ಸಾರಾಂಶ
ಯುಪಿಎಸ್‌ಸಿ ಪರೀಕ್ಷೆಯಲ್ಲಿ ನಾನು ಮಾಡಿರುವ ಸಾಧನೆಗೆ ನನ್ನ ಅಣ್ಣ ಬಿ.ಎಸ್.ಚೇತನ್ ನೀಡಿದ ಪ್ರೇರಣೆಯೇ ಕಾರಣ. ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ನನ್ನ ಅಣ್ಣ ನನ್ನ ಓದಿಗೆ ನೆರವಾಗಿದ್ದರು. ಕಲಿಕೆಯಲ್ಲಿ ಮುಂದಿದ್ದ ನನಗೆ ಆರ್ಥಿಕ ಸಹಕಾರ ನೀಡಿ, ಬೆನ್ನು ತಟ್ಟಿ ಪ್ರೋತ್ಸಾಹಿದ್ದರಿಂದಲೇ ಈ ಸಾಧನೆ ಮಾಡಲು ಸಾಧ್ಯವಾಗಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮಂಡ್ಯ ಜಿಲ್ಲೆಯ ಗ್ರಾಮೀಣ ಪ್ರತಿಭೆ ಬಿ.ಎಸ್.ಚಂದನ್ 731ನೇ ರ್‍ಯಾಂಕ್ ಪಡೆದು ಕೀರ್ತಿ ತಂದಿದ್ದಾನೆ. ಮಳವಳ್ಳಿ ತಾಲೂಕು ಹಲಗೂರು ಸಮೀಪವಿರುವ ಬಿರೋಟ ಗ್ರಾಮದ ರೈತ ಸಣ್ಣೇಗೌಡ ಮತ್ತು ಸವಿತ ದಂಪತಿ ಪುತ್ರ ಬಿ.ಎಸ್.ಚಂದನ್ ಹಲವು ಕಷ್ಟಗಳನ್ನು ಎದುರಿಸಿ ಕೇಂದ್ರ ನಾಗರೀಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಯಶಸ್ಸು ಗಳಿಸಿದ್ದಾನೆ.ಕೋಡಂಬಳ್ಳಿ, ಮಾಸ್ಟರ್ ದೊಡ್ಡಿ, ಮರೀಗೌಡನದೊಡ್ಡಿಯ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ಇವರು ನಂತರ ಬ್ಯಾಡರಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಮುಗಿಸಿದರು. ಮದ್ದೂರು ತಾಲೂಕು ಕೆ.ಎಂ.ದೊಡ್ಡಿ ಭಾರತೀ ಕಾಲೇಜಿನಲ್ಲಿ ಪಿಯುಸಿ ಮತ್ತು ಬಿಎಸ್ಸಿ ಪದವಿಯನ್ನು ಪಡೆದರು. ನಂತರ ಕೇಂದ್ರ ನಾಗರೀಕ ಸೇವಾ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡು ಐದು ಬಾರಿ ಪರೀಕ್ಷೆ ಎದುರಿಸಿದ ಚಂದನ್ ಈ ಬಾರಿಯ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸಾಧನೆ ಮಾಡಿದ್ದಾನೆ.
ಅಣ್ಣನ ಪ್ರೇರಣೆ ಸಾಧನೆಗೆ ಕಾರಣ: ಯುಪಿಎಸ್‌ಸಿ ಪರೀಕ್ಷೆಯಲ್ಲಿ ನಾನು ಮಾಡಿರುವ ಸಾಧನೆಗೆ ನನ್ನ ಅಣ್ಣ ಬಿ.ಎಸ್.ಚೇತನ್ ನೀಡಿದ ಪ್ರೇರಣೆಯೇ ಕಾರಣ. ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ನನ್ನ ಅಣ್ಣ ನನ್ನ ಓದಿಗೆ ನೆರವಾಗಿದ್ದರು. ಕಲಿಕೆಯಲ್ಲಿ ಮುಂದಿದ್ದ ನನಗೆ ಆರ್ಥಿಕ ಸಹಕಾರ ನೀಡಿ, ಬೆನ್ನು ತಟ್ಟಿ ಪ್ರೋತ್ಸಾಹಿದ್ದರಿಂದಲೇ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಕನ್ನಡ ಮಾದ್ಯಮದಲ್ಲಿ ಕಲಿತ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ನಗರ ಪ್ರದೇಶದ ಸ್ಪರ್ಧಾಳುಗಳ ಜೊತೆಗೆ ಪೈಪೋಟಿ ನಡೆಸಲು ಬಹಳ ಕಷ್ಟವಾಯಿತು. ಪರಿಣಾಮ ಎರಡು ಬಾರಿ ಮೌಖಿಕ ಪರೀಕ್ಷೆಯಲ್ಲಿ ವಿಫಲನಾದೆ. ಆ ನಂತರವೂ ಅಣ್ಣನ ಸಲಹೆಯಂತೆ ಛಲಬಿಡದೆ ನಡೆಸಿದ ನಿರಂತರ ಪ್ರಯತ್ನಕ್ಕೆ ಈಗ ಪ್ರತಿಫಲ ಸಿಕ್ಕಿದೆ ಎಂದು ಚಂದನ್ ಸಂತಸ ಹಂಚಿಕೊಂಡರು.