ಧಾರವಾಡದಲ್ಲಿ ಕಳೆಗಟ್ಟುತ್ತಿದೆ ಕ್ರಿಸ್‌ಮಸ್‌ ಹಬ್ಬದ ಸಂಭ್ರಮ.!

| Published : Dec 21 2023, 01:15 AM IST

ಧಾರವಾಡದಲ್ಲಿ ಕಳೆಗಟ್ಟುತ್ತಿದೆ ಕ್ರಿಸ್‌ಮಸ್‌ ಹಬ್ಬದ ಸಂಭ್ರಮ.!
Share this Article
  • FB
  • TW
  • Linkdin
  • Email

ಸಾರಾಂಶ

ಒಂದು ತಿಂಗಳು ಕಾಲ ಧಾರವಾಡದ ವಿವಿಧ ಚರ್ಚ್‌ ಹಾಗೂ ಕ್ರೈಸ್ತರ ಮನೆ-ಮನೆಗಳಲ್ಲಿ ಹಬ್ಬದ ಸಂತಸ ಇಮ್ಮಡಿಯಾಗಿದೆ. ಕ್ರಿಸ್‌ಮಸ್‌ ಹಬ್ಬವನ್ನು ಆಚರಿಸಲು ಕ್ರೈಸ್ತ ಸಮುದಾಯ ಸಜ್ಜಾಗಿದೆ.

ಡಿಸೆಂಬರ್‌ 1ರಿಂದ ಶುರುವಾಗಿರುವ ಕ್ರಿಸ್‌ಮಸ್‌ ಹಬ್ಬದ ಸಂಭ್ರಮಬಸವರಾಜ ಹಿರೇಮಠ

ಕನ್ನಡಪ್ರಭ ವಾರ್ತೆ ಧಾರವಾಡ

ಯೇಸುಕ್ರಿಸ್ತನ ಹುಟ್ಟುಹಬ್ಬವಾಗಿ ಆಚರಿಸುವ ಕ್ರಿಸ್‌ಮಸ್‌, ಕ್ರೈಸ್ತ ಸಮುದಾಯದ ಪ್ರಮುಖ ಹಬ್ಬ. ಪ್ರತಿ ವರ್ಷದ ಡಿಸೆಂಬರ್‌ ತಿಂಗಳು ಬಂತೆಂದರೆ ಸಾಕು ಧಾರವಾಡದಲ್ಲಿ ವಿಶೇಷವಾಗಿ ಕ್ರಿಸ್‌ಮಸ್‌ ಹಬ್ಬದ ಸಂಭ್ರಮದ ಕಳೆ ಕಟ್ಟುತ್ತದೆ. ಒಂದು ತಿಂಗಳ ಕಾಲ ಧಾರವಾಡದ ವಿವಿಧ ಚರ್ಚ್‌ ಹಾಗೂ ಕ್ರೈಸ್ತರ ಮನೆ-ಮನೆಗಳಲ್ಲಿ ಹಬ್ಬದ ಸಂತಸ ಇಮ್ಮಡಿಯಾಗಿದೆ. ಕ್ರಿಸ್‌ಮಸ್‌ ಹಬ್ಬವನ್ನು ಆಚರಿಸಲು ಕ್ರೈಸ್ತ ಸಮುದಾಯ ಸಜ್ಜಾಗಿದೆ.

ಹಬ್ಬದ ವಿಶೇಷ

ಡಿಸೆಂಬರ್‌ 1ನೇ ತಾರೀಖಿಗೆ ಶುರುವಾಗುವ ಕ್ರಿಸ್‌ಹಬ್ಬದ ಸಂಭ್ರಮ ಬರೋಬ್ಬರಿ ಜನವರಿ 1ರ ವರೆಗೂ ನಡೆಯಲಿದೆ. ಡಿ. 1ರಂದು ಕ್ರೈಸ್ತನ ಆಗಮನ ಎಂದು ಕ್ರಿಸ್‌ಮಸ್‌ ಹಬ್ಬ ಶುರುವಾಗಲಿದೆ. ಏಸುಕ್ರಿಸ್ತನನ್ನು ಬರಮಾಡಿಕೊಳ್ಳುವ ಪ್ರಕ್ರಿಯೆಯಾಗಿ ಮನೆಮನೆಗೂ ತೆರಳಿ ಹಾಡುಗಳನ್ನು ಹಾಡಲಾಗುತ್ತದೆ. ಮಕ್ಕಳ ಕ್ರಿಸ್‌ಮಸ್‌ ಸಹ ನಡೆಯುತ್ತದೆ. ಒಂದು ತಿಂಗಳ ಕಾಲದ ನಾಲ್ಕು ಭಾನುವಾರ ಮೇಣದ ಬತ್ತಿ ಹಚ್ಚಿ ಚರ್ಚ್‌ಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಕ್ರೈಸ್ತರ ಮನೆಗಳಲ್ಲಿ ಪುಟ್ಟದಾದ ಕೊಟ್ಟಿಗೆ ಕಟ್ಟಿ ಕ್ರಿಸ್ತ ಜನನದ ಗೊಂಬೆಗಳನ್ನಿಡುವುದು, ಕ್ರಿಸ್ಮಸ್ ವೃಕ್ಷ ಇಟ್ಟು ಅಲಂಕರಿಸುವುದು, ವಿವಿಧ ಮರಗಳ ಎಲೆಗಳ ತೋರಣ ಕಟ್ಟುವುದು, ಹಬ್ಬದ ಅಂಗವಾಗಿ ತಯಾರಿಸಿದ ವಿಶಿಷ್ಟ ತಿಂಡಿಗಳನ್ನು ಹಾಗೂ ಉಡುಗೊರೆಗಳನ್ನು ಹಂಚುವುದು ಸಂಪ್ರದಾಯ. ಸಾಂಟಾ ಕ್ಲಾಸ್, ಉಡುಗೊರೆಗಳನ್ನು ಕೊಡುವುದು ಮತ್ತು ಪಡೆಯುವುದು ಹಬ್ಬದ ವಿಶೇಷಗಳಲ್ಲೊಂದು. ಮಕ್ಕಳಿಗೆ ಉಡುಗೊರೆಗಳನ್ನು ತಂದುಕೊಡಲು ಸಾಂಟಾ ಕ್ಲಾಸ್ ಬರುತ್ತಾನೆ ಎಂಬುದು ಕ್ರೈಸ್ತರ ನಂಬಿಕೆ ಎಂದು ಹೆಬಿಕ್‌ ಚರ್ಚ್‌ ಸದಸ್ಯ ವಿಲ್ಸನ್‌ ಮೈಲಿ ಕನ್ನಡಪ್ರಭಕ್ಕೆ ಕ್ರಿಸ್‌ಹಬ್ಬದ ಮಹತ್ವ ತಿಳಿಸಿದರು.

ಹೆಬಿಕ್‌ ಸ್ಮಾರಕ ಚರ್ಚ್

ಹೆಬಿಕ್‌ ಮೆಮೋರಿಯಲ್ ಚರ್ಚ್ ಧಾರವಾಡ ಜಿಲ್ಲೆಯ ಅತ್ಯಂತ ಹಳೆಯ ಚರ್ಚ್ ಆಗಿದ್ದು 1845ರಲ್ಲಿ ಸ್ಥಾಪನೆಯಾಯಿತು. ಇದು ಯುರೋಪಿಯನ್‌ ಶೈಲಿಯಲ್ಲಿದೆ. ಧಾರವಾಡದ ರೇಲ್ವೆ ಸ್ಟೇಶನ್‌ ರಸ್ತೆಯಲ್ಲಿ ರೆವರೆಂಡ್ ಲೆಹ್ನರ್ ನಿರ್ಮಿಸಿದರು. ಹಾಗೆಯೇ, ಹುಬ್ಬಳ್ಳಿಯ ರಾಜನಗರದ ಕಾಲೇಜು ರಸ್ತೆಯಲ್ಲಿರುವ ಹೋಲಿ ಕ್ರಾಸ್ ಚರ್ಚ್ ಪ್ರವಾಸಿಗರು ಮತ್ತು ಕ್ರಿಶ್ಚಿಯನ್ ಸಮುದಾಯದಿಂದ ತುಂಬಿರುವ ಜನಪ್ರಿಯ ಚರ್ಚ್. ಈ ಚರ್ಚ್ ಅನ್ನು 1890ರಲ್ಲಿ ನಿರ್ಮಿಸಲಾಯಿತು. ಇದರ ಹೊರತಾಗಿ ಧಾರವಾಡದ ಸೇಂಟ್‌ ಜೋಸೆಫ್‌, ಆಲ್ ಸೇಂಟ್‌ ರಾಮನಗರದಲ್ಲಿರುವ ಹೋರೇಬ್ ಪ್ರಾರ್ಥನಾ ಮಂದಿರ ಮತ್ತು ನಿರ್ಮಲ್ ನಗರ ಚರ್ಚ್‌ಗಳೂ ಇವೆ. ಡಿಸೆಂಬರ್‌ 25ರಂದು ಹಬ್ಬದ ಅಂಗವಾಗಿ ಆಯಾ ಚರ್ಚ್‌ಗಳ ಫಾದರ್‌ಗಳು ಕ್ರೈಸ್ತ ಸಮುದಾಯಕ್ಕೆ ಸಂದೇಶ ನೀಡುವರು.

ಕ್ರಿಸ್‌ಮಸ್‌ ಸಂದೇಶ

ಗಡಿಬಿಡಿಯಿಂದ ತುಂಬಿದ ಪ್ರಪಂಚದಲ್ಲಿ ಜನರಿಗೆ ಕ್ರಿಸ್‌ಮಸ್‌ ಹಬ್ಬ ಶಾಂತಿ, ಸುಖ, ನೆಮ್ಮದಿ ನೀಡಲಿ. ಉತ್ತಮ ಬಾಂಧವ್ಯ, ಸಂಬಂಧ ಹೊಂದಿ ಭಿನ್ನಾಭಿಪ್ರಾಯಗಳನ್ನು ತೆಗೆದುಹಾಕಿ ಮತ ಪಂಥಗಳೆಂಬ ಬಿರುಕು ಗೋಡೆಗಳನ್ನು ತೆಗೆದುಹಾಕಲಿ. 2023ನೇ ಇಸ್ವಿ ಆತಂಕ, ದುಗಡದಿಂದ ತುಂಬಿದ ವರ್ಷವಾಗಿದ್ದು, ಉಕ್ರೇನ್‌ ಹಾಗೂ ರಷ್ಯಾ ಮತ್ತು ಇಸ್ರೇಲ್‌ ಹಾಗೂ ಹಮಾಸ್‌ ದೇಶಗಳ ನಡುವೆ ಭೀಕರ ಯುದ್ಧಗಳು, ನಡೆದು ಅನೇಕ ಅಮಾಯಕರ ಸಾವು-ನೋವು ಉಂಟಾಗಿ ಹಾಗೂ ಆಸ್ತಿ-ಪಾಸ್ತಿ ಕಳೆದುಕೊಂಡರು. ದುರ್ಘಟನೆಗಳೂ ನಡೆದವು. ಕ್ರೈಸ್ತನ ಆಶೀರ್ವಾದದಿಂದ ನಾವು ಆರೋಗ್ಯವಾಗಿದ್ದೇವೆ. ಇನ್ಮುಂದೆ ಪ್ರೀತಿ, ಸಹೋದರತ್ವದಿಂದ ಸಾಗಬೇಕು. ಅಂದಾಗ ಕ್ರಿಸಮಸ್‌ ಹಬ್ಬಕ್ಕೆ ಮಹತ್ವ ಬರಲಿದೆ. ಏಸು ಎಲ್ಲರಿಗೂ ಆರೋಗ್ಯ, ಸಮೃದ್ಧಿ, ಸಮಾಧಾನ ನೀಡಲಿ ಎಂದು

ಬಾಸೆಲ್‌ ಮಿಶನ್‌ ಉಚ್ಛ ಶಿಕ್ಷಣ ಸಂಸ್ಥೆ ಅಧ್ಯಕ್ಷ, ಬಿಶೋಪ ರೆ. ಮಾರ್ಟಿನ್‌ ಬೋರ್ಗಾಯ್‌ ಕ್ರಿಸ್ಮಸ್ ಸಂದೇಶ ನೀಡಿದ್ದಾರೆ.