ಸಾರಾಂಶ
ಆಕಾಂಕ್ಷಿಗಳಲ್ಲಿ ಹುಮ್ಮಸ್ಸು । ಇಲ್ಲೂ ಮೈತ್ರಿ ಮಾಡಿಕೊಳ್ಳಿ; ಜೆಡಿಎಸ್ । ಕಾಂಗ್ರೆಸ್‌ಗೂ ಪ್ರತಿಷ್ಠೆ । ಬಿಜೆಪಿಗೆ ಸವಾಲು
ಶಿವಾನಂದ ಗೊಂಬಿಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಕಳೆದ ಮೂರೂವರೆ ವರ್ಷದ ಹಿಂದೆಯೇ ಅವಧಿ ಪೂರ್ಣವಾಗಿದ್ದರೂ ಚುನಾವಣೆ ನಡೆಯದ ಜಿಪಂ ಹಾಗೂ ತಾಪಂಗಳ ಎಲೆಕ್ಷನ್‌ಗೆ ಕಾಲ ಸನ್ನಿಹಿತವಾಗಿದೆ. ರಾಜ್ಯ ಸರ್ಕಾರ ಅತ್ತ ಮೀಸಲು ಪ್ರಕಟಿಸುತ್ತಿದೆ. ಇದರಿಂದ ಲೋಕಸಭೆ ಚುನಾವಣೆಗೂ ಮುನ್ನವೇ ಜಿಪಂ ತಾಪಂ ಚುನಾವಣೆ ನಡೆಯುವ ಸಾಧ್ಯತೆ ಅಲ್ಲಗೆಳೆಯುವಂತಿಲ್ಲ. ಇದರಿಂದ ರಾಜಕೀಯ ಚಟುವಟಿಕೆಗಳು ಬಿರಸುಗೊಂಡಿವೆ.ಮೂರೂವರೆ ವರ್ಷದ ಹಿಂದೆಯೇ ಜಿಪಂ, ತಾಪಂ ಅವಧಿ ಪೂರ್ಣವಾಗಿತ್ತು. ಬೇಗನೆ ಚುನಾವಣೆ ನಡೆಸಿ ಎಂದು ಟಿಕೆಟ್ ಆಕಾಂಕ್ಷಿಗಳು ದುಂಬಾಲು ಬೀಳುತ್ತಿದ್ದರು. ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸದೇ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುತ್ತಿದೆ ಎಂದು ಕಾಂಗ್ರೆಸ್ ಪಕ್ಷ ನಿರಂತರವಾಗಿ ಆರೋಪಿಸುತ್ತಿತ್ತು. ಎಂಎಲ್‌ಸಿ, ಎಂಎಲ್‌ಎ ಚುನಾವಣೆಗಳಲ್ಲಿ ಇದನ್ನು ಒಂದು ಅಸ್ತ್ರವನ್ನಾಗಿ ಕಾಂಗ್ರೆಸ್ ಮಾಡಿಕೊಂಡಿದ್ದು ಸುಳ್ಳಲ್ಲ.
ಇದೀಗ ಕಾಂಗ್ರೆಸ್ ಪಕ್ಷವೇ ಆಡಳಿತ ನಡೆಸುತ್ತಿದೆ. ಹೀಗಾಗಿ, ಕಾಂಗ್ರೆಸ್ಸಿಗರೆಲ್ಲರೂ ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದರು. ಇದೀಗ ಸರ್ಕಾರ ಪ್ರತಿಕ್ಷೇತ್ರದ ಮೀಸಲನ್ನು ಪ್ರಕಟಿಸಿದೆ. ಇದರಿಂದಾಗಿ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಮತ್ತೆ ಬಿರುಸುಗೊಂಡಂತಾಗಿದೆ.ಇಲ್ಲೂ ಮೈತ್ರಿ ಮಾಡಿಕೊಳ್ಳಿ:
ಇನ್ನು ಕೇಂದ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಎಂಪಿ ಎಲೆಕ್ಷನ್‌ನಲ್ಲಿ ಸೀಟು ಹಂಚಿಕೆ ಕುರಿತಂತೆ ಮಾತುಕತೆ ಕೂಡ ನಡೆಯುತ್ತಿದೆ. ಜಿಪಂ, ತಾಪಂ ಚುನಾವಣೆಯಲ್ಲೂ ಮೈತ್ರಿ ಮುಂದುವರಿಸಬೇಕು ಎಂಬ ಬೇಡಿಕೆ ಜೆಡಿಎಸ್‌ನದ್ದು. ಜೆಡಿಎಸ್‌ಗೆ ಇಲ್ಲಿ ಸಂಘಟನೆಯಿಲ್ಲ. ಈ ಮೈತ್ರಿಯಿಂದಾಗಿ ಕೆಲವೊಂದಿಷ್ಟು ಸೀಟುಗಳನ್ನು ಕೊಟ್ಟರೆ ಬಿಜೆಪಿ ನೆರವಿನೊಂದಿಗೆ ಸಲೀಸಾಗಿ ಗೆಲ್ಲಬಹುದು. ಮತ್ತೆ ಪಕ್ಷ ಸಂಘಟನೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ ಎಂಬ ಕೂಗು ಜೆಡಿಎಸ್‌ನದ್ದು. ಈ ನಿಟ್ಟಿನಲ್ಲಿ ಜೆಡಿಎಸ್ ವರಿಷ್ಠರಾದ ದೇವೇಗೌಡ, ಕುಮಾರಸ್ವಾಮಿ ಅವರಿಗೆ ಸ್ಥಳೀಯ ಮಟ್ಟದಲ್ಲೂ ಮೈತ್ರಿ ಮಾಡಿಕೊಳ್ಳುವಂತೆ ಕಾರ್ಯಕರ್ತರು ಒಕ್ಕೊರಲಿನಿಂದ ಆಗ್ರಹಿಸಿ ಮನವಿ ಸಲ್ಲಿಸಿದ್ದಾರಂತೆ.ಆದರೆ ಬಿಜೆಪಿ ಮುಖಂಡರು ಮಾತ್ರ ಮೈತ್ರಿ ಬಗ್ಗೆ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳುತ್ತಿದ್ದಾರೆ ಆದರೂ ಕಾರ್ಯಕರ್ತರದ್ದು ಮೈತ್ರಿ ಬೇಡ. ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಅಷ್ಟೇನೂ ಸಂಘಟನೆಯಾಗಿಲ್ಲ. ಸೀಟು ಹಂಚಿಕೆಯಾದರೆ ನಮಗೆ ಹಾನಿಯಾಗುತ್ತದೆ. ಮೈತ್ರಿ ಏನಿದ್ದರೂ ಲೋಕಸಭೆಗೆ ಸೀಮಿತವಾಗಿರಲಿ ಎಂಬ ಅಭಿಪ್ರಾಯವ್ಯಕ್ತಪಡಿಸುತ್ತಾರೆ ಎಂದು ಮೂಲಗಳು ತಿಳಿಸುತ್ತವೆ.
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಕೊಂಚ ಹಿನ್ನಡೆಯಾಗಿದೆ. ಅದನ್ನು ಈ ಚುನಾವಣೆಯಲ್ಲಿ ಸರಿದೂಗಿಸಿಕೊಳ್ಳಬೇಕೆಂಬ ಇರಾದೆ ಬಿಜೆಪಿಯದ್ದು. ಅದಕ್ಕಾಗಿ ಪಕ್ಷ ಸಂಘಟನೆ ಮತ್ತಷ್ಟು ಗಟ್ಟಿಗೊಳಿಸುವತ್ತ ಬಿಜೆಪಿ ಹೆಜ್ಜೆ ಇಟ್ಟಿದೆ. ಈಗಲೇ ಯಾವ್ಯಾವ ಕ್ಷೇತ್ರಗಳಿಗೆ ಯಾರನ್ನು ಹಾಕಿದರೆ ಗೆಲ್ಲಬಹುದು ಎಂಬ ಲೆಕ್ಕಾಚಾರವನ್ನೂ ಮಾಡುತ್ತಿದೆ.ಕಾಂಗ್ರೆಸ್‌ಗೂ ಪ್ರತಿಷ್ಠೆ:
ಈ ನಡುವೆ ರಾಜ್ಯದಲ್ಲಿ ಸರ್ಕಾರ ಹೊಂದಿರುವ ಕಾಂಗ್ರೆಸ್ ಕೂಡ ಈ ಸಲ ಹೆಚ್ಚಿನ ಸ್ಥಾನ ಪಡೆಯಬೇಕು. ರಾಜ್ಯ ಸರ್ಕಾರ ಇದ್ದಾಗಲೂ ನಾವು ಹೆಚ್ಚಿನ ಸ್ಥಾನ ಗಳಿಸದಿದ್ದರೆ ನಮಗೆ ಮುಖಭಂಗವಾಗುತ್ತದೆ. ಈ ನಿಟ್ಟಿನಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲೇಬೇಕೆಂಬ ಪ್ರತಿಷ್ಠೆ ಕಾಂಗ್ರೆಸ್‌ನದ್ದು.ಒಟ್ಟಿನಲ್ಲಿ ಜಿಪಂ ತಾಪಂ ಚುನಾವಣೆಗೆ ಮೀಸಲಾತಿ ಹೊರಡಿಸುತ್ತಿದ್ದಂತೆ ಇತ್ತ ಚಟುವಟಿಕೆಗಳು ಚುರುಕುಗೊಂಡಿವೆ. ಎಂಪಿ ಎಲೆಕ್ಷನ್‌ಗೂ ಮುನ್ನವೇ ಈ ಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದೆ. ಆದಷ್ಟು ಬೇಗನೆ ಘೋಷಣೆಯಾಗಲಿ ಎಂಬುದು ಆಕಾಂಕ್ಷಿಗಳ ಅಂಬೋಣ.
ಈ ಕುರಿತು ಮಾತನಾಡಿರುವ ಬಿಜೆಪಿ ಶಾಸಕ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಯಾವಾಗ ಬೇಕಾದರೂ ಚುನಾವಣೆ ಘೋಷಣೆಯಾದರೂ ಎದುರಿಸಲು ನಮ್ಮ ಪಕ್ಷ ಸಿದ್ಧವಾಗಿದೆ. ಇನ್ನು ಮೈತ್ರಿ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ ಎಂದಿದ್ದಾರೆ.ಇದೇವೇಳೆ ಪ್ರತಿಕ್ರಿಯಿಸಿರುವ ಜೆಡಿಎಸ್ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ, ಬಿಜೆಪಿ- ಜೆಡಿಎಸ್ ಎಂಪಿ ಎಲೆಕ್ಷನ್ ಮೈತ್ರಿ ಏನೋ ಆಗಿದೆ. ಅದೇ ಮಾದರಿಯಲ್ಲಿ ಜಿಪಂ ತಾಪಂಗಳಲ್ಲೂ ಮೈತ್ರಿ ಮಾಡಿಕೊಳ್ಳಬೇಕು. ಅಂದರೆ ಪಕ್ಷ ಸಂಘಟನೆಗೆ ಅನುಕೂಲವಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಧಾರವಾಡ ಜಿಲ್ಲೆಯಲ್ಲೆ ಎಷ್ಟು?ಧಾರವಾಡ ಜಿಪಂ- 28 ಸ್ಥಾನಗಳು (14 ಮಹಿಳಾ ಸ್ಥಾನ)ಅಳ್ನಾವರ ತಾಪಂ -7 ಸ್ಥಾನ (ಮಹಿಳಾ- 4)ಅಣ್ಣಿಗೇರಿ ತಾಪಂ- 7 (ಮಹಿಳಾ- 4)
ನವಲಗುಂದ ತಾಪಂ- 9 (ಮಹಿಳಾ- 5)ಕಲಘಟಗಿ ತಾಪಂ- 14 (ಮಹಿಳಾ- 7)
ಹುಬ್ಬಳ್ಳಿ- ತಾಪಂ- 15 (ಮಹಿಳಾ- 8)ಧಾರವಾಡ ತಾಪಂ- 22 (ಮಹಿಳಾ- 11)
ಕುಂದಗೋಳ- 15 (ಮಹಿಳಾ - 8)