ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಗಳವರಿಗೆ ಬೆಳ್ತಂಗಡಿ ತಾಲೂಕಿನ ಸಮಸ್ತ ನಾಗರಿಕರ ಪರವಾಗಿ ಜ. 2ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಪೌರ ಸನ್ಮಾನ ಜರುಗಲಿದೆ.

ಬೆಳ್ತಂಗಡಿ: ಜ. 18ರಂದು ಪೊಡವಿಗೊಡೆಯ, ಅನ್ನಬ್ರಹ್ಮ ಉಡುಪಿ ಶ್ರೀ ಕೃಷ್ಣನ ದ್ವೈವಾರ್ಷಿಕ ಪರ್ಯಾಯ ಶ್ರೀ ಸರ್ವಜ್ಞ ಪೀಠಾರೋಹಣ ಮಾಡಲಿರುವ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಗಳವರಿಗೆ ಬೆಳ್ತಂಗಡಿ ತಾಲೂಕಿನ ಸಮಸ್ತ ನಾಗರಿಕರ ಪರವಾಗಿ ಜ. 2ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಪೌರ ಸನ್ಮಾನ ಜರುಗಲಿದೆ.ಶ್ರೀಗಳು ಪೂರ್ವಾಶ್ರಮದಲ್ಲಿ ಬೆಳ್ತಂಗಡಿ ತಾಲೂಕು ನಿಡ್ಲೆ ಮಚ್ಚಳೆ ಮನೆತನದವರಾಗಿದ್ದು, ಅವರಿಗೆ ನಮ್ಮ ಪ್ರೀತಿ, ಗೌರವ, ಅಭಿಮಾನ ವ್ಯಕ್ತಪಡಿಸಲು ದೊರೆತ ಅಪೂರ್ವ ಅವಕಾಶವಾಗಿದೆ. ಅವರನ್ನು ಮೆರವಣಿಗೆಯಲ್ಲಿ ಬರಮಾಡಿಕೊಂಡು ಗೌರವಿಸುತ್ತಿರುವುದಾಗಿ ಪೌರ ಸನ್ಮಾನ ಸಮಿತಿ ಸಂಚಾಲಕ ಶಾಸಕ ಹರೀಶ್ ಪೂಂಜ ಹೇಳಿದರು.

ಡಿ. 23ರಂದು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ನಡೆದ ಪೌರ ಸನ್ಮಾನದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಈ ಮಾಹಿತಿ ನೀಡಿದರು. ಜ.2ರಂದು ಸಂಜೆ 4.30ಕ್ಕೆ ಉಜಿರೆಯ ಬೆಳಾಲು ರಸ್ತೆ ತಿರುವಿನಿಂದ ಶ್ರೀಗಳವರನ್ನು ಚೆಂಡೆ, ಭಜನಾ ತಂಡ, ಪೂರ್ಣಕುಂಭ ಸ್ವಾಗತದೊಂದಿಗೆ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಬರಮಾಡಿಕೊಂಡು ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಸಾರ್ವಜನಿಕ ಸಭಾ ಕಾರ್ಯಕ್ರಮ ನಡೆಯಲಿದೆ.

ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಮಾರ್ಗದರ್ಶನ ನೀಡಿದರು.

ಸಭಾ ಕಾರ್ಯಕ್ರಮದಲ್ಲಿ ಭಾವಿ ಪರ್ಯಾಯ ಪೀಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಗಳವರು ಆಶೀರ್ವಚನ ನೀಡಲಿದ್ದಾರೆ. ಡಾ. ಪ್ರದೀಪ್ ನಾವೂರು ಅಭಿನಂದನಾ ನುಡಿಗಳನ್ನಾಡುವರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್‌ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್, ಪೌರ ಸನ್ಮಾನ ಸಮಿತಿ ಸಂಚಾಲಕ ಕೆ. ಮೋಹನ ಕುಮಾರ್, ಶೀರೂರು ಮಠದ ದಿವಾನ ಡಾ. ಉದಯ ಕುಮಾರ್ ಸರಳತ್ತಾಯ, ಎಸ್ ಸಿಡಿಸಿಸಿ ಬ್ಯಾಂಕ್ ನ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ, ವಿಹಿಂಪ ಜಿಲ್ಲಾ ಕಾರ್ಯದರ್ಶಿ ನವೀನ ನೆರಿಯ ಉಪಸ್ಥಿತರಿರುವರು ಎಂದರು. ಪರ್ಯಾಯ ಸ್ವಾಗತ ಸಮಿತಿ ಸಂಚಾಲಕ ಸುಪ್ರಸಾದ ಶೆಟ್ಟಿ ಉಡುಪಿ ಶ್ರೀ ಕೃಷ್ಣ ಮಠದ ಪೂಜಾ ಪರಂಪರೆಯ ಕುರಿತು ಮಾಹಿತಿ ನೀಡಿದರು.

ಸಮಾಲೋಚನಾ ಸಭೆಯಲ್ಲಿ ಸಂಚಾಲಕ ಕೆ. ಮೋಹನ ಕುಮಾರ್, ಉಜಿರೆ ಗ್ರಾಪಂ ಅಧ್ಯಕ್ಷೆ ಉಷಾಕಿರಣ್ ಕಾರಂತ್, ಮಧುಕರ ರಾವ್ ಮಚ್ಚಳೆ , ಡಾ. ಎಂ.ಎಂ. ದಯಾಕರ್ ಉಪಸ್ಥಿತರಿದ್ದರು. ಉಡುಪಿ ಶಿರೂರು ಪರ್ಯಾಯೋತ್ಸವ ಸಮಿತಿಯ ವಿಷ್ಣುಪ್ರಸಾದ್ ಪಾಡಿಗಾರ್, ಶ್ರೀನಿವಾಸ ಬಾಧ್ಯ ಉಪಸ್ಥಿತರಿದ್ದರು. ಶರತ್ ಕೃಷ್ಣ ಪಡುವೆಟ್ನಾಯ ಸ್ವಾಗತಿಸಿದರು. ಅವಿನಾಶ ರಾವ್ ಕಾರ್ಯಕ್ರಮ ನಿರೂಪಿಸಿದರು.