ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ:
ಜ್ಞಾನಸುಧಾ ಸ್ಕಾಲರ್‌ಶಿಪ್ ನೋಂದಣಿಗೆ ನಮ್ಮ ನಿರೀಕ್ಷೆಗೂ ಮೀರಿ ಅಭೂತಪೂರ್ವ ಪ್ರತಿಕ್ರಿಯೆ ಬಂದಿದ್ದು, ಸುಮಾರು 20,000ಕ್ಕೂ ಹೆಚ್ಚು ಅರ್ಜಿಗಳು ಸ್ವೀಕೃತವಾಗಿವೆ. ನಮ್ಮ ಕ್ಷೇತ್ರದ ವಿದ್ಯಾರ್ಥಿಗಳಲ್ಲಿ ಕಂಡುಬಂದಿರುವ ಈ ಶೈಕ್ಷಣಿಕ ಉತ್ಸಾಹ ನಿಜಕ್ಕೂ ಹೆಮ್ಮೆ ತಂದಿದೆ. ಯಾವೊಬ್ಬ ಅರ್ಹ ವಿದ್ಯಾರ್ಥಿಯೂ ಜ್ಞಾನಸುಧಾ ಸ್ಕಾಲರ್‌ಶಿಪ್‌ನಿಂದ ವಂಚಿತರಾಗಬಾರದು ಎಂಬುದು ನಮ್ಮ ಮುಖ್ಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ, ಪ್ರತಿಯೊಂದು ಅರ್ಜಿಯ ದಾಖಲಾತಿಗಳ ಪರಿಶೀಲನೆಯನ್ನು ಅತ್ಯಂತ ಕ್ರಮಬದ್ಧವಾಗಿ ಮತ್ತು ಪಾರದರ್ಶಕವಾಗಿ ಮಾಡಲಾಗುತ್ತಿದೆ ಎಂದು ಸಂಸದ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.ಕಾರ್ಯಕ್ರಮ ಮುಂದೂಡಿಕೆ: ಈ ಪರಿಶೀಲನಾ ಪ್ರಕ್ರಿಯೆಯನ್ನು ಯಾವುದೇ ಲೋಪದೋಷಗಳಿಲ್ಲದೆ ಅತ್ಯಂತ ನಿಖರವಾಗಿ ಪೂರ್ಣಗೊಳಿಸಲು ಇನ್ನೂ ಕೆಲವು ದಿನಗಳ ಕಾಲಾವಕಾಶದ ಅಗತ್ಯವಿದೆ. ಈ ಕಾರಣದಿಂದಾಗಿ, ಜೂ. 27ರಂದು ನಡೆಯಬೇಕಿದ್ದ ಸ್ಕಾಲರ್‌ಶಿಪ್ ವಿತರಣೆ ಕಾರ್ಯಕ್ರಮವನ್ನು ಕೆಲವು ದಿನಗಳ ಕಾಲ ಮುಂದೂಡಲಾಗಿದೆ.
ದಾಖಲೆಗಳ ಪರಿಶೀಲನೆ: ಅರ್ಜಿ ಸಲ್ಲಿಸಿರುವ ಬಹುತೇಕ ವಿದ್ಯಾರ್ಥಿಗಳು ಅಗತ್ಯ ದಾಖಲಾತಿಗಳನ್ನು ಯಶಸ್ವಿಯಾಗಿ ಸಲ್ಲಿಸಿದ್ದಾರೆ. ಇನ್ನು ಕೆಲವು ವಿದ್ಯಾರ್ಥಿಗಳ ಅರ್ಜಿಗಳ ಅಂತಿಮ ಪರಿಶೀಲನೆಗೆ ಕೆಲವು ಪೂರಕ ದಾಖಲೆಗಳ ಅಗತ್ಯವಿದ್ದು, ನಮ್ಮ ತಂಡ ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.ಸ್ಕಾಲರ್‌ಶಿಪ್ ವಿತರಣೆಯ ಪರಿಷ್ಕೃತ ದಿನಾಂಕ ಹಾಗೂ ಇನ್ನೂ ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲೇ ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇನೆ. ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಕೈಗೊಂಡಿರುವ ಈ ಪಾರದರ್ಶಕ ಪ್ರಕ್ರಿಯೆಗೆ ನಿಮ್ಮ ಸಹಕಾರ ಹೀಗೆಯೇ ಇರಲಿ. ನಿಮ್ಮ ಸಹಕಾರಕ್ಕೆ ಧನ್ಯವಾದಗಳು ಎಂದು ಸಂಸದ ಡಾ.ಕೆ. ಸುಧಾಕರ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿಕೆಬಿ-4 ಸಂಸದ ಡಾ.ಕೆ.ಸುಧಾಕರ್