ರೈತರು ಕೀಟನಾಶಕ ಬಳಸದೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ರಸಗೊಬ್ಬರ ಹಾಕಿ ಬೆಳೆದ ರಾಸಾಯನಿಕ ಮುಕ್ತ ಭತ್ತ ಖರೀದಿ ಕೇಂದ್ರ ಇದಾಗಿದೆ. ರೈತರ ಮನೆ ಮನೆಯ ಬಾಗಿಲಲ್ಲೇ ಪ್ರತಿ ಕ್ವಿಂಟಲ್ ಗೆ 2500 ರು. ಬೆಲೆ ನೀಡಿ ಭತ್ತ ಖರೀದಿಸಲಾಗುತ್ತದೆ.
ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಗೆಜ್ಜಲಗೆರೆ ಗ್ರಾಮದ ಸಕ್ಕರೆ ನಾಡು ರೈತ ಉತ್ಪಾದಕರ ಕಂಪನಿಯಿಂದ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನದ ಅಡಿ ರಾಸಾಯನಿಕ ಮುಕ್ತ ಭತ್ತ ಖರೀದಿ ಕೇಂದ್ರಕ್ಕೆ ಚಾಲನೆ ನೀಡಲಾಯಿತು.ರೈತ ಉತ್ಪಾದಕ ಕೇಂದ್ರದ ಗೋದಾಮಿನಲ್ಲಿ ಬತ್ತ ಖರೀದಿ ಕೇಂದ್ರ ಪ್ರಕ್ರಿಯೆಗೆ ಮದ್ದೂರು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಎಚ್.ಜಿ.ಪ್ರತಿಭಾ ಚಾಲನೆ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ದಾನ್ಯ ಮಾರಾಟ ಪ್ರಕ್ರಿಯೆಯಲ್ಲಿ ದಲ್ಲಾಳಿಗಳು ಮತ್ತು ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರಿಗೆ ಹೆಚ್ಚಿನ ಲಾಭ ಸಿಗುವಂತೆ ಮಾಡುವ ಉದ್ದೇಶದಿಂದ ಖರೀದಿ ಕೇಂದ್ರ ತೆರೆಯಲಾಗಿದೆ ಎಂದರು.
ರೈತರು ಕೀಟನಾಶಕ ಬಳಸದೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ರಸಗೊಬ್ಬರ ಹಾಕಿ ಬೆಳೆದ ರಾಸಾಯನಿಕ ಮುಕ್ತ ಭತ್ತ ಖರೀದಿ ಕೇಂದ್ರ ಇದಾಗಿದೆ. ರೈತರ ಮನೆ ಮನೆಯ ಬಾಗಿಲಲ್ಲೇ ಪ್ರತಿ ಕ್ವಿಂಟಲ್ ಗೆ 2500 ರು. ಬೆಲೆ ನೀಡಿ ಭತ್ತ ಖರೀದಿಸಲಾಗುತ್ತದೆ ಎಂದರು.ಖರೀದಿಸಿದ ಭತ್ತವನ್ನು 6 ರಿಂದ 8 ತಿಂಗಳು ಸಂಗ್ರಹ ಮಾಡಿದ ನಂತರ ಮೌಲ್ಯವರ್ಧನೆ ಮಾಡಿ ನಮ್ಮದೇ ಬ್ರಾಂಡ್ ಮೂಲಕ ಮಾರಾಟ ಮಾಡಿ ಅದರಿಂದ ಬರುವ ಲಾಭ ಅಂಶವನ್ನು ರೈತರಿಗೆ ಹಂಚಲಾಗುವುದು ಎಂದು ಸ್ಪಷ್ಟಪಡಿಸಿದರು.
ಮದ್ದೂರು ತಾಲೂಕಿನಲ್ಲಿ ನಡೆದ ಭತ್ತವನ್ನು ಗೆಜ್ಜಲಗೆರೆ ಗ್ರಾಮದ ಸಕ್ಕರೆ ನಾಡುರೈತ ಉತ್ಪಾದಕರ ಕೇಂದ್ರದ ಖರೀದಿಸಲಿದೆ. ಚೀಲದ ತೂಕ ಮತ್ತು ತೇವಾಂಶ ಕಳೆದು ಎಲೆಕ್ಟ್ರಾನಿಕ್ ಉಪಕರಣದಿಂದ ಪರೀಕ್ಷೆ ನಡೆಸಿ ಯಾವುದೇ ಕಾರಣಕ್ಕೂ ಮೋಸವಾಗದಂತೆ ತೂಕ ಹಾಕಲಾಗುವುದು ಸ್ಪಷ್ಟಪಡಿಸಿದರು.ಸಕ್ಕರೆ ನಾಡು ರೈತ ಉತ್ಪಾದಕರ ಕೇಂದ್ರದ ಅಧ್ಯಕ್ಷ ಜಿ.ಸಿ.ಮಹೇಂದ್ರ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ 1500ಕ್ವಿಂಟಲ್ ಬತ್ತ ಖರೀದಿ ಗುರಿ ಹೊಂದಲಾಗಿದೆ. ಈಗಾಗಲೇ 300 ಕ್ವಿಂಟಲ್ ಖರೀದಿ ಮಾಡಲಾಗಿದೆ. ತಳಿಗಳಾದ ಮುಂಡಗ 25 ಕ್ವಿಂಟಲ್, ಕೆಂಪು ಸಣ್ಣ 100 ಕ್ವಿಂಟಲ್, ಗೌರೀ ಸಣ್ಣ 10 ಕ್ವಿಂಟಲ್ ಹಾಗೂ ಎಚ್ಎಂಟಿ 10ಕ್ವಿಂಟಲ್ ಖರೀದಿಸಲಾಗಿದೆ ಎಂದು ತಿಳಿಸಿದರು.
ಈ ವೇಳೆ ಕೃಷಿ ಅಧಿಕಾರಿ ರೂಪಶ್ರೀ, ಕೇಂದ್ರದ ನಿರ್ದೇಶಕ ರಾಕೇಶ್ ಪಟೇಲ್, ಸೋಮಶೇಖರ್, ಬಿ ಆರ್ ಸಿ ಜಿ.ಎಂ,ಸಿದ್ದರಾಜು ಬಿ .ಎಲ್. ಚಂದ್ರಶೇಖರ್ ಮತ್ತಿತರರಿದ್ದರು.