ಮಕ್ಕಳಿಗೆ ಸಂಸ್ಕಾರವಂತ ಶಿಕ್ಷಣ ಅಗತ್ಯ: ಶ್ರೀಶಿವಸಿದ್ದೇಶ್ವರ ಸ್ವಾಮೀಜಿ

| Published : Nov 10 2025, 12:30 AM IST

ಮಕ್ಕಳಿಗೆ ಸಂಸ್ಕಾರವಂತ ಶಿಕ್ಷಣ ಅಗತ್ಯ: ಶ್ರೀಶಿವಸಿದ್ದೇಶ್ವರ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ವ್ಯಕ್ತಿಯ ಸಾಮರ್ಥ್ಯ ಮತ್ತು ಭವಿಷ್ಯ ರೂಪಿಸುವಲ್ಲಿ ಶಿಕ್ಷಣ ಮಹತ್ವದ ಪಾತ್ರ ವಹಿಸುತ್ತದೆ. ಸಮಾಜದ ಬದಲಾವಣೆಗೆ ಶಿಕ್ಷಣವೇ ದಿವ್ಯಮಂತ್ರ. ಮಕ್ಕಳು ಪಠ್ಯ ವಿಷಯಗಳ ಜೊತೆಗೆ ಸಂಸ್ಕಾರವನ್ನು ರೂಢಿಸಿಕೊಂಡರೆ ಉತ್ತಮ ಪ್ರಜೆಗಳಾಗುತ್ತಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ವಿಜ್ಞಾನ-ತಂತ್ರಜ್ಞಾನ ಯುಗದಲ್ಲಿ ಮಕ್ಕಳಿಗೆ ಸಂಸ್ಕಾರವಂತ ಶಿಕ್ಷಣ ಹೆಚ್ಚು ಅಗತ್ಯವಾಗಿದೆ ಎಂದು ತುಮಕೂರು ಶ್ರೀ ಸಿದ್ಧಗಂಗಾಮಠದ ಕಿರಿಯ ಶ್ರೀಗಳಾದ ಶ್ರೀಶಿವಸಿದ್ದೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾ ಮಂದಿರದಲ್ಲಿ ಭಾನುವಾರ ಕನ್ನಿಕಶಿಲ್ಪ ನವೋದಯ ಎಜುಕೇಷನ್ ಟ್ರಸ್ಟ್ ವತಿಯಿಂದ ಕೃತಿ ಲೋಕಾರ್ಪಣೆ, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ವ್ಯಕ್ತಿಯ ಸಾಮರ್ಥ್ಯ ಮತ್ತು ಭವಿಷ್ಯ ರೂಪಿಸುವಲ್ಲಿ ಶಿಕ್ಷಣ ಮಹತ್ವದ ಪಾತ್ರ ವಹಿಸುತ್ತದೆ. ಸಮಾಜದ ಬದಲಾವಣೆಗೆ ಶಿಕ್ಷಣವೇ ದಿವ್ಯಮಂತ್ರ. ಮಕ್ಕಳು ಪಠ್ಯ ವಿಷಯಗಳ ಜೊತೆಗೆ ಸಂಸ್ಕಾರವನ್ನು ರೂಢಿಸಿಕೊಂಡರೆ ಉತ್ತಮ ಪ್ರಜೆಗಳಾಗುತ್ತಾರೆ ಎಂದು ಆಶಯ ವ್ಯಕ್ತಪಡಿಸಿದರು.

ಬಡತನ, ನಿರುದ್ಯೋಗ ನಿವಾರಣೆಗೆ ಶಿಕ್ಷಣ ಅಗತ್ಯವಾಗಿದೆ. ಶಿಕ್ಷಣ ಇಂದು ಎಲ್ಲರ ಜೀವನದ ಅವಿಭಾಜ್ಯ ಅಂಗವಾಗಿದೆ. ದೇಶಕ್ಕೆ ಅಲಂಕಾರ ಪ್ರಿಯವೆಂದರೆ ಶಿಕ್ಷಣ. ಶಿಕ್ಷಣದಲ್ಲಿ ಪ್ರಗತಿ ಸಾಧಿಸಿದ ರಾಷ್ಟ್ರ ಅಭಿವೃದ್ಧಿಯಲ್ಲಿ ವೇಗವಾಗಿ ಮುನ್ನಡೆಯುತ್ತದೆ. ಸರ್ಕಾರಗಳು ಕೂಡ ರಾಷ್ಟ್ರದ ಪ್ರಗತಿಗೆ ಪೂರಕವಾದ ಮೌಲ್ಯಯುತ ಮತ್ತು ಗುಣಾತ್ಮಕ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು.

ಶಿಕ್ಷಣ ಸೇವೆಯಾಗಿ ಉಳಿಯದೆ ವ್ಯಾಪಾರೀಕರಣಗೊಂಡಿದೆ. ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವವರು ಲಾಭದ ದೃಷ್ಟಿಯಿಂದ ನೋಡುವರೇ ವಿನಃ ಸೇವಾವಲಯವಾಗಿ ಪರಿಗಣಿಸುವುದೇ ಇಲ್ಲ. ಕೆಲವು ಸಂಘ-ಸಂಸ್ಥೆಗಳು ಮಾತ್ರ ಸೇವೆಗಾಗಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವುದಾಗಿ ಹೇಳಿದರು.

ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವಂತಹ, ಸವಾಲುಗಳನ್ನು ಎದುರಿಸುವ, ತಂದೆ-ತಾಯಿಯರು, ಗುರು-ಹಿರಿಯರನ್ನು ಗೌರವದಿಂದ ಕಾಣುವಂತಹ ಸಂಸ್ಕಾರವಂತ, ನೈತಿಕ ಶಿಕ್ಷಣ ಅಗತ್ಯವಿದೆ. ಪಠ್ಯ ವಿಷಯಗಳಲ್ಲಿರುವುದೇ ಶಿಕ್ಷಣವಲ್ಲ. ಅದರ ಹೊರತಾಗಿರುವ ಜೀವನ ಶಿಕ್ಷಣ ಪ್ರಧಾನವಾದುದು. ಅದನ್ನು ಮಕ್ಕಳಿಗೆ ಕಲಿಸಿದಾಗ ಪ್ರಜ್ಞಾವಂತ, ಸುಸಂಸ್ಕೃತ ಮಕ್ಕಳನ್ನು ರಾಷ್ಟ್ರಕ್ಕೆ ಕೊಡುಗೆಯಾಗಿ ನೀಡಿದಂತಾಗುತ್ತದೆ ಎಂದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಮಾತನಾಡಿ, ಸ್ವಾರ್ಥಕ್ಕಾಗಿ ದುಡಿಯುವವರಿಗೆ ಎಂದಿಗೂ ಇತಿಹಾಸದಲ್ಲಿ ಸ್ಥಾನವಿರುವುದಿಲ್ಲ. ಸಮಾಜಕ್ಕಾಗಿ, ಇತರರಿಗಾಗಿ ದುಡಿಯುವವರು ಇತಿಹಾಸವನ್ನು ಸೇರುತ್ತಾರೆ. ವೈಯಕ್ತಿಕ ಸಾಧನೆಗಳನ್ನು ಬಿಂಬಿಸಿಕೊಳ್ಳುವ ಬದಲು ಇಂದಿನ ದಿನಗಳಲ್ಲಿ ಸಮಾಜಕ್ಕೆ ಪೂರಕ ಸೇವೆ ಸಲ್ಲಿಸುವ ಗುರಿಯನ್ನು ಹೊಂದಬೇಕು. ಶೋಷಿತರು, ನೊಂದ ಸಮಾಜಗಳಿಗೆ ಸ್ಪಂದಿಸಿ ಅಲ್ಲಿನ೦ ಸಾಮಾಜಿಕ ಅಗತ್ಯಗಳನ್ನು ಪೂರೈಸುವ ಸಂಕಲ್ಪ ಶಕ್ತಿ ಇರಬೇಕು ಎಂದರು.

ಇಂದಿನ ದಿನಮಾನಗಳಲ್ಲಿ ತಂದೆ-ತಾಯಿಯ ತ್ಯಾಗಕ್ಕೆ ಬೆಲೆ ಇಲ್ಲ. ಅವರ ಶ್ರಮದಿಂದ ವಿದ್ಯಾವಂತನಾದ ಮಕ್ಕಳು ವಿದೇಶಕ್ಕೆ ತೆರಳಿ ವೈಭವದ ಜೀವನ ನಡೆಸುತ್ತಾ ಹೆತ್ತವರನ್ನೇ ಮರೆಯುತ್ತಿದ್ದಾರೆ. ವೃದ್ಧಾಪ್ಯದಲ್ಲಿ ವೃದ್ಧಾಶ್ರಮದಲ್ಲಿ ಬದುಕು ಸಾಗಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಅದಕ್ಕಾಗಿ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಸಂಸ್ಕಾರವನ್ನು ಅವರಲ್ಲಿ ತುಂಬಬೇಕು ಎಂದರು.

ಕಾರ್ಯಕ್ರಮದಲ್ಲಿ ಕುವೆಂಪು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಸ್.ರಾಜರತ್ನಂ, ಡಾ.ಕೆ.ಎಂ.ವಸುಂಧರಾ, ಹೆಚ್.ಜಿ.ಶಿವಕುಮಾರ್, ಬೇಲೂರು ಸೋಮಶೇಖರ್, ಕೆ.ಎನ್.ಮಂಜುನಾಥ, ಟಿ.ಸತೀಶ್ ಜವರೇಗೌಡ, ಚಂದ್ರಶೇಖರ ದಡದಪುರ, ಡಾ.ಎಸ್.ಎಚ್.ದರ್ಶನ್‌ಗೌಡ, ಎಸ್.ಎಂ.ಶಿವಕುಮಾರ್, ಆರ್.ಪ್ರಭುಸ್ವಾಮಿ ಅವರನ್ನು ಅಭಿನಂದಿಸಲಾಯಿತು.

ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಜಿ.ಪ್ರಶಾಂತ್-ಪ್ರಥಮ, ಜೆ.ಎನ್.ಪದ್ಮಲತಾ, ಜಿ.ಸೀಮಾಬಾನು-ದ್ವಿತೀಯ, ಎಂ.ವೇದಾವತಿ, ಎಚ್.ಡಿ.ಶ್ರೀಕಂಠ, ಕೆ.ಎಂ.ಮಂಜುಳಾ-ತೃತೀಯ, ಎಸ್.ವಿಕ್ಟೋರಿಯಾ ಮೇರಿ, ಕೆ.ಶಿವಲಿಂಗಯ್ಯ, ಸಿ.ಡಿ.ಶಂಕರ್, ವೈ.ಸಿ.ಶ್ರೀಧರ್‌ಮೂರ್ತಿ-ಸಮಾಧಾನಕರ ಬಹುಮಾನ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮೀ, ನಂಜಮ್ಮ ಮೋಟೇಗೌಡ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಕೆ.ಟಿ.ಹನುಮಂತು, ಸಾಹಿತಿ ಪ್ರದೀಪ್‌ಕುಮಾರ್ ಎಬ್ರಿ, ಕನ್ನಿಕಾ ಶಿಲ್ಪ ನವೋದಯ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಎಚ್.ಬಿ.ರಾಮಕೃಷ್ಣ, ಕಾರ್ಯದರ್ಶಿ ಎಚ್.ಆರ್.ಕನ್ನಿಕಾ ಇತರರಿದ್ದರು.