ಸಾರಾಂಶ
ದಶವಾರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದ ನನ್ನ ಒಳಿತಿಗಾಗಿ ಗ್ರಂಥಾಲಯ ಕಾರ್ಯಕ್ರಮಕ್ಕೆ ದಿಗ್ವಿಜಯ್ ಬೋಡ್ಕೆ ಚಾಲನೆ ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಮಕ್ಕಳ ಜ್ಞಾನಾರ್ಜನೆ, ವಿಮರ್ಶಾತ್ಮಕ ಚಿಂತನೆ ಹೆಚ್ಚಳಕ್ಕೆ ನನ್ನ ಒಳಿತಿಗಾಗಿ ಗ್ರಂಥಾಲಯ ಕಾರ್ಯಕ್ರಮ ಬಹಳ ಉಪಯುಕ್ತವಾಗಿದೆ. ಇದು ಗ್ರಾಮೀಣ ಭಾಗದ ಮಕ್ಕಳಿಗೆ ವರದಾನವಾಗಿದ್ದು, ಭವಿಷ್ಯದ ಸ್ಪರ್ಧಾತ್ಮಕ ಜಗತ್ತಿಗೆ ಅಣಿಗೊಳ್ಳಲು ಸಹಕಾರಿಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ದಿಗ್ವಿಜಯ್ ಬೋಡ್ಕೆ ತಿಳಿಸಿದರು.ತಾಲೂಕಿನ ದಶವಾರ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸಿಎಂಸಿಎ, ಚನ್ನಪಟ್ಟಣ ತಾಲೂಕು ಪಂಚಾಯತಿ ಹಾಗೂ ದಶವಾರ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ನನ್ನ ಒಳಿತಿಗಾಗಿ ಗ್ರಂಥಾಲಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಮನಗರ ಜಿಲ್ಲೆಯ ೩೦ ಗ್ರಾಮ ಪಂಚಾಯತಿ ಗ್ರಂಥಾಲಯಗಳಲ್ಲಿ ಏಕ ಕಾಲದಲ್ಲಿ ಉದ್ಘಾಟನೆಗೊಂಡಿದ್ದು, ಸುಮಾರು ೩೦೦೦ ಕ್ಕೂ ಹೆಚ್ಚು ಮಕ್ಕಳು ಇದರ ಪ್ರಯೋಜನ ಪಡೆಯಲಿದ್ದಾರೆ ಎಂದರು.ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ೧೨೬ ಗ್ರಾಮ ಪಂಚಾಯತಿ ಗ್ರಂಥಾಲಯಗಳಲ್ಲಿ ಕಾರ್ಯಕ್ರಮ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಈ ಕಾರ್ಯಕ್ರಮ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ. ಗ್ರಂಥಾಲಯಗಳಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಬಳಸಿಕೊಂಡು, ಉತ್ತಮ ಭವಿಷ್ಯ ಕಟ್ಟಿಕೊಳ್ಳಿ ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.
ಜಿಲ್ಲಾ ಮುಖ್ಯ ಗ್ರಂಥಾಲಯ ಅಧಿಕಾರಿ ಚನ್ನಕೇಶವ ಮಾತನಾಡಿ, ಇಡೀ ರಾಜ್ಯದಲ್ಲಿಯೇ ಇದೊಂದು ವಿನೂತನ ಕಾರ್ಯಕ್ರಮ. ೬ ರಿಂದ ೧೦ನೇ ತರಗತಿ ಮಕ್ಕಳಿಗಾಗಿ ಪ್ರತಿ ಭಾನುವಾರ, ಸಿಎಂಸಿಎ ಸಂಸ್ಥೆಯಿಂದ ಆನ್ ಲೈನ್ ಕಾರ್ಯಕ್ರಮ ಹಾಗೂ ಚಟುವಟಿಕೆ ಶೀಟ್ ಗಳ ಮೂಲಕ ಅನುಭವಾತ್ಮಕ ಕಲಿಕೆಗೆ ಅವಕಾಶ ಇರುತ್ತದೆ ಎಂದರು.ತಾಲೂಕು ಕಾರ್ಯನಿರ್ವಹಣಾ ಅಧಿಕಾರಿ ಶಿವಕುಮಾರ್ ಮಾತನಾಡಿ, ಜಗತ್ತಿನಲ್ಲಿ ಹೆಚ್ಚು ಗೌರವಿಸಲ್ಪಡುವವರು ವಿದ್ವಾಂಸರು. ಅದಕ್ಕೆ ಪೂರಕವಾದುದು ಶಿಕ್ಷಣ. ಸಿಎಂಸಿಎ ಸಂಸ್ಥೆಯ ಈ ಹಿಂದಿನ ಕಾರ್ಯಕ್ರಮಗಳು ಮಕ್ಕಳಲ್ಲಿ ಧನಾತ್ಮಕ ಬದಲಾವಣೆಗಳನ್ನು ತಂದಿವೆ. ಗ್ರಾಮೀಣ ಭಾಗದ ಮಕ್ಕಳು ಭಯ, ಸಂಕೋಚ ತೊರೆದು ಪ್ರತಿ ಭಾನುವಾರ ಗ್ರಂಥಾಲಯಕ್ಕೆ ಬರಬೇಕು ಎಂದರು.
ಸಿಎಂಸಿಎ ಸಂಸ್ಥೆಯ ಪಿಆರ್ ಮರುಳಪ್ಪ ಮಾತನಾಡಿ, ನಮ್ಮ ಸಂಸ್ಥೆ ಕಳೆದ ೨೪ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಪಂಚಾಯತಿ ಗ್ರಂಥಾಲಯಗಳಲ್ಲಿ ಪ್ರತಿ ವಾರ ಅನುಭೂತಿ, ವಿಮರ್ಶಾತ್ಮಕ ಚಿಂತನೆ ಮುಂತಾದ ವಿಭಿನ್ನ ವಿಷಯಗಳಿಗೆ ಸಂಬಂಧಿಸಿದ ಚಟುವಟಿಕೆ ಹಾಳೆಗಳನ್ನು ನೀಡಿ ಮಕ್ಕಳಿಗೆ ಮಾರ್ಗದರ್ಶನ ಮಾಡಲಿದ್ದಾರೆ. ಪ್ರತಿ ವಾರ ನುರಿತ ವಿಷಯ ಪರಿಣಿತರಿಂದ ಆನ್‌ಲೈನ್ ಕಾರ್ಯಕ್ರಮ ಆಯೋಜಿಸಲಾಗುವುದು. ಗ್ರಂಥಾಲಯಕ್ಕೆ ಬರುವ ಮಕ್ಕಳು ಕೌಶಲ್ಯಗಳನ್ನು ಮತ್ತು ಮೌಲ್ಯಗಳನ್ನು ಚಟುವಟಿಕೆ ಮೂಲಕ ಕಲಿಯಲು ಸಹಾಯ ಮಾಡಲಿದೆ ಎಂದು ಮಾಹಿತಿ ನೀಡಿದರು.ಗ್ರಾಮ ಪಂಚಾಯತಿ ಅಧ್ಯಕ್ಷ ಪಿ.ಎಂ. ನಂದೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಿಡಿಒ ಕೆ.ದೊಡ್ಡಲಿಂಗೇಗೌಡ, ಗ್ರಾಪಂ ಉಪಾಧ್ಯಕ್ಷೆ ನಳಿನಿ ಕಾಡಯ್ಯ, ಸದಸ್ಯರಾದ ಸೌಮ್ಯ, ವಾಣಿ, ಹನುಮಂತು, ಕೃಷ್ಣಪ್ಪ, ಪಂಚಾಯತಿ ವ್ಯಾಪ್ತಿಯ ಶಾಲಾ ಶಿಕ್ಷಕರು, ಸಿಎಂಸಿಎ ಸಂಸ್ಥೆಯ ಕಾರ್ಯಕ್ರಮ ಅಧಿಕಾರಿಗಳಾದ ಮಹಮ್ಮದ್ ಶಪೀ, ವಿಜಯ್ ರಾಂಪುರ, ಸಿಎಂಸಿಎ ಸಿಬ್ಬಂದಿ ವರ್ಗ ಹಾಜರಿದ್ದರು.