾರು ಬಡವರ ಪರವಾದ ಕಾರ್ಯಕ್ರಮಗಳನ್ನು ಜಾರಿಗೆ ತಂದು ಬಡ ಜನರ ಪರ ನಿಂತಿದೆ. ದೇಶದಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ, ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸಾಲಮನ್ನಾದಂತಹ ಮಹತ್ತರ ತೀರ್ಮಾನಗಳನ್ನು ತೆಗೆದುಕೊಳ್ಳಲಾಯಿತು. ಆನಂತರ ಏನಾಯಿತು ಎಂದು ಎಲ್ಲರಿಗೂ ಗೊತ್ತಿದೆ. ಯಾರ ಖಾತೆಗೂ 15 ಲಕ್ಷ ರು. ಬರಲಿಲ್ಲ. ಯಾವ ನಿರುದ್ಯೋಗಿಗಳಿಗೂ ಕೋಟಿ ಕೋಟಿ ಉದ್ಯೋಗ ಸೃಷ್ಟಿಯೂ ಆಗಲಿಲ್ಲ. ಬೆಲೆ ಏರಿಕೆ ಬಿಸಿಯಲ್ಲಿ ಜನರು ಬೆಂದದ್ದೇ ಅವರ ಸಾಧನೆಯಾಗಿದೆ. ಹಾಗಾಗಿ ಮತದಾರರು ವಾಸ್ತವ ಪರಿಸ್ಥಿತಿ ಅರಿತು ಮತ ಚಲಾಯಿಸಬೇಕು ಎಂದರು.ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಮಾತನಾಡಿ, ನೀವು ನೀಡುವ ಮತಕ್ಕೆ ಕಿಂಚಿತ್ತೂ ಲೋಪವಾಗದಂತೆ ಕೆಲಸ ಮಾಡುತ್ತೇನೆ. ಇಂತಹ ಸಂಸದ ಬೇಡ ಎಂದು ಒಬ್ಬರೂ ಹೇಳಬಾರದು. ಆ ರೀತಿಯಲ್ಲಿ ನನ್ನ ಕೆಲಸ ಮಾಡಿ ತೋರಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಕೆಪಿಸಿಸಿ ಅಸಂಘಟಿತ ಕಾರ್ಮಿಕರ ಘಟಕದ ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್ ಪೀರ್, ಕೆಪಿಸಿಸಿಯ ವಿಜಯಕುಮಾರ್, ವಿಧಾನ ಪರಿಷತ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್, ನೇರಲಗುಂಟೆ ರಾಮಪ್ಪ, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾ ನಂದಿನಿ ಗೌಡ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಲಿಂಗೇಗೌಡ, ಕಲ್ಲಟ್ಟಿ ಹರೀಶ್, ಗಿಡ್ಡೋಬನಹಳ್ಳಿ ಅಶೋಕ್, ಕಲ್ಲಟ್ಟಿ ತಿಪ್ಪೇಸ್ವಾಮಿ, ಪ್ರವೀಣ್, ಕೃಷ್ಣಮೂರ್ತಿ, ಮೂರ್ಖಣಪ್ಪ, ಕಣುಮೇಶ್ ಮುಂತಾದವರು ಇದ್ದರು.