ಚಾರ್ಮಾಡಿ- ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪರಿಶೀಲನೆ

| Published : Feb 11 2024, 01:52 AM IST

ಚಾರ್ಮಾಡಿ- ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪರಿಶೀಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಚಾರ್ಮಾಡಿಯಿಂದ- ಉಜಿರೆ- ಬೆಳ್ತಂಗಡಿ- ಗುರುವಾಯನಕೆರೆ- ಪುಂಜಾಲಕಟ್ಟೆ ತನಕ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯನ್ನು ಶನಿವಾರ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಆಗಮಿಸಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಹೆದ್ದಾರಿ ಕಾಮಗಾರಿಯನ್ನು ಇನ್ನಷ್ಟು ವೇಗವಾಗಿಸಿ ನಿಗದಿತ ಸಮಯದೊಳಗೆ ಮುಗಿಸುವ ಉದ್ದೇಶದಿಂದ ಇಲಾಖಾ ಅಧಿಕಾರಿಗಳು ಶನಿವಾರ ತಾಲೂಕಿನ ವಿವಿಧ ಕಡೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಚಾರ್ಮಾಡಿಯಿಂದ- ಉಜಿರೆ- ಬೆಳ್ತಂಗಡಿ- ಗುರುವಾಯನಕೆರೆ- ಪುಂಜಾಲಕಟ್ಟೆ ತನಕ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯನ್ನು ಶನಿವಾರ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಆಗಮಿಸಿ ಪರಿಶೀಲನೆ ನಡೆಸಿದರು.

ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಎರಡನೇ ಹಂತದ ಕಾಮಗಾರಿ 730 ಕೋಟಿ ರು.ಗಿಂತ ಅಧಿಕ ಅನುದಾನದಲ್ಲಿ ಇಲ್ಲಿನ 33.1ಕಿಮೀ ವ್ಯಾಪ್ತಿಯಲ್ಲಿ ನಡೆಯುತ್ತಿದೆ ಕಾಮಗಾರಿ ಅಂಗವಾಗಿ ರಸ್ತೆ ಅಗಲೀಕರಣ, ತಡೆಗೋಡೆ ರಚನೆ, ಸೇತುವೆ, ಕಿರುಸೇತುವೆ, ಚರಂಡಿಗಳ ನಿರ್ಮಾಣ, ರಸ್ತೆಯನ್ನು ಸಮತಟ್ಟುಗೊಳಿಸುವುದು ಸೇರಿದಂತೆ ಪ್ರಮುಖ ಕಾಮಗಾರಿಗಳು ಭರದಿಂದ ನಡೆಯುತ್ತಿವೆ. ಈ ವರ್ಷ ಮಳೆಗಾಲದ ಆರಂಭಕ್ಕೆ ಕಾಮಗಾರಿಯನ್ನು ಪೂರ್ಣ ಪ್ರಮಾಣದಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ಮಳೆಗಾಲದಲ್ಲಿ ಪ್ರಾಥಮಿಕ ಹಂತದ ಕೆಲವು ಕಾಮಗಾರಿಗಳು ನಡೆದ ಬಳಿಕ ಮಳೆ ಕಡಿಮೆಯಾಗುತ್ತಿದ್ದಂತೆ ನಿರಂತರ ಕಾಮಗಾರಿ ಸಾಗಿದೆ. ಪುಂಜಾಲಕಟ್ಟೆಯಿಂದ ಉಜಿರೆ ಹಳೆಪೇಟೆ ತನಕ ರಸ್ತೆ ಅಭಿವೃದ್ಧಿಗಾಗಿ ಮರಗಳನ್ನು ತೆರವುಗೊಳಿಸಲಾಗಿದೆ. ಮಡಂತ್ಯಾರು, ಮದ್ದಡ್ಕ ಮೊದಲಾದ ಕಡೆಗಳಲ್ಲಿ ರಸ್ತೆ ವ್ಯಾಪ್ತಿಯಲ್ಲಿದ್ದ ವಿದ್ಯುತ್ ಕಂಬಗಳ ಸ್ಥಳಾಂತರ ಹೀಗೆ ಕಾಮಗಾರಿ ವೇಗವಾಗಿ ನಡೆಯುತ್ತಿದೆ.

ಖಾಸಗಿ ಜಾಗ, ಕಟ್ಟಡಗಳ ತೆರವು ಬಾಕಿ: ಅರಣ್ಯ ಹಾಗೂ ಕಂದಾಯ ಭೂಮಿ ಇರುವ ಭಾಗಗಳಲ್ಲಿ ಕಾಮಗಾರಿ ನಡೆಯುತ್ತಿದ್ದು ಖಾಸಗಿ ಜಾಗ, ಕಟ್ಟಡಗಳನ್ನು ತೆರವಿಗೆ ಗುರುತಿಸಲಾಗಿದ್ದು ಇದು ಅಂತಿಮ ಹಂತದಲ್ಲಿದೆ. ಇದರ ಪ್ರಕ್ರಿಯೆಗಳು ಪೂರ್ಣಗೊಂಡ ಕೂಡಲೇ ಖಾಸಗಿ ಜಾಗಗಳಲ್ಲಿ ಕಾಮಗಾರಿ ಆರಂಭವಾಗಲಿದೆ.ಒಂದು ಹಂತದ ಕಾಮಗಾರಿ ಪೂರ್ಣಗೊಂಡ ಬಳಿಕ ಉಜಿರೆಯಿಂದ ಚಾರ್ಮಾಡಿ ತನಕ ಮರ ತೆರವು,ವಿದ್ಯುತ್ ಕಂಬಗಳ ಸ್ಥಳಾಂತರ ಕಾರ್ಯ ಮುಂದುವರಿಯಲಿದೆ.

ಪರಿಶೀಲನೆ: ಶನಿವಾರ ಗುತ್ತಿಗೆದಾರ ಡಿ.ಪಿ.ಜೈನ್ ಅವರೊಂದಿಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಮುಖ್ಯ ಎಂಜಿನಿಯರ್ ರಮೇಂದ್ರ, ಕಾರ್ಯಪಾಲಕ ಎಂಜಿನಿಯರ್ ಶಿವಪ್ರಸಾದ್ ಅಜಿಲ ಅವರ ತಂಡ ಆಗಮಿಸಿ ಕಾಮಗಾರಿ ನಡೆಯುತ್ತಿರುವ ಹೆದ್ದಾರಿ ಉದ್ದಕ್ಕೂ ರಸ್ತೆ, ತಡೆಗೋಡೆ, ಚರಂಡಿ ಸೇತುವೆ, ಕಿರು ಸೇತುವೆ ಇತ್ಯಾದಿಗಳ ನಿರ್ಮಾಣ ಕಾಮಗಾರಿಯ ಪರಿಶೀಲನೆ ನಡೆಸಿ ಗುತ್ತಿಗೆದಾರರಿಗೆ ಕೆಲವು ಸಲಹೆ- ಸೂಚನೆ ನೀಡಿ ಮಾಹಿತಿ ಪಡೆಯಿತು.

ಸಹಾಯಕ ಕಾರ್ಯ ಪಾಲಕ ಎಂಜಿನಿಯರ್‌ಗಳಾದ ನಾಗರಾಜ್, ಮಹಾಬಲ ನಾಯ್ಕ್, ಕೀರ್ತಿ ಅಮೀನ್ ಹಾಗೂ ಇತರರು ತಂಡದಲ್ಲಿದ್ದರು.ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕ ನಡೆಯುತ್ತಿರುವ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ವೀಕ್ಷಿಸಲಾಗಿದೆ. ಸೇತುವೆ ನಿರ್ಮಾಣದ ಹೆಚ್ಚಿನ ಕಾಮಗಾರಿ ಮೇ ಅಂತ್ಯದೊಳಗೆ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಹೆದ್ದಾರಿ ಅಭಿವೃದ್ಧಿ ಕಾಮಗಾರಿ ವೇಳೆ ಸಾರ್ವಜನಿಕರಿಗೆ, ವಾಹನ ಸವಾರರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಕಾಮಗಾರಿ ನಡೆಸಲು ತಿಳಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ ಶಿವಪ್ರಸಾದ್‌ ಅಜಿಲ ಮಾಹಿತಿ ನೀಡಿದರು.