ಮಹಾನಗರ ಪಾಲಿಕೆಯಿಂದ ಹಸ್ತಾಂತರಗೊಂಡಿರುವ ವಾಣಿಜ್ಯ ಸಂಕೀರ್ಣಗಳನ್ನು ಸಾರ್ವಜನಿಕರ ಉಪಯೋಗಕ್ಕೆ ನೀಡದೆ ಕೋಟ್ಯಾಂತರ ರು. ನಷ್ಟಮಾಡುತ್ತಿರುವುದನ್ನು ವಿರೋಧಿಸಿ ಮತ್ತು ಪಾಲಿಕೆಯ ಅಧಿಕಾರಿಗಳ ದುರಾಡಳಿತದಿಂದ ನಾಗರೀಕರಿಗೆ ಆಗುತ್ತಿರುವ ತೊಂದರೆಗಳನ್ನು ಖಂಡಿಸಿ ರಾಷ್ಟ್ರಭಕ್ತರ ಬಳಗದಿಂದ ಜನವರಿ 3ರಂದು ನಗರದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರಭಕ್ತ ಬಳಗದ ಪ್ರಮುಖರಾದ ಕೆ.ಈ. ಕಾಂತೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮಹಾನಗರ ಪಾಲಿಕೆಯ ಅವಾಂತರಗಳ ಬಗ್ಗೆ ಈ ಹಿಂದೆಯೇ ಗಮನ ಸೆಳೆಯಲಾಗಿತ್ತು. ಪಾಲಿಕೆಗೆ ಈಗಾಗಲೇ ವಾಣಿಜ್ಯ ಸಂಕೀರ್ಣಗಳಾದ ಶಿವಪ್ಪನಾಯಕ ಹೂವಿನ ಮಾರುಕಟ್ಟೆ, ಗಾರ್ಡನ್ ಏರಿಯಾ ವಾಣಿಜ್ಯ ಸಂಕಿರ್ಣ, ಗಾಂಧಿನಗರದ ವಾಣಿಜ್ಯ ಸಂಕೀರ್ಣಗಳಲ್ಲಿ ನಿರ್ಮಾಣವಾದ ಮಳಿಗೆಗಳನ್ನು ಇದುವರೆಗೂ ಬಾಡಿಗೆ ನೀಡಿಲ್ಲ. ಇದರಿಂದ ಮಹಾನಗರ ಪಾಲಿಕೆಗೆ ಸುಮಾರು 11.51 ಕೋಟಿಯಷ್ಟು ನಷ್ಟವಾಗುತ್ತದೆ ಎಂದು ಆರೋಪಿಸಿದರು.

ಜಿಲ್ಲಾಧಿಕಾರಿಗಳ ಆಟದ ಮೈದಾನ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಹಾನಗರ ಪಾಲಿಕೆಗೆ ಕೂಡಲೇ ವರದಿ ಕೊಡುವಂತೆ ತಿಳಿಸಿತ್ತು. ಹೈಕೋರ್ಟ್ ನೀಡಿದ ಸಮಯದ ಅವಧಿ ಮುಗಿದು ಐದು ತಿಂಗಳಾದರೂ ಕೂಡ ಮಹಾನಗರ ಪಾಲಿಕೆ ಆಯುಕ್ತರು ಯಾವುದೇ ಮೂಲ ದಾಖಲೆಗಳನ್ನು ಕೋರ್ಟಿಗೆ ಸಲ್ಲಿಸಿಲ್ಲ. ಕೂಡಲೇ ಸಲ್ಲಿಸಬೇಕು ಎಂದು ಆಗ್ರಹಿಸಿದರು.

ಆಶ್ರಯ ಯೋಜನೆಯ ಮನೆಗಳನ್ನು ಆದಷ್ಟುಬೇಗ ವಿತರಿಸಬೇಕು. ಇ-ಸ್ವತ್ತು ನೋಂದಾವಣೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಡೆಗಟ್ಟಬೇಕು. ನಗರದ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಸರಿಪಡಿಸಬೇಕು. ನಿರಂತರ ನೀರಿನ ಯೋಜನೆ ಸಮರ್ಪಕವಾಗಿ ಜಾರಿಗೊಳಿಸಬೇಕು. ಬೀದಿದೀಪ ಮತ್ತು ನಗರದ ಸ್ವಚ್ಛತೆಗೆ ಆದ್ಯತೆಕೊಡಬೇಕು. ಕೊಳಚೆ ಪ್ರದೇಶದ ನಿವಾಸಿಗಳಿಗೆ ಮೂಲಸೌಕರ್ಯ ಕಲ್ಪಿಸಬೇಕು. ಪೌರ ಕಾರ್ಮಿಕರಿಗೆ ಗೃಹಭಾಗ್ಯ ಯೋಜನೆ ತಲುಪಬೇಕು ಮತ್ತು ಪೌರಕಾರ್ಮಿಕರ ಭವನ ನಿರ್ಮಿಸಬೇಕು. ರೋಟರಿ ಅನಿಲ ಚಿತಾಗಾರವನ್ನು ದುರಸ್ತಿ ಮಾಡಬೇಕು. ಪಶುವೈದ್ಯಕೀಯ ಆ್ಯಂಬುಲೆನ್ಸ್ ಸೇವೆಯು ಸಾರ್ವಜನಿಕರಿಗೆ ನೀಡಬೇಕು ಎಂದು ಒತ್ತಾಯಿಸಿದರು.

ಈ ಎಲ್ಲಾ ಸಮಸ್ಯೆಗಳನ್ನು ಇಟ್ಟುಕೊಂಡು ಪಾಲಿಕೆ ತುರ್ತಾಗಿ ಸ್ಪಂದಿಸಬೇಕು. ಈ ಸಮಸ್ಯೆಗಳ ಹಿನ್ನೆಲೆಯಲ್ಲಿ ರಾಷ್ಟ್ರಭಕ್ತರ ಬಳಗದ ಸಾವಿರಾರು ಕಾರ್ಯಕರ್ತರು ಮತ್ತು ಸಾರ್ವಜನಿಕರು ಜ.೩ರ ಬೆಳಿಗ್ಗೆ ೧೦ಗಂಟೆಗೆ ನಗರದ ರಾಮಣ್ಣಶೆಟ್ಟಿ ಆವರಣದಿಂದ ಪ್ರತಿಭಟನಾ ಮೆರವಣಿಗೆಯ ಮೂಲಕ ಪಾಲಿಕೆಯ ಆವರಣದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.

ಗೋಷ್ಠಿಯಲ್ಲಿ ಪ್ರಮುಖರಾದ ವಿಶ್ವಾಸ್, ಬಾಲು, ಶ್ರೀಕಾಂತ್, ಮೋಹನ್‌ಜಾದವ್, ಶಕುಂತಲಾ, ಶಶಿಕಲಾ, ಚಿದಾನಂದ, ಕುಬೇರಪ್ಪ, ನಾಗರತ್ನಮ್ಮ, ರಾಜೇಶ್ವರಿ, ಜಯಲಕ್ಷ್ಮೀ ಮೊದಲಾವರಿದ್ದರು.