ಜ್ಞಾನ ಸುಧ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶನಿವಾರ ಸಂಜೆ ‘ಜ್ಞಾನ ತೀರ್ಥ ವಿಟಲ ಸಂಗೀತ ಸಂಜೆ’ ಎಂಬ ಭವ್ಯ ಹಿಂದುಸ್ತಾನಿ ಸಂಗೀತ ಕಾರ್ಯಕ್ರಮ ನಡೆಯಿತು.
ಕಾರ್ಕಳ: ಕಾರ್ಕಳ ಗಣಿತ ನಗರದಲ್ಲಿರುವ ಜ್ಞಾನ ಸುಧ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶನಿವಾರ ಸಂಜೆ ‘ಜ್ಞಾನ ತೀರ್ಥ ವಿಟಲ ಸಂಗೀತ ಸಂಜೆ’ ಎಂಬ ಭವ್ಯ ಹಿಂದುಸ್ತಾನಿ ಸಂಗೀತ ಕಾರ್ಯಕ್ರಮ ನಡೆಯಿತು. ಸಂಗೀತ ಪ್ರೇಮಿಗಳು, ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಕಾರ್ಯಕ್ರಮಕ್ಕೆ ಅಪಾರ ಸ್ಪಂದನೆ ವ್ಯಕ್ತವಾಯಿತು. ಅಂಕುಶ್ ನಾಯಕ್ ಹೆಮಂತ್ ಜೋಷಿ ತಂಡದ ವತಿಯಿಂದ ಉನ್ನತ ಮಟ್ಟದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಪ್ರಸ್ತುತಿ ನಡೆಯಿತು.
ವಿಶೇಷ ಆಕರ್ಷಣೆಯಾಗಿ ಖ್ಯಾತ ಹಿಂದುಸ್ತಾನಿ ಗಾಯಕ ಪಂಡಿತ ಜಯತೀರ್ಥ ಮೇವುಂಡಿ ಅವರು ಮನಮೋಹಕ ಗಾಯನದ ಮೂಲಕ ಶ್ರೋತೃಗಳನ್ನು ರಾಗಲೋಕದೊಳಗೆ ಕರೆದೊಯ್ದರು. ಶುದ್ಧ ಸ್ವರಸಾಧನೆ, ಆಳವಾದ ಭಾವಪೂರ್ಣತೆ ಹಾಗೂ ಲಯಬದ್ಧ ನಿರೂಪಣೆಯ ಮೂಲಕ ಅವರು ಪ್ರೇಕ್ಷಕರ ಮನಸೂರೆಗೊಂಡರು.ಪಂಡಿತ ಜಯತೀರ್ಥ ಮೇವುಂಡಿ ಅವರು ಸೈಯ್ಯಾ ಮೋರಾ ಪರತ್ ಹಾಡಿನ ಮೂಲಕ ಗಾಯನ ಆರಂಭಿಸಿದರು ಹಾರ್ಮೋನಿಯಂನಲ್ಲಿ ನರೇಂದ್ರ ಎಲ್. ನಾಯಕ್, ರಿದಂನಲ್ಲಿ ಸೂರ್ಯಕಾಂತ್ ಸುರ್ವೆ, ಬಾನ್ಸುರಿಯಲ್ಲಿ ಆಕಾಶ್ ಎಸ್., ಬಲದಲ್ಲಿ ರಾಜೇಶ್ ಭಾಗವತ್ ಹಾಗೂ ತಬಲದಲ್ಲಿ ಅಶ್ವಥ್ ಶೆಣೈ ಅವರು ಸಾಥ್ ನೀಡಿದರು. ಕಲಾವಿದರ ಪರಸ್ಪರ ಸಂಯೋಜನೆ, ಲಯ-ತಾಳಗಳ ಸಮತೋಲನ ಮತ್ತು ಸೃಜನಾತ್ಮಕ ಸಂಗತಿ ಕಾರ್ಯಕ್ರಮದ ಸೊಬಗನ್ನು ಮತ್ತಷ್ಟು ಹೆಚ್ಚಿಸಿತು.ಸಂತವಾಣಿ ದಾಸವಾಣಿ ಹಾಗೂ ಭಕ್ತಗೀತೆ ಗಾಯನವೂ ನಡೆಯಿತು.
ಕಾರ್ಯಕ್ರಮದ ಆರಂಭದಲ್ಲಿ ಅಜೆಕಾರು ಪದ್ಮಗೋಪಾಲ್ ಟ್ರಸ್ಟ್ ಅಧ್ಯಕ್ಷ ಸುಧಾಕರ್ ಶೆಟ್ಟಿ ಅವರು ಸಂಗೀತ ಕಲಾವಿದರನ್ನು ಪರಿಚಯಿಸಿ, ಹಿಂದುಸ್ತಾನಿ ಸಂಗೀತದ ಮಹತ್ವ ಹಾಗೂ ಯುವ ಪೀಳಿಗೆಗೆ ಅದರ ಅಗತ್ಯತೆಯ ಬಗ್ಗೆ ಮಾತನಾಡಿದರು. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ಅವರು ಹೇಳಿದರು.ಸಂಗೀತ ಕುಲಾಲ್ ಅವರು ನಿರೂಪಿಸಿ, ಕಲಾವಿದರನ್ನು ಆತ್ಮೀಯವಾಗಿ ಸ್ವಾಗತಿಸಿ, ನಿರೂಪಿಸಿದರು. ಕಾರ್ಯಕ್ರಮಕ್ಕೆ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪೋಷಕರು ಹಾಗೂ ಸಂಗೀತಾಭಿಮಾನಿಗಳು ಸಾಕ್ಷಿಯಾದರು.