“ತಳಮಟ್ಟದ ಮಾಹಿತಿ ಮತ್ತು ಪಾರದರ್ಶಕತೆ ಉಪಕ್ರಮಕ್ಕಾಗಿ ನ್ಯಾಯ ಜಾಗೃತಿ ಯೋಜನೆ–2025”ರ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘ, ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ “ತಳಮಟ್ಟದ ಮಾಹಿತಿ ಮತ್ತು ಪಾರದರ್ಶಕತೆ ಉಪಕ್ರಮಕ್ಕಾಗಿ ನ್ಯಾಯ ಜಾಗೃತಿ ಯೋಜನೆ–2025”ರ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮವನ್ನು ಶುಕ್ರವಾರ ಚೌಡ್ಲು ಗ್ರಾಮದ ಜ್ಞಾನ ವಿಕಾಸ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಸರ್ಕಾರಿ ಕಾನೂನು ನೆರವು ಅಭಿರಕ್ಷಕರಾದ ಪವಿತ್ರ ಹೆಚ್.ಆರ್. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಮೂಡಿಸುವ ಉದ್ದೇಶದಿಂದ ವಿವಿಧ ಮಹತ್ವದ ವಿಷಯಗಳ ಕುರಿತು ಮಾಹಿತಿ ನೀಡಿದರು. ಮಕ್ಕಳ ರಕ್ಷಣೆಗೆ ರೂಪಿಸಲಾದ ಪೋಕ್ಸೋ ಕಾಯ್ದೆ, ಮಾದಕದ್ರವ್ಯಗಳ ದುಷ್ಪರಿಣಾಮಗಳು ಹಾಗೂ ಅದರ ವಿರುದ್ಧದ ಕಾನೂನು ಕ್ರಮಗಳು, ಮೋಟಾರ್ ವಾಹನ ಕಾಯ್ದೆಯಲ್ಲಿನ ನಿಯಮಗಳು, ಲೈಂಗಿಕ ಕಿರುಕುಳ ತಡೆ ಕಾಯ್ದೆ ಹಾಗೂ ಬಾಲ್ಯವಿವಾಹ ನಿಷೇಧ ಕಾಯ್ದೆಯ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು.ಇದೇ ವೇಳೆ, ವಿದ್ಯಾರ್ಥಿಗಳು ಕೇವಲ ಕಾನೂನು ತಿಳಿದುಕೊಳ್ಳುವುದಲ್ಲದೆ, ಸಮಾಜದಲ್ಲಿ ಸುಸಂಸ್ಕೃತ, ಸುಶಿಕ್ಷಿತ ಮತ್ತು ಜವಾಬ್ದಾರಿಯುತ ನಾಗರಿಕರಾಗಿ ಬದುಕುವಂತೆ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಕಾನೂನು ಪಾಲನೆಯು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ತಪ್ಪುಗಳಿಂದ ದೂರವಿದ್ದು ಸದುಪಯೋಗದ ಜೀವನ ನಡೆಸಿದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯವೆಂದು ಅವರು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕಿ ಅಣ್ಣಮ್ಮ ವಹಿಸಿ ಮಾತನಾಡಿ, ಕಾನೂನು ಅರಿವು ಕಾರ್ಯಕ್ರಮಗಳು ವಿದ್ಯಾರ್ಥಿಗಳ ಜೀವನಕ್ಕೆ ದಾರಿ ತೋರಿಸುವುದರ ಜೊತೆಗೆ ಭವಿಷ್ಯದಲ್ಲಿ ಅವರು ಜಾಗೃತ ನಾಗರಿಕರಾಗಲು ಸಹಕಾರಿಯಾಗುತ್ತವೆ ಎಂದರು. ಹಿರಿಯ ಶಿಕ್ಷಕಿ ಕವಿತಾ ಇದ್ದರು.