ಸಾರಾಂಶ
ಪಟ್ಟಣ ಸ್ವಚ್ಛವಾಗಿರಲು ಪೌರಕಾರ್ಮಿಕರ ಕೊಡುಗೆ ದೊಡ್ಡದಿದೆ. ಅವರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡಿರುತ್ತಾರೆ.
ಕನ್ನಡಪ್ರಭ ವಾರ್ತೆ ಹೊನ್ನಾವರ
ಪಟ್ಟಣ ಸ್ವಚ್ಛವಾಗಿರಲು ಪೌರಕಾರ್ಮಿಕರ ಕೊಡುಗೆ ದೊಡ್ಡದಿದೆ. ಅವರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡಿರುತ್ತಾರೆ. ಹೀಗಾಗಿ ಪೌರಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆಯೂ ವಿಶೇಷ ಕಾಳಜಿ ವಹಿಸಬೇಕು. ಮಾಸ್ಕ್, ಗ್ಲೌಸ್ ಹಾಕಿಕೊಂಡು ಸ್ವಚ್ಛತೆಯಲ್ಲಿ ತೊಡಗಿಸಿಕೊಳ್ಳಬೇಕು. ಆರೋಗ್ಯದ ಕಡೆಗೆ ವಿಶೇಷ ಕಾಳಜಿ ವಹಿಸಿ ಎಂದು ತಹಸಿಲ್ದಾರ್ ಪ್ರವೀಣ್ ಕರಾಂಡೆ ಹೇಳಿದರು.ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ನಡೆದ ಕಾರ್ಮಿಕ ದಿನಾಚರಣೆಯಲ್ಲಿ ಮಾತನಾಡಿದರು. ನಿವೃತ್ತ ಪೌರಕಾರ್ಮಿಕರಾಗಿದ್ದ ಕಮಲ ಹಿರಣಯ್ಯ ಹರಿಜನ ಕಾರ್ಯಕ್ರಮ ಉದ್ಘಾಟಿಸಿದರು.
ಪಪಂ ಉಪಾಧ್ಯಕ್ಷ ಸುರೇಶ್ ಹೊನ್ನಾವರ ಮಾತನಾಡಿ, ಪೌರ ಕಾರ್ಮಿಕರು ನಗರವನ್ನು ಸ್ವಚ್ಛಗೊಳಿಸದೆ ಇದ್ದರೆ ಜನರು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕಸವನ್ನು ತೆಗೆಯದೆ ಇದ್ದರೆ ಕಸದ ರಾಶಿ ನಗರದಲ್ಲಿ ತುಂಬಿರುತ್ತದೆ. ಜನರು ಸಹ ಅವರ ಕೆಲಸಕ್ಕೆ ಸಹಕರಿಸಬೇಕು. ಹಸಿ ಕಸ ಮತ್ತು ಒಣಕಸವನ್ನು ಬೇರೆ ಮಾಡಿ ಕಾರ್ಮಿಕರಿಗೆ ನೀಡಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಪಂ ಅಧ್ಯಕ್ಷ ವಿಜಯ್ ಕಾಮತ್ ಮಾತನಾಡಿ, ಪೌರ ಕಾರ್ಮಿಕರು ನಮ್ಮ ಜೊತೆ ಇರುವ ನಿಜವಾದ ಹೀರೋಗಳು.ಅವರಿಗೆ ಹಾಗೂ ಅವರ ಶ್ರಮಕ್ಕೆ ಗೌರವವನ್ನು ನೀಡುವುದು ನಮ್ಮ ಕರ್ತವ್ಯವಾಗಿದೆ. ಪ್ರಧಾನ ಮಂತ್ರಿಯವರ ಸ್ವಚ್ಛ ಭಾರತ ಅಭಿಯಾನಕ್ಕೆ ನಿಜವಾದ ಸೈನಿಕರು ಪೌರಕಾರ್ಮಿಕರಾಗಿದ್ದಾರೆ ಎಂದರು.
ಹೈಕೋರ್ಟ್ ನ್ಯಾಯವಾದಿ ರವೀಂದ್ರ ಸುಬ್ಬ ಮಂಗಳ ಉಪನ್ಯಾಸ ನೀಡಿದರು. ಪಪಂ ಸದಸ್ಯ ನಾಗರಾಜ್ ಭಟ್ಟ, ಮೇಧಾ ನಾಯ್ಕ, ಭಾರತಿ ಭಂಡಾರಿ, ತುಳಸಿದಾಸ್ ಪಾವಸ್ಕರ್ ಮಾತನಾಡಿದರು.ಪಪಂ ಮುಖ್ಯಾಧಿಕಾರಿ ಯೇಸು ಬೆಂಗಳೂರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಇದೇ ವೇಳೆ ಪೌರಕಾರ್ಮಿಕರನ್ನು ಗೌರವಿಸಲಾಯಿತು. ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಶ ಮೇಸ್ತ, ಪಪಂ ಸದಸ್ಯ ಶಿವರಾಜ್ ಮೇಸ್ತ, ಸುಬ್ರಾಯ ಗೌಡ, ಸುಭಾಶ್ ಹರಿಜನ್ ಮೊದಲಾದವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಪೌರಕಾರ್ಮಿಕರ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ ನಡೆಯಿತು. ಪೌರಕಾರ್ಮಿಕರ ನಿತ್ಯದ ಕೆಲಸದ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.