ಚಿಂತಾಮಣಿ: ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಚಿನ್ನಸಂದ್ರ ಗ್ರಾಪಂ ಅಭಿವೃದ್ಧಿ ಅಧಿಕಾರಿ ಗೀತಾ ಅವರನ್ನು ಜಿಪಂ ಸಿಇಒ ಇಲಾಖೆ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದ್ದಾರೆ.ತಾಲೂಕಿನ ಚಿನ್ನಸಂದ್ರ ಗ್ರಾಮ ಪಂಚಾಯಿತಿಗೆ ಖುದ್ದು ಸಿಇಒ ಡಾ.ವೈ. ನವೀನ್ ಭಟ್ ಜೂ.೨೩ರಂದು ಭೇಟಿ ನೀಡಿದಾಗ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿದ್ದ ಗೀತಾ ಅನೇಕ ರೀತಿಯ ಕರ್ತವ್ಯ ಲೋಪದ ಜೊತೆಗೆ ಗ್ರಾಮ ಪಂಚಾಯತಿಗೆ ಬರುವ ಅನುದಾನವನ್ನು ಸಮರ್ಪಕವಾಗಿ ಬಳಸದೇ ಇರುವುದು, ದುರ್ಬಳಕೆ ಮಾಡಿರುವುದು ಕಂಡು ಬಂದಿದೆ. ಗ್ರಾಪಂಗೆ ಸಿಇಒ ಭೇಟಿ ನೀಡಿ ಪರಿಶೀಲಿಸಿದಾಗ ಪಿಡಿಓ ಗೀತಾ ಗ್ರಾಪಂಗೆ ಸಮಯಕ್ಕೆ ಸರಿಯಾಗಿ ಬರುತ್ತಿರಲಿಲ್ಲ. ಸಾರ್ವಜನಿಕರು ಗ್ರಾಪಂಗೆ ಸಲ್ಲಿಸುವ ಅರ್ಜಿಗಳ ವಿಲೇವಾರಿ ಬಗ್ಗೆಯೂ ಗಮನ ಹರಿಸಿಲ್ಲ. ಗ್ರಾಪಂ ವ್ಯಾಪ್ತಿಯಲ್ಲಿ ಘನ ತ್ಯಾಜ್ಯವನ್ನು ಸಮರ್ಪಕವಾಗಿ ಸಂಗ್ರಹಿಸುತ್ತಿಲ್ಲ. ಸಂಗ್ರಹಿಸಿದ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೇ ಕೆರೆಗೆ ಎಸೆಯುತ್ತಿದ್ದರೆ ಎಂಬ ಆರೋಪದ ಜೊತೆಗೆ ಗ್ರಾಪಂ ವ್ಯಾಪ್ತಿಯಲ್ಲಿನ ಶುದ್ಧ ನೀರಿನ ಘಟಕಗಳಿಂದ ಸಂಗ್ರಹಿಸಿದ ಹಣವನ್ನು ಸರಿಯಾಗಿ ಬಳಸಿಲ್ಲ. ಘನ ತ್ಯಾಜ್ಯ ಘಟಕಕ್ಕೆ ಹಾದು ಹೋಗುವ ರಸ್ತೆಯನ್ನು ಒಂದು ವರ್ಷದಿಂದ ಸೂಚಿಸಿದರೂ ದುರಸ್ತಿ ಮಾಡಿಸಿಲ್ಲ. ಗ್ರಾಪಂಗಳ ಕುಡಿಯುವ ನೀರು ಸಂಗ್ರಹಣಾ ತೊಟ್ಟಿಗಳನ್ನು ಹಾಗೂ ಟ್ಯಾಂಕರ್‌ಗಳನ್ನು ಸರಿಯಾಗಿ ಸ್ವಚ್ಛಗೊಳಿಸುವಲ್ಲಿ ವಿಫಲರಾಗಿರುವ ಹಿನ್ನೆಲೆಯಲ್ಲಿ ಗೀತಾ ಅವರು ಸರ್ಕಾರಿ ಸೇವೆಯನ್ನು ಸಮರ್ಪಕವಾಗಿ ನಿರ್ವಹಿಸದೇ ಬೇಜವಾಬ್ದಾರಿ, ಉದಾಸೀನ ಹಾಗೂ ನಿರ್ಲಕ್ಷ್ಯ ತೋರಿದ್ದಾರೆಂದು ಸಿಇಒ ಸೇವೆಯಿಂದ ಅಮಾನತುಗೊಳಿಸಿರುವುದಾಗಿ ಆದೇಶಿಸಿದ್ದಾರೆ.