ಸಮರ್ಪಕ ಕುಡಿವ ನೀರು ಪೂರೈಸಿ

| Published : Sep 11 2024, 01:03 AM IST

ಸಾರಾಂಶ

ನೀರಿನ ಕರ ತಪ್ಪದೆ ತುಂಬುತ್ತಿದ್ದೇವೆ. ಅದರೂ ಸಹ ನೀರು ಪೂರೈಸಲು ಪುರಸಭೆಯಿಂದ ಆಗುತ್ತಿಲ್ಲ

ಲಕ್ಷ್ಮೇಶ್ವರ: ಕಳೆದ ತಿಂಗಳಿಂದ ಕುಡಿಯುವ ನೀರು ಪೂರೈಸಿಲ್ಲ ಎಂದು ಆರೋಪಿಸಿ ಮಂಗಳವಾರ ಪಟ್ಟಣದ 10 ಮತ್ತು 16ನೇ ವಾರ್ಡ್‌ಗಳ ಮಹಿಳೆಯರು ಪುರಸಭೆಗೆ ದೌಡಾಯಿಸಿ ಪ್ರತಿಭಟನೆ ನಡೆಸಿದರು.

ತಿಂಗಳು ಕಳೆದರೂ ಕೂಡ ಪುರಸಭೆಯು ವಾರ್ಡ್‌ಗಳಲ್ಲಿ ಕುಡಿಯುವ ನೀರು ಪೂರೈಕೆ ಮಾಡಿಲ್ಲ. ಇದರಿಂದ ನಮಗೆ ತೊಂದರೆ ಆಗುತ್ತಿದೆ. ಹತ್ತು ಹಲವು ಬಾರಿ ನೀರು ಬಿಡುವಂತೆ ಮನವಿ ಮಾಡಿದರೂ ಸಹ ಪುರಸಭೆ ಕ್ಯಾರೆ ಎನ್ನುತ್ತಿಲ್ಲ ಎಂದು ಪ್ರತಿಭಟನಾನಿರತ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

ಮಹಿಳೆಯರು ಪುರಸಭೆ ಅಧ್ಯಕ್ಷ ಹಾಗೂ ಮುಖ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಪ್ರತಿ ವರ್ಷ ಪುರಸಭೆಗೆ ತುಂಬಬೇಕಾದ ನೀರಿನ ಕರ ತಪ್ಪದೆ ತುಂಬುತ್ತಿದ್ದೇವೆ. ಅದರೂ ಸಹ ನೀರು ಪೂರೈಸಲು ಪುರಸಭೆಯಿಂದ ಆಗುತ್ತಿಲ್ಲ. ನೀರು ಕೊಡದೆ ಕರ ಕಟ್ಟಿಸಿಕೊಳ್ಳುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಪುರಸಭೆ ಸದಸ್ಯ ಪ್ರವೀಣ ಬಾಳಿಕಾಯಿ, ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಸೇನೆ ಜಿಲ್ಲಾ ಅಧ್ಯಕ್ಷ ಶರಣು ಗೋಡಿ, ತಾಲೂಕು ಘಟಕದ ಅಧ್ಯಕ್ಷ ನಾಗೇಶ ಅಮರಾಪುರ ಮಾತನಾಡಿ, ನೀರು ಪೂರೈಸುವಲ್ಲಿ ಪುರಸಭೆ ಸಿಬ್ಬಂದಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದರಿಂದ ನೀರು ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿ ಜನರು ಪರದಾಡಬೇಕಾಗಿದೆ. ಆದಷ್ಟು ಬೇಗನೆ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.

ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರ್ಗಣ್ಣವರ ಮಾತನಾಡಿ, ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.ಆದಷ್ಟು ಬೇಗನೇ ಸಮಸ್ಯೆ ಪರಿಹರಿಸಿ ಸರಿಯಾಗಿ ನೀರು ಪೂರೈಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮುಖ್ಯಾಧಿಕಾರಿ ಮಹೇಶ ಹಡಪದ ಮಾತನಾಡಿ, ಮೇವುಂಡಿ ಜಾಕ್‌ವೆಲ್‌ನಲ್ಲಿನ ಮೋಟಾರ್ ದುರಸ್ತಿಗೆ ಬಂದಿದ್ದು, ಈಗಾಗಲೇ ಅದರ ದುರಸ್ತಿ ಕಾರ್ಯ ನಡೆದಿದೆ. ಇನ್ನು ಎರಡ್ಮೂರು ದಿನಗಳಲ್ಲಿ ತುಂಗಭದ್ರಾ ನದಿ ನೀರು ಪೂರೈಕೆ ಆಗಲಿದ್ದು ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ವಾರ್ಡನ ಮಹಿಳೆಯರು ಇದ್ದರು.