ಶಾಂತಿಗ್ರಾಮ ಹೋಬಳಿ ವ್ಯಾಪ್ತಿಯ ಚಿಗಳ್ಳಿ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲುಗಣಿಗಾರಿಕೆ ಮತ್ತು ಅಕ್ರಮ ಕ್ರಷರ್‌ಗಳ ವಿರುದ್ಧ ಹೋರಾಟ ನಡೆಸುತ್ತಿರುವ ಗ್ರಾಮಸ್ಥರ ಮೇಲೆ ಗೂಂಡಾಗಳಿಂದ ಹಲ್ಲೆ ನಡೆಸಲಾಗಿದೆ. ಹಾಗೂ ಹೋರಾಟಗಾರರನ್ನು ಮೌನಗೊಳಿಸುವ ಉದ್ದೇಶದಿಂದ ಸುಳ್ಳು ಅಟ್ರಾಸಿಟಿ ಪ್ರಕರಣ ದಾಖಲಿಸಲಾಗಿದೆ ಕೂಡಲೇ ಅಕ್ರಮ ಗಣಿಗಾರಿಕೆ ನಿಲ್ಲಿಸದಿದ್ದರೇ ಮತ್ತೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಕೆ.ಪಿ. ಶಿವಕುಮಾರ್ ಮತ್ತು ಚಿಗಳ್ಳಿ ಗ್ರಾಮಸ್ಥರು ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ತಾಲೂಕಿನ ಶಾಂತಿಗ್ರಾಮ ಹೋಬಳಿ ವ್ಯಾಪ್ತಿಯ ಚಿಗಳ್ಳಿ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲುಗಣಿಗಾರಿಕೆ ಮತ್ತು ಅಕ್ರಮ ಕ್ರಷರ್‌ಗಳ ವಿರುದ್ಧ ಹೋರಾಟ ನಡೆಸುತ್ತಿರುವ ಗ್ರಾಮಸ್ಥರ ಮೇಲೆ ಗೂಂಡಾಗಳಿಂದ ಹಲ್ಲೆ ನಡೆಸಲಾಗಿದೆ. ಹಾಗೂ ಹೋರಾಟಗಾರರನ್ನು ಮೌನಗೊಳಿಸುವ ಉದ್ದೇಶದಿಂದ ಸುಳ್ಳು ಅಟ್ರಾಸಿಟಿ ಪ್ರಕರಣ ದಾಖಲಿಸಲಾಗಿದೆ ಕೂಡಲೇ ಅಕ್ರಮ ಗಣಿಗಾರಿಕೆ ನಿಲ್ಲಿಸದಿದ್ದರೇ ಮತ್ತೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಕೆ.ಪಿ. ಶಿವಕುಮಾರ್ ಮತ್ತು ಚಿಗಳ್ಳಿ ಗ್ರಾಮಸ್ಥರು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಗ್ರಾಮದ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಕಲ್ಲುಗಣಿಗಾರಿಕೆ ಹಾಗೂ ಕ್ರಷರ್ ಚಟುವಟಿಕೆಗಳಿಂದ ಪರಿಸರ ಹಾನಿ, ಧೂಳು, ಶಬ್ದ ಮಾಲಿನ್ಯ ಮತ್ತು ಕೃಷಿಗೆ ತೀವ್ರ ಹಾನಿಯಾಗುತ್ತಿದ್ದು, ಇದನ್ನು ವಿರೋಧಿಸಿ ಗ್ರಾಮಸ್ಥರು ಕಳೆದ ಹಲವು ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ.

ಈ ಕುರಿತು ಸಂಬಂಧಪಟ್ಟ ಇಲಾಖೆಗಳಿಗೆ, ಹಾಸನ ಜಿಲ್ಲಾಧಿಕಾರಿಗಳಿಗೆ ಅನೇಕ ಬಾರಿ ದೂರು ಸಲ್ಲಿಸಲಾಗಿದ್ದು, ಈ ಹಿಂದೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವೂ ನಡೆಸಲಾಗಿದೆ ಎಂದರು. ಉಪವಾಸ ಸತ್ಯಾಗ್ರಹದ ವೇಳೆ ಸ್ಥಳಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿಗಳು ಖುದ್ದಾಗಿ ಪರಿಸ್ಥಿತಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ಉಪವಾಸ ಕೈಬಿಡುವಂತೆ ಮನವಿ ಮಾಡಿದ್ದರು. ಆದರೆ ಇಷ್ಟುವರೆಗೆ ಯಾವುದೇ ಸ್ಪಷ್ಟ ಹಾಗೂ ಪರಿಣಾಮಕಾರಿ ಕ್ರಮ ಕೈಗೊಳ್ಳದಿರುವುದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನ ಮತ್ತು ಅನುಮಾನಕ್ಕೆ ಕಾರಣವಾಗಿದೆ ಎಂದು ಹೇಳಿದರು.ಹೊಳೆನರಸೀಪುರ ಕ್ಷೇತ್ರದ ಶಾಸಕ ಎಚ್.ಡಿ. ರೇವಣ್ಣ ಅವರು ಈ ಹಿಂದೆ ಸಾರ್ವಜನಿಕವಾಗಿ ಕಲ್ಲುಗಣಿಗಾರಿಕೆಯಿಂದ ಜನರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಮಾತನಾಡಿದ್ದರೂ, ಇದೀಗ ಅವರದೇ ಕ್ಷೇತ್ರದ ಚಿಗಳ್ಳಿ ಹಾಗೂ ಅಂಕನಹಳ್ಳಿ ಸರ್ವೇ ನಂಬರ್‌ಗಳಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಬಗ್ಗೆ ಮೌನ ವಹಿಸಿರುವುದು ಅನುಮಾನ ಮೂಡಿಸುತ್ತಿದೆ ಎಂದು ಗ್ರಾಮಸ್ಥರು ಪ್ರಶ್ನಿಸಿದರು.

ಕೀರ್ತನಾ ಕ್ರಷರ್ ಮಾಲೀಕರಾಗಿರುವ, ಜೆಡಿಎಸ್ ಮುಖಂಡ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಪುಟ್ಟೇಗೌಡ ಅವರೇ ಈ ಎಲ್ಲಾ ಗಲಾಟೆ, ಗೂಂಡಾ ದಾಳಿ ಹಾಗೂ ಸುಳ್ಳು ಪ್ರಕರಣಗಳಿಗೆ ನೇರ ಕಾರಣರಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು. ಡಿ. 4/12/2025 ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಿದ ಕೇವಲ ಎರಡು ದಿನಗಳಲ್ಲೇ, ಹೋರಾಟಗಾರರ ವಿರುದ್ಧ ಸುಳ್ಳು ಅಟ್ರಾಸಿಟಿ ಕೇಸ್‌ ದಾಖಲಿಸಲಾಗಿದೆ. ಜೊತೆಗೆ ಕ್ರಷರ್ ಮಾಲೀಕರ ಪರವಾಗಿ ಗೂಂಡಾಗಳನ್ನು ಬಿಟ್ಟು ಗ್ರಾಮಸ್ಥರ ಮನೆಗಳಿಗೆ ನುಗ್ಗಿ ಹಲ್ಲೆ ಮಾಡಲಾಗಿದೆ ಎಂದು ದೂರಿದರು. ಇದರಿಂದ ಗ್ರಾಮದಲ್ಲಿ ಭಯಭೀತಿಯ ವಾತಾವರಣ ನಿರ್ಮಾಣವಾಗಿದ್ದು, ಜನರು ಪ್ರಾಣಭಯದಲ್ಲಿ ಜೀವನ ನಡೆಸುವ ಸ್ಥಿತಿ ಎದುರಾಗಿದೆ ಎಂದುಹೇಳಿದರು.

ಒಂದು ಕಡೆ ಅಕ್ರಮ ಕಲ್ಲುಗಣಿಗಾರಿಕೆ ಮತ್ತು ಕ್ರಷರ್‌ಗಳಿಂದ ರೈತರ ಬದುಕು ನಲುಗಿದ್ದು, ಇನ್ನೊಂದು ಕಡೆ ಗೂಂಡಾ ವರ್ತನೆಗಳಿಂದ ಶಾಂತಿ ಕದಡಿರುವುದು ದುರಂತಕರ ಸಂಗತಿ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಅಕ್ರಮ ಕ್ರಷರ್ ಹಾಗೂ ಕಲ್ಲುಗಣಿಗಾರಿಕೆಯನ್ನು ತಕ್ಷಣವೇ ನಿಲ್ಲಿಸಿ, ಗೂಂಡಾ ದಾಳಿ ಹಾಗೂ ಸುಳ್ಳು ಪ್ರಕರಣಗಳ ಕುರಿತು ನ್ಯಾಯಸಮ್ಮತ ತನಿಖೆ ನಡೆಸದಿದ್ದಲ್ಲಿ ಮತ್ತೊಮ್ಮೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಲಾಗುವುದು ಎಂದು ಚಿಗಳ್ಳಿ ಗ್ರಾಮಸ್ಥರು ಕಠಿಣ ಎಚ್ಚರಿಕೆ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಗ್ರಾಮದ ಉದಯ, ವಿನಯ್, ರಾಮಲಿಂಗೇಗೌಡ, ರಮೇಶ್, ಶಿವಕುಮಾರ್, ವರದರಾಜು ಸೇರಿದಂತೆ ಇತರ ಗ್ರಾಮಸ್ಥರು ಉಪಸ್ಥಿತರಿದ್ದರು.