ಸಾರಾಂಶ
ಬ್ಯಾಂಕ್ ಹಾಗೂ ಎಟಿಎಂಗಳ ಸುರಕ್ಷತೆ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಭದ್ರತಾ ವ್ಯವಸ್ಥೆಯನ್ನು ಅಪ್‌ಗ್ರೇಡ್ ಮಾಡಬೇಕು. ಸುರಕ್ಷತೆಗಾಗಿ ಇರುವ ಹಳೆ ಪದ್ಧತಿಗಳನ್ನ ಬದಲಾಯಿಸಿ ಅತ್ಯಾಧುನಿಕ ತಂತಜ್ಞಾನ ಬಳಸಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಬ್ಯಾಂಕ್ ಹಾಗೂ ಎಟಿಎಂಗಳ ಸುರಕ್ಷತೆ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಭದ್ರತಾ ವ್ಯವಸ್ಥೆಯನ್ನು ಅಪ್‌ಗ್ರೇಡ್ ಮಾಡಬೇಕು. ಸುರಕ್ಷತೆಗಾಗಿ ಇರುವ ಹಳೆ ಪದ್ಧತಿಗಳನ್ನ ಬದಲಾಯಿಸಿ ಅತ್ಯಾಧುನಿಕ ತಂತಜ್ಞಾನ ಬಳಸಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಸಲಹೆ ನೀಡಿದರು.
ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಗುರುವಾರ ನಡೆದ ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ, ಬ್ಯಾಂಕಿನ ಗಾಹಕರು ತಮ್ಮ ಜೀವಮಾನದ ಗಳಿಕೆಯನ್ನು ಬ್ಯಾಂಕ್‌ಗಳ ಮೇಲೆ ವಿಶ್ವಾಸದಿಂದ ಬ್ಯಾಂಕಿನಲ್ಲಿ ಇಟ್ಟಿರುತ್ತಾರೆ. ಅನೇಕ ಬ್ಯಾಂಕ್‌ಗಳು ವಿವಿಧ ರೀತಿಯ ಸೇವೆಗಳನ್ನು ನೀಡುತ್ತವೆ. ಆದರೆ, ಇತ್ತೀಚಿಗೆ ನ್ಯಾಮತಿ ತಾಲೂಕಿನ ಬ್ಯಾಂಕ್‌ವೊಂದರಲ್ಲಿ ಹಲವಾರು ಕೋಟಿ ರು.ಗಳ ಚಿನ್ನಾಭರಣವನ್ನು ಲಾಕರ್ ಒಡೆದು ಕಳ್ಳರು ಲೂಟಿ ಮಾಡಿದ್ದರು. ಇದು ಗಾಹಕರಿಗೆ ಸಹಜವಾಗಿ ಆತಂಕ ತರುತ್ತದೆ. ಬ್ಯಾಂಕ್‌ಗಳ ಸುರಕ್ಷತೆ ಮತ್ತು ಭದ್ರತೆ ಬಗ್ಗೆ ಆರ್‌ಬಿಐ ಅನೇಕ ಗೈಡ್‌ಲೈನ್ಸ್ ನೀಡಿದೆ. ಜಿಲ್ಲಾ ಪೋಲೀಸ್ ಕೂಡ ಹಲವಾರು ಬಾರಿ ಬ್ಯಾಂಕ್ ಅಧಿಕಾರಿಗಳ ಗಮನಕ್ಕೆ ತಂದಿದೆ ಎಂದರು.ಇತ್ತೀಚೆಗೆ ಹಲವು ಕಡೆ ಎಟಿಎಂಗಳಲ್ಲಿ ಕಳ್ಳತನ, ಆನ್‌ಲೈನ್ ವಂಚನೆ ಅನೇಕ ರೀತಿಯ ಬ್ಯಾಂಕ್ ವಂಚನೆಗಳು ನಡೆದಿದ್ದು, ಮತ್ತು ಕೆಲವೆಡೆ ವಿಫಲ ಪಯತ್ನ ಆಗಿದ್ದು ಕೂಡ ನಮ್ಮೆಲ್ಲರ ಗಮನಕ್ಕೆ ಬಂದಿದೆ. ಅನೇಕ ಕಡೆ ಬ್ಯಾಂಕಿನ ಒಳಗೆ ಮತ್ತು ಹೊರಗೆ ಅಸುರಕ್ಷತೆ, ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಮತ್ತು ನಿಯಮಾವಳಿಗಳ ಪ್ರಕಾರ ಮುನ್ನೆಚ್ಚರಿಕೆ ವಹಿಸದೇ ಇರುವುದು, ಈ ಘಟನೆಗಳಿಗೆ ಕಾರಣವಾಗಿದೆ ಎಂದು ತಿಳಿಸಿದರು.ಎಟಿಎಂಗಳಿಗೆ ಭದ್ರತೆ ಒದಗಿಸಿ, ಎಟಿಎಂ ಹಾಗೂ ಬ್ಯಾಂಕಿನ ಶಾಖೆಗಳ ಮುಂಭಾಗ, ಹಿಂಭಾಗ ಹಾಗೂ 360 ಡಿಗ್ರಿ ಸುತ್ತಲೂ ಕತ್ತಲಲ್ಲು ಕಾರ್ಯಾಚರಿಸುವ ಉತ್ತಮ ದರ್ಜೆಯ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಅದರ ಡಿವಿಆರ್ ಬಾಕ್ಸ್‌ಗಳನ್ನು ಕಣ್ಣಿಗೆ ಕಾಣದಂತೆ ಇಡಿ. ಅನುಮಾನ ಬಾರದ ಜಾಗದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ. ಸಾಲು ಸಾಲು ರಜೆಗಳಿದ್ದಾಗ ಸೂಕ್ತ ಬಂದೋಬಸ್ತ್ ಒದಗಿಸಿ, ಬ್ಯಾಂಕಿನ ಪ್ರಮುಖ ಜವಬ್ದಾರಿಯುತ ಅಧಿಕಾರಿಗಳ ಮೊಬೈಲ್ ಸಂಖ್ಯೆಯನ್ನು ಸ್ಥಳೀಯರಿಗೆ, ಗಾಹಕರಿಗೆ ಹಾಗೂ ಪಕ್ಕದ ಪೊಲೀಸ್ ಠಾಣೆಗೆ ನೀಡಿ. ಅಧಿಕಾರಿಗಳು ವರ್ಗಾವಾಗುವ ಸಂದರ್ಭದಲ್ಲೂ ಕೂಡ ಕಡ್ಡಾಯವಾಗಿ ಎಲ್ಲಾ ಬ್ರಾಂಚುಗಳ ಪ್ರಮುಖರು ತಮ್ಮ ನಂಬರನ್ನು ಸಂಬಂಧಪಟ್ಟವರಿಗೆ ನೀಡಬೇಕು ಎಂದು ಹೇಳಿದರು.ಈ ಹಿಂದೆ ಕೆಲವು ಶಾಖೆಗಳಿಗೆ ಸಂದರ್ಶಿಸಿದಾಗ ಅನೇಕ ಲೋಪದೋಷಗಳ ಪಟ್ಟಿ ಮಾಡಿ ಸರಿಪಡಿಸುವಂತೆ ತಿಳಿಸಿದ್ದೆವು. ಅದು ಯಾವುದು ಕಾರ್ಯಗತವಾಗಿಲ್ಲ, ಕುಂಟು ನೆಪ ಹೇಳುತ್ತಾರೆ. ಬ್ಯಾಂಕ್‌ನಿಂದ ನಮಗೆ ಯಾವುದೇ ಫಂಡ್ ಬರುವುದಿಲ್ಲ ಎನ್ನುತ್ತಾರೆ. ಆದರೆ, ಮುಂದೆ ಈ ರೀತಿಯ ದರೋಡೆ, ಲೂಟಿ, ಕಳ್ಳತನ ಮೊದಲಾದ ಘಟನೆ ನಡೆದಾಗ ನಿಯಮಾವಳಿಗಳ ಪ್ರಕಾರ ಭದ್ರತಾ ಲೋಪ ಕಂಡುಬಂದಲ್ಲಿ ಬ್ಯಾಂಕಿನ ಪ್ರಮುಖ ಅಧಿಕಾರಿಗಳು ಕೂಡ ಆರೋಪಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ ಎಂದರು.ಪೊಲೀಸ್ ಗುಪ್ತದಳದ ಡಿವೈಎಸ್‌ಪಿ ಕೃಷ್ಣಮೂರ್ತಿ, ಅನೇಕ ಸಲಹೆಗಳನ್ನು ನೀಡಿದರು. ವೇದಿಕೆಯಲ್ಲಿ ಲೀಡ್ ಬ್ಯಾಂಕ್ ಅಧಿಕಾರಿ ಚಂದ್ರಶೇಖರ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎ.ಜೆ. ಕಾರಿಯಪ್ಪ, ಅನಿಲ್‌ಕುಮಾರ್ ಭೂಮರೆಡ್ಡಿ, ಡಿ.ವೈ.ಎಸ್.ಪಿ. ಅಂಜನಪ್ಪ ಹಾಗೂ ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳು ಉಪಸ್ಥಿತರಿದ್ದರು.