ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸದುರ್ಗ ತಾಲೂಕಿನ ಜನರಿಗೆ ಶೀಘ್ರದಲ್ಲಿಯೇ ಶುದ್ಧ ಕುಡಿವ ನೀರು ಒದಗಿಸುವ ನಿಟ್ಟಿನಲ್ಲಿ ಕಾಮಗಾರಿಗೆ ಚುರುಕು ಮುಟ್ಟಿಸಲು ಇಲಾಕೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.
ಮಂಗಳವಾರ ಹೊಸದುರ್ಗದಿಂದ ಲಕ್ಕುವಳ್ಳಿ ಡ್ಯಾಂ ವರೆಗೆ ಬಹುಗ್ರಾಮ ಕುಡಿವ ನೀರಿನ ಯೋಜನೆಯ ಕಾಮಗಾರಿಯ ಭೌತಿಕ ಪ್ರಗತಿ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಮಗಾರಿಯ ವೇಗ ಹೆಚ್ಚಿಸಲು ಪ್ರತಿ 2 ತಿಂಗಳಿಗೊಮ್ಮೆ ಕಾಮಗಾರಿ ಸ್ಥಳ ಪರಿಶೀಲನೆ ಮಾಡಲಾಗುವುದು ಎಂದರು.2013-18ರ ಅವಧಿಯ ಸಿದ್ದರಾಮಯ್ಯ ಸರ್ಕಾರದಲ್ಲಿ ಅಂದಿನ ಗ್ರಾಮೀಣಾಭಿವೃದ್ದಿ ಸಚಿವರಾಗಿದ್ದ ಎಚ್.ಕೆ.ಪಾಟೀಲ್ ಅವರು ತಾಲೂಕಿನಲ್ಲಿ ಕುಡಿವ ನೀರಿನಲ್ಲಿ ದೋಷ ಕಂಡ ಹಿನ್ನಲೆ ಶುದ್ಧ ನೀರು ಕೊಡುವ ಸಲುವಾಗಿ ₹600 ಕೋಟಿ ವೆಚ್ಚದಲ್ಲಿ ತಾಲೂಕಿನ 392 ಹಳ್ಳಿಗಳಿಗೂ ನೀರು ಪೂರೈಸುವ ಸಲುವಾಗಿ ಬಹುಗ್ರಾಮ ಕುಡಿವ ನೀರಿನ ಯೋಜನೆ ಮಂಜೂರು ಮಾಡಿಸಿ ಅನುದಾನ ನೀಡಿದ್ದರು. ಆದರೆ 2018 ರಲ್ಲಿ ಸರ್ಕಾರ ಬದಲಾದ ಹಿನ್ನಲೆ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಈ ಯೋಜನೆಯ ಕಾಮಗಾರಿಯನ್ನು ಕೈಗೊಳ್ಳದ ಕಾರಣ ಕಾಮಗಾರಿ ನೆನೆಗುದಿಗೆ ಬಿದ್ದಿದೆ, ಮತ್ತೆ ನನ್ನನ್ನು ತಾಲೂಕಿನ ಜನ ಆಯ್ಕೆ ಮಾಡಿದ್ದು ಒಂದು ವರ್ಷದಲ್ಲಿಯೇ ಕಾಮಗಾರಿಗೆ ಮತ್ತೆ ಚಾಲನೆ ನೀಡಿದ್ದೇನೆ ಎಂದರು.
ಈ ಯೋಜನೆಯಲ್ಲಿ ಲಕ್ಕುವಳ್ಳಿ ಡ್ಯಾಂ ನಿಂದ ಹೊಸದುರ್ಗ ಪಟ್ಟಣದವರೆಗೆ ಒಟ್ಟು75 ಕಿಮೀ ಪೈಪ್ ಲೈನ್ ಆಗಬೇಕಿದ್ದು, ಅದರಲ್ಲಿ ಈಗಾಗಲೇ 61ಕಿಮೀ ಪೈಪ್ ಲೈನ್ ಕಾಮಗಾರಿ ಪೂರ್ಣಗೊಂಡಿದೆ. ಬಾಕಿ 14 ಕಿಮೀ ಪೈಪ್‌ಲೈನ್ ಕಾಮಗಾರಿ ಪ್ರಗತಿಯಲ್ಲಿದ್ದು ಶೀಘ್ರದಲ್ಲಿಯೇ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಒತ್ತಡಹಾಕಲಾಗಿದೆ. ಅಲ್ಲದೆ ಹೊಸದುರ್ಗ ಪಟ್ಟಣದ ಪದವಿ ಕಾಲೇಜು ಹತ್ತಿರ, 20 ಲಕ್ಷ ಲೀಟರ್ ಸಂಗ್ರಹ ಸಾಮರ್ಥ್ಯದ ಜಲಾಗಾರ, ಗಡಿ ಅಹಮದ್ ನಗರ, ಬಳ್ಳೆಕೆರೆ, ಸಿದ್ದಪ್ಪನ ಬೆಟ್ಟ ಸೇರಿದಂತೆ ಹಲವೆಡೆ ಜಲಗಾರವನ್ನು ನಿರ್ಮಿಸಲಾಗುತ್ತಿದ್ದು ಮುಕ್ತಾಯದ ಹಂತದಲ್ಲಿವೆ ಎಂದರು.ಲಕ್ಕುವಳ್ಳಿ ಡ್ಯಾಂ ಬಳಿ ನೀರು ಶುದ್ಧೀಕರಿಸಲು ಘಟಕ ಸ್ಥಾಪನೆಗೆ 8 ಎಕರೆ ಭೂಮಿ ಸರ್ಕಾರ ಮಂಜೂರು ಮಾಡಿ ಹಣ ಬಿಡುಗಡೆ ಮಾಡಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಇದೇ ವೇಗದಲ್ಲಿ ಕಾಮಗಾರಿ ನಡೆದರೆ ಅತಿ ಶೀಘ್ರದಲ್ಲಿಯೇ ಹೊಸದುರ್ಗ ಪಟ್ಟಣದ ಸೇರಿದಂತೆ 92 ಹಳ್ಳಿಗಳಿಗೆ ಮೊದಲ ಹಂತದಲ್ಲಿ ಶುದ್ದ ಕುಡಿಯುವ ನೀರು ಸಿಗಲಿದೆ. ಉಳಿದ ಹಳ್ಳಿಗಳಿಗೆ 2 ನೇ ಹಂತದಲ್ಲಿ ನೀರು ಸಿಗಲಿದೆ ಎಂದರು.
ಈ ವೇಳೆ ಜಿಪಂ ಸಿಇಒ ಸೋಮಶೇಖರ್, ತಾಪಂ ಇಒ ಸುನಿಲ್, ಗ್ರಾಮೀಣ ಕುಡಿವ ನೀರು ಯೋಜನೆಯ ಎಇಇ ಧನಂಜಯ, ಎಡಿ ಶಿವಮೂರ್ತಿ, ತಾಲೂಕಿನ ಮಖಂಡರಾದ ಆಗ್ರೋ ಶಿವಣ್ಣ, ಅರಳೀಹಳ್ಳಿ ಲೋಕಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ, ದೀಪಿಕಾ, ಪ್ರಕಾಶ್ ಮತ್ತಿತರರು ಹಾಗಜರಿದ್ದರು.