ಸಾರಾಂಶ
5 ವರ್ಷದ ಒಳಗಿನ ಮಕ್ಕಳಿಗೆ ನಿಮೋನಿಯಾ ಬಾರದಿದ್ದರೆ ಅವರ ಬಾಲ್ಯವು ಉತ್ತಮವಾಗಿರುತ್ತದೆ ಎಂದು ನಾಗಲಾಪುರ ಗ್ರಾ.ಪಂ. ಅಧ್ಯಕ್ಷೆ ರೀನಾಬೆನ್ನಿ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
5 ವರ್ಷದ ಒಳಗಿನ ಮಕ್ಕಳಿಗೆ ನಿಮೋನಿಯಾ ಬಾರದಿದ್ದರೆ ಅವರ ಬಾಲ್ಯವು ಉತ್ತಮವಾಗಿರುತ್ತದೆ ಎಂದು ನಾಗಲಾಪುರ ಗ್ರಾ.ಪಂ. ಅಧ್ಯಕ್ಷೆ ರೀನಾಬೆನ್ನಿ ಅಭಿಪ್ರಾಯಪಟ್ಟರು.ಅವರು ಆರೋಗ್ಯ ಇಲಾಖೆ, ನಾಗಲಾಪುರ ಗ್ರಾ.ಪಂ. ಸಂಯುಕ್ತ ಆಶ್ರಯದಲ್ಲಿ ಗ್ರಾ.ಪಂ. ಕಚೇರಿಯಲ್ಲಿ ನಡೆದ ವಿಶ್ವ ನಿಮೋನಿಯಾ ದಿನಾಚರಣೆ ಹಾಗೂ ಗ್ರಾಮ ಆರೋಗ್ಯ ತರಬೇತಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿ, ಗ್ರಾಮ ಆರೋಗ್ಯ ತರಬೇತಿ ಹಾಗೂ ಈ ರೀತಿಯ ದಿನಾಚರಣೆಗಳು ಸಾರ್ವಜನಿಕರ ಆರೋಗ್ಯದ ರಕ್ಷಣೆಗೆ ಅನುಕೂಲವಾಗುತ್ತದೆ. ಗ್ರಾಮಸ್ಥರು ತಮ್ಮ ಆರೋಗ್ಯ ರಕ್ಷಣೆ ಮಾಡಿಕೊಂಡು ಗ್ರಾಮದ ಅಭಿವೃದ್ದಿಗೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ತಾಲೂಕು ಆರೋಗ್ಯಾಧಿಕಾರಿ ಡಾ. ವಿಜಯಕುಮಾರ್ ಮಾತನಾಡಿ, ಪ್ರತಿ ವರ್ಷ ನ.12 ರಂದು ವಿಶ್ವ ನಿಮೋನಿಯಾ ದಿನಾಚರಣೆ ಆಚರಿಸಲಾಗುತ್ತದೆ. ನಿಮೋನಿಯಾ ಕಾಯಿಲೆಯ ಬಗ್ಗೆ ಅರಿವನ್ನು ಮೂಡಿಸುವುದು, ಸಮೀಕ್ಷೆಯನ್ನು ನಡೆಸುವುದು, ನ್ಯೂಮೋನಿಯಾದಿಂದ ಮಕ್ಕಳ ಸಾವಿನ ಪ್ರಮಾಣ ತಡೆಗಟ್ಟುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.
ನಿಮೋನಿಯಾ ಒಂದು ಮಾರಣಾಂತಿಕ ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಐದು ವರ್ಷದ ಒಳಗಿನ ಮಕ್ಕಳ ಅತಿ ಹೆಚ್ಚು ಮರಣ ಉಂಟುಮಾಡುವ ಕಾಯಿಲೆಯಾಗಿದೆ. ನಿರಂತರ ಕೆಮ್ಮು, ಜ್ವರ, ಉಸಿರಾಟದ ತೊಂದರೆ, ಎದೆ ನೋವು, ಆಯಾಸ, ನಿಶ್ಯಕ್ತಿ, ಬೆವರುವುದು ಈ ಕಾಯಿಲೆಯ ಲಕ್ಷಣಗಳು. ಪ್ರತಿ ತಿಂಗಳು ಕ್ಷೇತ್ರ ಮಟ್ಟದ ಆರೋಗ್ಯ ಸಿಬ್ಬಂದಿಯವರು ಪ್ರತಿ ಮನೆಗೆ ಭೇಟಿ ನೀಡಿ ನಿಮೋನಿಯಾ ಸಮೀಕ್ಷೆ ನಡೆಸಿ ವರದಿ ನೀಡುತ್ತಾರೆ ಎಂದು ತಿಳಿಸಿದರು.ಗ್ರಾಮ ಪಂಚಾಯಿತಿ ಕಾರ್ಯಪಡೆ ತಂಡದವರಿಗೆ ಗ್ರಾಮ ಆರೋಗ್ಯ ತರಬೇತಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿಡಿಓ ಪ್ರೇಮ್‌ಕುಮಾರ್, ಆರೋಗ್ಯ ಇಲಾಖೆಯ ಡಾ. ಆಕರ್ಷ, ಡೈಸಿ. ಶೋಭಿ, ನಾಗಲತಾ, ಪವನಕರ್, ಶಶಿಕಲಾ ಮಂಜುಳಾ, ಗಾಯಿತ್ರಿ ಇದ್ದರು. ಇದೇ ಸಂದರ್ಭದಲ್ಲಿ ನಿಮೋನಿಯಾ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸುವ ಭಿತ್ತಿ ಪತ್ರ ಬಿಡುಗಡೆ ಮಾಡಲಾಯಿತು.