ಎಲ್‌ಪಿಜಿ ಪೈಪ್‌ಲೈನ್ ಕಾಮಗಾರಿಗೆ ನಗರಸಭೆ ಅನುಮತಿ ಕಡ್ಡಾಯ: ಡೀಸಿ ಡಾ.ಕುಮಾರ

| Published : Sep 11 2024, 01:03 AM IST

ಎಲ್‌ಪಿಜಿ ಪೈಪ್‌ಲೈನ್ ಕಾಮಗಾರಿಗೆ ನಗರಸಭೆ ಅನುಮತಿ ಕಡ್ಡಾಯ: ಡೀಸಿ ಡಾ.ಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕರಿಗೆ ಸೌಲಭ್ಯ ಒದಗಿಸಲು ಕುಡಿಯುವ ನೀರಿನ ಪೈಪ್, ಯುಜಿಡಿ ಪೈಪ್ ಲೈನ್ ಇರುತ್ತದೆ. ಎಲ್‌ಪಿಜಿ ಪೈಪ್‌ಲೈನ್ ಕಾಮಗಾರಿಯಿಂದ ಜನರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪೂರ್ಣಗೊಂಡ ನಂತರ ಅಗೆದಿರುವ ರಸ್ತೆಯನ್ನು ಸರಿಪಡಿಸಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಪೈಪ್ ಲೈನ್ ಮೂಲಕ ಅನಿಲ ವಿತರಣೆ ಯೋಜನೆಯನ್ನು ಅನುಷ್ಠಾನಗೊಳಿಸಲು ಪೈಪ್ ಲೈನ್ ಹಾಕುವ ಕಾಮಗಾರಿಗೆ ಎ.ಜಿ.ಅಂಡ್ ಪಿ ಪ್ರಥಮ್ ಸಂಸ್ಥೆಯವರು ನಗರಸಭೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿ, ಸಾರ್ವಜನಿಕರಿಗೆ ಸೌಲಭ್ಯ ಒದಗಿಸಲು ಕುಡಿಯುವ ನೀರಿನ ಪೈಪ್, ಯುಜಿಡಿ ಪೈಪ್ ಲೈನ್ ಇರುತ್ತದೆ. ಎಲ್‌ಪಿಜಿ ಪೈಪ್‌ಲೈನ್ ಕಾಮಗಾರಿಯಿಂದ ಜನರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪೂರ್ಣಗೊಂಡ ನಂತರ ಅಗೆದಿರುವ ರಸ್ತೆಯನ್ನು ಸರಿಪಡಿಸಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು ಎಂದರು.

ನಗರ ಪ್ರದೇಶದಲ್ಲಿ ಪೈಪ್ ಲೈನ್ ಮೂಲಕ ಅನಿಲ ವಿತರಣೆ ಯೋಜನೆಯಡಿ ೬೫೦೦ ಸಂಪರ್ಕ ನೀಡುವ ಗುರಿ ಹೊಂದಿದ್ದು, ಶೀಘ್ರದಲ್ಲೇ ನಗರಸಭೆಯ ಎರಡು ವಾರ್ಡ್‌ಗಳಿಗೆ ಒದಗಿಸಲು ಯೋಜಿಸಲಾಗಿದೆ ಎಂದು ಎ.ಜಿ ಅಂಡ್ ಪಿ ಪ್ರಥಮ್ ಸಂಸ್ಥೆಯ ಉಪವಲಯ ಮುಖ್ಯಸ್ಥರು ಸಭೆಗೆ ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಪೈಪ್ ಲೈನ್ ಮೂಲಕ ಅನಿಲ ವಿತರಣೆಯ ಅನುಕೂಲತೆಯ ಬಗ್ಗೆ ಸಂಸ್ಥೆಯವರು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಕಾಮಗಾರಿ ನಡೆಯುವ ಸಂದರ್ಭದಲ್ಲಿ ನಗರಸಭೆಯೊಂದಿಗೆ ನಿರಂತರವಾಗಿ ಎ.ಜಿ.ಅಂಡ್ ಪಿ ಪ್ರಥಮ್ ಸಂಸ್ಥೆಯ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿ ಒಬ್ಬರು ಸ್ಥಳೀಯ ಅಧಿಕಾರಿಯನ್ನು ನಿಯೋಜಿಸುವಂತೆ ಸೂಚಿಸಿದರು.

ನೋಟಿಸ್‌ಗೆ ಸೂಚನೆ:

ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿಗೆ ಸಂಬಂಧಿಸಿದಂತೆ ನಿಗದಿಪಡಿಸಿದ ಗುರಿ ಸಾಧಿಸದ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡುವಂತೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.

ಈ ಹಿಂದೆ ಎರಡು ಅಥವಾ ಮೂರು ಪ್ರಗತಿ ಪರಿಶೀಲನೆ ಸಭೆ ನಡೆಸಿ ಪ್ರಗತಿ ಸಾಧಿಸಲು ಸೂಚನೆ ನೀಡಲಾಗಿತ್ತು. ಅದರಂತೆ ಪ್ರಗತಿ ಸಾಧಿಸದ ಮುಖ್ಯಸ್ಥರಿಗೆ ನೋಟಿಸ್ ಜಾರಿಗೊಳಿಸುವಂತೆ ನಿರ್ದೇಶನ ನೀಡಿದರು.

ಸಾರ್ವಜನಿಕ ಕೆಲಸಕ್ಕಾಗಿ ಬಿಡುಗಡೆಯಾಗುವ ಅನುದಾನ ಸಂಪೂರ್ಣವಾಗಿ ಪಾರದರ್ಶಕವಾಗಿ ವೆಚ್ಚವಾಗಬೇಕು. ಕುಡಿಯುವ ನೀರಿನ ಪರೀಕ್ಷೆಯನ್ನು ನಿಯಮಿತವಾಗಿ ನಡೆಸಿ ವರದಿಯನ್ನು ಪಡೆದುಕೊಳ್ಳಬೇಕು. ಕಲುಷಿತ ನೀರಿನಿಂದ ಯಾವುದಾದರೂ ತೊಂದರೆಯಾದಲ್ಲಿ ನಗರ ಸ್ಥಳೀಯ ಸಂಸ್ಥೆಯ ಮುಖ್ಯಸ್ಥರನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.

ಸ್ವಚ್ಛತಾ ಹೀ ಸೇವಾ ಆಂದೋಲನವನ್ನು ಸೆ.೧೫ ರಿಂದ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ಪೂರ್ಣಗೊಳಿಸಿ ಉದ್ಘಾಟನೆಗೊಳಿಸಿದರೆ ಅರ್ಥಪೂರ್ಣವಾಗಿರುತ್ತದೆ. ಸರ್ಕಾರದಿಂದ ಒದಗಿಸಲಾಗುತ್ತಿರುವ ಸೌಲಭ್ಯಗಳಿಗೆ ಆಸ್ತಿ ತೆರಿಗೆ ಕಟ್ಟಿಸಿಕೊಳ್ಳಲಾಗುತ್ತಿದೆ. ಆಸ್ತಿ ತೆರಿಗೆಯ ಪ್ರಗತಿ ಶೇ. ೫೬ ರಷ್ಟಿದ್ದು ಸಂಗ್ರಹಣೆಯ ಕೆಲಸವನ್ನು ಚುರುಕುಗೊಳಿಸುವಂತೆ ತಿಳಿಸಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಶಿವಮೂರ್ತಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷರಾಮಣಿ, ಎ.ಜಿ.ಅಂಡ್ ಪಿ ಪ್ರಥಮ್ ಸಂಸ್ಥೆಯ ಸಂಜಿತ್, ಚರಣ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.