ಸಾರಾಂಶ
ಇತಿಹಾಸ ಪ್ರಸಿದ್ಧ ವಿರಾಜಪೇಟೆ ಶ್ರೀ ಬಸವೇಶ್ವರ ದೇವಸ್ಥಾನದ 10 ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿರಾಜಪೇಟೆ ಹಿರಿಯ ವಕೀಲ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ಪೂವಯ್ಯ ಉದ್ಘಾಟನೆ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ವಿರಾಜಪೇಟೆ
ಇತಿಹಾಸ ಪ್ರಸಿದ್ಧ ವಿರಾಜಪೇಟೆ ಶ್ರೀ ಬಸವೇಶ್ವರ ದೇವಸ್ಥಾನದ 10 ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ವಿರಾಜಪೇಟೆ ಹಿರಿಯ ವಕೀಲ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ಪೂವಯ್ಯ ಉದ್ಘಾಟನೆ ನೆರವೇರಿಸಿ ಮಾತನಾಡಿ, ದಿ.ಎನ್. ವೆಂಕಟೇಶ ಕಾಮತ್ ಅವರು ವೀರಾಜಪೇಟೆಯ ಗೌರಿ ಗಣೇಶ ಉತ್ಸವ ಅದ್ಧೂರಿಯಾಗಿ ಆಚರಣೆಗೆ ಕಾರಣಕರ್ತರು. ಇಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳು ವೀರಾಜಪೇಟೆಯ ಜನತೆಗೆ ಮನರಂಜನೆ ಹಾಗೂ ಶ್ರದ್ಧಾಭಕ್ತಿಯೊಂದಿಗೆ ಉತ್ಸವ ಆಚರಿಸಲು ಕಾರಣವಾಗಿದೆ ಎಂದರು.
ವಿರಾಜಪೇಟೆ ವಕೀಲರ ಸಂಘದ ಕಾರ್ಯದರ್ಶಿ ವಿ.ಜಿ. ರಾಕೇಶ್ ಮಾತನಾಡಿ, ವಿರಾಜಪೇಟೆ ಗೌರಿ ಗಣೇಶೋತ್ಸವ ಆಚರಣೆಗೆ ಶತಮಾನಗಳ ಇತಿಹಾಸವಿದೆ. ದೊಡ್ಡ ವೀರರಾಜೇಂದ್ರ ವಿರಾಜಪೇಟೆ ಪಟ್ಟಣ ನಿರ್ಮಾಣ ಮಾಡಿದ ಸಂದರ್ಭ ಬಸವೇಶ್ವರ ದೇಗುಲವನ್ನೂ ನಿರ್ಮಾಣ ಮಾಡಿದ್ದು, ಸಾಂಸ್ಕೃತಿಕ ಮತ್ತು ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶ್ರೀ ಬಸವೇಶ್ವರ ದೇವಸ್ಥಾನ ಕಾರ್ಯಕ್ರಮಗಳು ಜನಮನ್ನಣೆಗೆ ಪಾತ್ರವಾಗಿವೆ ಎಂದರು.ವಿರಾಜಪೇಟೆ ಪುರಸಭಾ ಸದಸ್ಯ ಸಿ.ಕೆ. ಪೃಥ್ವಿನಾಥ್ ಮಾತನಾಡಿದರು. ಮಂಗಳೂರಿನ ಸಿರಿ ಸಂಭ್ರಮ ಕಲಾ ತಂಡದ ಶಶಿರಾಜ್ ರಾವ್ ಕಾವೂರು, ಮೈಮ್ ರಾಮ್ ದಾಸ್, ದೇವಸ್ಥಾನ ಖಜಾಂಚಿ ಜೆ.ಎನ್. ಪುಷ್ಪರಾಜ್ ಇದ್ದರು.
ಸಂಚಾಲಕ, ಹೈಕೋರ್ಟ್ ಹಿರಿಯ ವಕೀಲ ರವೀಂದ್ರನಾಥ್ ಕಾಮತ್ ಸ್ವಾಗತಿಸಿದರು.ಮಂಗಳೂರು ತಂಡದಿಂದ ತತ್ವಪದ, ರಂಗಗೀತೆ, ಜಾನಪದ ಗೀತೆ, ಮಿಮಿಕ್ರಿ ಹಾಗೂ ಹಾಸ್ಯ ಪ್ರಹಸನ ಮೂಡಿ ಬಂತು.
ಸೋಮವಾರ ರಾತ್ರಿ ವಾಯ್ಸ್ ಆಫ್ ಮೈಸೂರು ಸಂಗೀತ ರಸಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಮುಖ್ಯಸ್ಥ ಎಂ.ಬಿ.ಪ್ರಕಾಶ್ ಅವರನ್ನು ಶ್ರೀ ಬಸವೇಶ್ವರ ದೇವಸ್ಥಾನ ಉಪಾಧ್ಯಕ್ಷ ಜೆ.ಎನ್. ಸಂಪತ್ ಕುಮಾರ್ ಹಾಗೂ ಪುರಸಭಾ ಸದಸ್ಯ ಎಸ್.ಎಚ್. ಮತೀನ್ ಗೌರವಿಸಿದರು.ದೇವಸ್ಥಾನದಲ್ಲಿ ಸೆ.17ರವರೆಗೆ ಮಧ್ಯಾಹ್ನ ಹಾಗೂ ರಾತ್ರಿ 7.30 ಗಂಟೆಗೆ ಮಹಾಪೂಜೆ ಹಾಗೂ ಪ್ರಸಾದ ವಿನಿಯೋಗ ಕಾರ್ಯಕ್ರಮ ಇರುವುದಾಗಿ ರವೀಂದ್ರನಾಥ್ ಕಾಮತ್ ತಿಳಿಸಿದ್ದಾರೆ.