ಸಾರಾಂಶ
ಕೃಷ್ಣ ಎನ್. ಲಮಾಣಿ
ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ ದೀಪಾವಳಿ ಹಬ್ಬದ ಪಟಾಕಿ ಪರವಾನಗಿ ವೇಳೆ ಭಾರೀ ಪ್ರಮಾಣದ ಲಂಚಾವತಾರ ನಡೆದಿದೆ ಎಂಬ ಪುಕಾರು ಎದ್ದಿದೆ. ಒಬೊಬ್ಬ ವರ್ತಕರು ವಿವಿಧ ಇಲಾಖೆಗಳಿಂದ ಪರವಾನಗಿ ಪಡೆಯಲು ತಲಾ ₹2.25 ಲಕ್ಷ ಹಣ ಎಣಿಸಿದ್ದಾರೆ ಎಂಬ ಸುದ್ದಿ ಹರಿದಾಡತೊಡಗಿದೆ.ಜಿಲ್ಲೆಯ ಜಿಲ್ಲಾ ಕೇಂದ್ರ ಹೊಸಪೇಟೆಯ ಭಟ್ಟರಹಳ್ಳಿ ಆಂಜನೇಯ ದೇವಸ್ಥಾನದ ಆವರಣದಲ್ಲಿ ಪಟಾಕಿ ಅಂಗಡಿಗಳನ್ನು ತೆರೆಯಲು ಪರವಾನಗಿ ನೀಡಲು ನಗರಸಭೆ, ಪೊಲೀಸ್, ಪರಿಸರ, ಅಗ್ನಿಶಾಮಕ ಸೇರಿ ವಿವಿಧ ಇಲಾಖೆಗಳಿಂದ ಪರವಾನಗಿ ಪಡೆಯಲು ವರ್ತಕರು ಲಂಚ ನೀಡಿದ್ದಾರೆ ಎನ್ನಲಾಗುತ್ತಿದೆ.
ಜಿಲ್ಲೆಯ ಉನ್ನತ ಇಲಾಖೆಯಲ್ಲೇ ವರ್ತಕರಿಂದ ಕೆಲ ದಿನಗಳ ಹಿಂದೆ ಕಚೇರಿಯೊಂದರಿಂದ ಬಡ್ತಿ ಪಡೆದು ತೆರಳಿದ ಅಧಿಕಾರಿಯೊಬ್ಬರು ವರ್ತಕರಿಂದ ತಲಾ ₹50 ಸಾವಿರ ವಸೂಲಿ ಮಾಡಿದ್ದಾರೆ ಎಂಬ ಚರ್ಚೆ ಗುಟ್ಟಾಗಿ ಉಳಿದಿಲ್ಲ. ಪಟಾಕಿ ಮಾರಾಟಕ್ಕಾಗಿ ಪರವಾನಗಿ ಪಡೆದ ವರ್ತಕರು, ಅಧಿಕಾರಿಗಳಿಗೆ ನೀಡಿದ ಹಣ ಸರಿದೂಗಿಸಲು ದುಪ್ಪಟ್ಟು ಬೆಲೆಗೆ ಪಟಾಕಿಗಳನ್ನು ಮಾರಾಟ ಮಾಡಿದ್ದಾರೆ. ಹಬ್ಬಕ್ಕೆ ಭಾರೀ ಹಣ ನೀಡಿ, ಹಸಿರು ಪಟಾಕಿಗಳನ್ನು ಖರೀದಿಸಿ ಜನರು ದೀಪಾವಳಿ ಆಚರಣೆ ಮಾಡಿದ್ದಾರೆ. ಹಣ ಮಾಡಿಕೊಂಡ ಅಧಿಕಾರಿಗಳು ಜನರ ದುಡ್ಡಿನಿಂದಲೇ ದೀಪಾವಳಿಯನ್ನು ಇನ್ನಷ್ಟು ಜೋರಾಗಿ ಆಚರಣೆ ಮಾಡಿದ್ದಾರೆ.ಪಟಾಕಿ ಮಾರಾಟಕ್ಕಾಗಿ ಒಂದು ಇಲಾಖೆಗೆ ₹50 ಸಾವಿರ, ಇನ್ನೊಂದು ಇಲಾಖೆಗೆ ₹25 ಸಾವಿರ, ಮತ್ತೊಂದು ಇಲಾಖೆಗೆ ₹15 ಸಾವಿರ, ಮಗದೊಂದು ಇಲಾಖೆಗೆ ₹8 ಸಾವಿರ ಸೇರಿದಂತೆ ಇನ್ನು ಕೆಲ ಇಲಾಖೆಗಳಿಗೆ ಹಣ ನೀಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಪಟಾಕಿ ವರ್ತಕರೊಬ್ಬರು ದೊಡ್ಡ ಮೊತ್ತದ ಹಣ ನೀಡಿದ್ದಾರೆ ಎಂಬ ಸುದ್ದಿಯೂ ಈಗ ಕಾಳ್ಗಿಚ್ಚಿನಂತೆ ಹರಿದಾಡತೊಡಗಿದೆ. ದೀಪಾವಳಿಯಲ್ಲಿ ಸರ್ಕಾರದ ನಿಯಮಾವಳಿ ಪಾಲನೆ ಮಾಡುವುದರಲ್ಲೇ ಅಧಿಕಾರಿಗಳು ಹಣ ಮಾಡಿಕೊಂಡು ಸಂಪನ್ಮೂಲ ಕ್ರೋಡೀಕರಣ ಮಾಡಿಕೊಂಡು ದುಂಡಗಾಗಿದ್ದಾರೆ ಎಂಬ ಚರ್ಚೆ ಈಗ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ."ಹೊಸಪೇಟೆ ನಗರದಲ್ಲಿ ದೀಪಾವಳಿ ಪಟಾಕಿ ಮಾರಾಟ ಮಾಡಲು ನಿಯಮದಂತೆ ಪರವಾನಗಿ ಪಡೆಯಲು ಹರಸಾಹಸ ಪಟ್ಟಿದ್ದೇವೆ. ಹಣ ನೀಡಿದರೆ ಮಾತ್ರ ಪರವಾನಗಿ ಎಂಬಂತಾಗಿತ್ತು. ಇಂತಹ ಪರಿಪಾಠ ಬೆಳೆದಿರುವುದು ಅಚ್ಚರಿ ತಂದಿದೆ " ಎಂದು ಹೆಸರು ಹೇಳಲು ಇಚ್ಛಿಸದ ಪಟಾಕಿ ಮಾರಾಟ ಮಾಡುವ ವರ್ತಕರು ''''ಕನ್ನಡಪ್ರಭ''''ಕ್ಕೆ ತಿಳಿಸಿದರು.
ಈ ಬಾರಿ ದೀಪಾವಳಿ ಹಬ್ಬದ ವೇಳೆ ಪಟಾಕಿ ಮಾರಾಟಗಾರರಿಂದ ಪರವಾನಗಿ ಹೆಸರಿನಲ್ಲಿ ಹಣ ವಸೂಲಿ ಮಾಡಿರುವ ಅಧಿಕಾರಿಗಳ ಕೃತ್ಯದ ಕುರಿತು ಇಲಾಖೆಗಳಲ್ಲಿ ಆಂತರಿಕ ತನಿಖೆ ನಡೆದು ಕ್ರಮವಹಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.ದಸರಾದಲ್ಲೂ ಕಮಾಯಿ:
ಈ ಬಾರಿ ವಿಜಯನಗರ ಜಿಲ್ಲೆಯಲ್ಲಿ ಪೊಲೀಸ್ ಠಾಣೆಗಳಲ್ಲೂ ದಸರಾ ಮಾಮೂಲು ಹರಾಜು ಹಾಕಲಾಗಿದೆ. ಠಾಣೆ ಇಬ್ಬರು, ಮೂವರು ಪೊಲೀಸರು ಸೇರಿ ಹರಾಜು ಕೂಗಿ ದಸರಾ ಮಾಮೂಲು ಎತ್ತಿರುವುದು ಗುಟ್ಟಾಗಿ ಉಳಿದಿಲ್ಲ.ಜಿಲ್ಲೆಯ ಉದ್ಯಮಿಗಳು, ವರ್ತಕರು, ವ್ಯಾಪಾರಿಗಳು, ಸಣ್ಣ-ಪುಟ್ಟ ಅಂಗಡಿಯವರು ಪೊಲೀಸರಿಗೆ ದಸರಾ ಮಾಮೂಲು ನೀಡಿದ್ದಾರೆ. ದಸರಾ ಮಾಮೂಲು ಸಂಪ್ರದಾಯಕ್ಕೆ ತಿಲಾಂಜಲಿ ನೀಡಿದ್ದರೂ ಈ ಬಾರಿ ರಾಜಾರೋಷವಾಗಿ ನಡೆದಿರುವುದು ಭಾರೀ ಚರ್ಚೆಗೂ ಗ್ರಾಸವನ್ನೊದಗಿಸಿದೆ.