ಸಾರಾಂಶ
ಕಾರವಾರ: ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ೧೯೫೬ರಿಂದಲೂ ಹೋರಾಟ ನಡೆಸುತ್ತಿದೆ. ಗಡಿ ವಿವಾದದ ಸಂಬಂಧ ಮಹಾಜನ್ ಸಮಿತಿ ರಚನೆ ಮಾಡಿ ವರದಿ ಪಡೆದುಕೊಳ್ಳಲಾಗಿತ್ತು. ಆದರೆ ಮಹಾರಾಷ್ಟ್ರ ಸರ್ಕಾರ ಅದನ್ನು ಜಾರಿಗೆ ತಂದಿಲ್ಲ ಎಂದು ಹಳಿಯಾಳ ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಎಂಇಎಸ್‌ನವರು ಉತ್ತರ ಕನ್ನಡಕ್ಕೆ ಬಂದು ಮಹಾರಾಷ್ಟ್ರ ಪರ ಘೋಷಣೆ ಕೂಗಿರುವ ಸಂಬಂಧ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಆ ವೇಳೆ ಅಲ್ಲಿನ ಸರ್ಕಾರ ಹಿಂದೆ ಸರಿಯಿತು. ಅವರು ಒಪ್ಪಿದ್ದರೆ ಆಗುತ್ತಿತ್ತು. ಈಗ ಕರ್ನಾಟಕ ಬೆಂಬಲ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಅವರು, ದೇಶದ ಪ್ರಜೆಯಾದವರು ಅನ್ಯಾಯವಾದರೆ ಕಾನೂನಿನ ಚೌಕಟ್ಟಿನಲ್ಲಿ ಹೋರಾಡಲು ಅವಕಾಶವಿದೆ. ಅದರಂತೆ ಎಂಇಎಸ್ ಕಾರವಾರ, ಜೋಯಿಡಾ, ನಿಪ್ಪಾಣಿ, ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಹೋರಾಟ ಮಾಡುತ್ತಿದ್ದಾರೆ. ತಾವು ಐದು ವರ್ಷ ಖಾನಾಪುರ ಶಾಸಕರಾಗಿ ಕೆಲಸ ಮಾಡಿದ್ದು, ಎಂಇಎಸ್ ತಮ್ಮ ಬಳಿ ಬೆಂಬಲ ಕೇಳಿಲ್ಲ. ಅವರು ಬೆಂಬಲ ಕೇಳಿದರೆ ಉತ್ತರ ಕೊಡುತ್ತೇವೆ ಎಂದ ಅವರು, ಮಹಾಜನ್ ವರದಿ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ನ್ಯಾಯಾಲಯದ ತೀರ್ಪು ಅಂತಿಮವಾಗಿದ್ದು, ಅದನ್ನು ಗೌರವಿಸಬೇಕು ಎಂದು ಅಭಿಪ್ರಾಯಪಟ್ಟರು.
ಹೊನ್ನಾವರ ಕಾಸರಕೋಡು ಬಂದರು ವಿಚಾರವಾಗಿ ಮೀನುಗಾರರು ಮತದಾನ ಬಹಿಷ್ಕಾರ ಮಾಡುತ್ತೇವೆಂದು ಹೇಳಿದ ಬಗ್ಗೆ ಪ್ರಶ್ನಿಸಿದಾಗ, ಉತ್ತರಿಸಿದ ಆರ್‌ವಿಡಿ, ಯಾವುದೇ ಅಭಿವೃದ್ಧಿ ಆಗಲು ಬಿಡುವುದಿಲ್ಲ ಎನ್ನಲು ಬರುವುದಿಲ್ಲ. ಪ್ರತಿಯೊಂದು ಯೋಜನೆಗೂ ವಿರೊಧ ಬರುತ್ತದೆ. ಅಲ್ಲಿನ ಜನರಿಗೆ ನ್ಯಾಯ ಕೇಳುವ ಅಧಿಕಾರವಿದೆ. ಅವರೊಂದಿಗೆ ಮಾತುಕತೆ ಕೂಡಾ ಆಗಿದೆ. ಮೀನುಗಾರರ ಸಮಸ್ಯೆ ಪರಿಹಾರ ಕಂಡುಹಿಡಿಯಬೇಕು. ಸಮಸ್ಯೆ ಬಗೆಹರಿಯುವವರೆಗೆ ಕೆಲಸ ಮಾಡುವುದು ಬೇಡ ಎಂದು ಕಂಪನಿಗೆ ಸೂಚಿಸಿದ್ದೇವೆ. ಚುನಾವಣೆ ಬಹಿಷ್ಕಾರ ಮಾಡಬಾರದು. ಚರ್ಚೆ ಮಾಡಿ ಪರಿಹಾರ ಕಂಡುಹಿಡಿದುಕೊಳ್ಳಬೇಕು ಎಂದರು.ಕಾಂಗ್ರೆಸ್ ಅಭ್ಯರ್ಥಿ ಹೊರಗಿನಿಂದ ಬಂದವರು ಎಂದು ಬಿಜೆಪಿಗರು ಹೇಳುತ್ತಿರುವ ಬಗ್ಗೆ ಕೇಳಿದಾಗ, ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ಅವರು, ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಕಿತ್ತೂರು, ಖಾನಾಪುರ ಸೇರುತ್ತದೆ. ಅವರಿಗೆ ಮಾಡಲು ಕೆಲಸವಿಲ್ಲ. ಹಿಂದೆ ಏನೂ ಅಭಿವೃದ್ಧಿ ಮಾಡಿಲ್ಲ. ಹೀಗಾಗಿ ಕಾಂಗ್ರೆಸ್ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ. ಭಾರತದ ಸಂವಿಧಾನದಲ್ಲಿ ದೇಶದ ಪ್ರಜೆಯಾದವರು ಯಾವ ಕ್ಷೇತ್ರದಲ್ಲೂ ಸ್ಪರ್ಧಿಸಬಹುದು ಎಂದು ಉಲ್ಲೇಖಿಸಲಾಗಿದೆ. ಬಿಜೆಪಿಗರಿಗೆ ಕೇವಲ ಸಂವಿಧಾನ ಬದಲಿಸುವ ಬಗ್ಗೆ ಮಾತ್ರ ಗೊತ್ತಿದೆ. ಅವರು ಸಂವಿಧಾನ ಓದಿಕೊಂಡಂತಿಲ್ಲ. ನಾವು ಸಂವಿಧಾನದ ಪುಸ್ತಕ ಖರೀದಿಸಿಕೊಡುತ್ತೇವೆ. ಅವರು ಮೊದಲು ಓದಿಕೊಂಡು ಆ ಬಳಿಕ ಮಾತನಾಡಲಿ ಎಂದು ಲೇವಡಿ ಮಾಡಿದರು.
ದೇಶಪಾಂಡೆ ಸಿಡಿಮಿಡಿ...ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ ಅವರ ಪುತ್ರ ವಿವೇಕ ಹೆಬ್ಬಾರ ಕಾಂಗ್ರೆಸ್ ಸೇರ್ಪಡೆಯಾಗಿ ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದ ಬಗ್ಗೆ ಪ್ರಶ್ನಿಸಿದಾಗ, ಶಾಸಕ ಆರ್.ವಿ. ದೇಶಪಾಂಡೆ ಸಿಡಿಮಿಡಿಗೊಂಡರು.
ಶಿವರಾಮ ಹೆಬ್ಬಾರ, ಮಂಕಾಳು ವೈದ್ಯ ಬಗ್ಗೆ ಕೇಳಿ ಮಾತನಾಡುತ್ತೇವೆ. ಚುನಾವಣೆ ಬಗ್ಗೆ ಕೇಳಿ. ಕಾಂಗ್ರೆಸ್‌ನಲ್ಲಿ ಶಿಸ್ತಿದೆ. ಅದಕ್ಕೆ ಏಕೆ ಒತ್ತು ಕೊಡುತ್ತೀರಿ? ವಿವೇಕ ಒಳ್ಳೆಯ ಹುಡುಗ, ಉದ್ಯಮಿಯಾಗಿದ್ದಾರೆ. ಹೊಸದಾಗಿ ಕೈಗಾರಿಕೆ ಸ್ಥಾಪನೆ ಮಾಡಿದ್ದಾರೆ ಎಂದಷ್ಟೆ ಹೇಳಿದರು.