ನೋಟೀಸ್ ನೀಡಿ ಸಹಾಯಕ ನಿಬಂಧಕರಿಂದ ಕಿರುಕುಳ ಆರೋಪ

| Published : Jun 12 2024, 12:30 AM IST

ಸಾರಾಂಶ

ಎಂ.ರೂಪ ಆಯ್ಕೆಯನ್ನು ಅಸಿಂಧುಗೊಳಿಸಿರುವುದಕ್ಕೆ ಸರ್ವೋಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಅದನ್ನು ಲೆಕ್ಕಿಸದೆ ಸಹಾಯಕ ನಿಬಂಧಕಿ ಅನಿತಾ ಅವರು ಏಕಾಏಕಿ ನೋಟೀಸ್ ನೀಡುವ ಮೂಲಕ ರಾಜಕೀಯ ಕಿರುಕುಳ ನೀಡುತ್ತಿದ್ದಾರೆ ಎಂದು ಟೀಕಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಹಾಲು ಒಕ್ಕೂಟದ ನಿರ್ದೇಶಕಿ ಎಂ.ರೂಪ ಆಯ್ಕೆಯನ್ನು ಅಸಿಂಧುಗೊಳಿಸಿರುವ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರೂ ಸಹಕಾರ ಇಲಾಖೆ ಸಹಾಯಕ ನಿಬಂಧಕರು ನೋಟೀಸ್ ನೀಡುವ ಮೂಲಕ ಕಾಂಗ್ರೆಸ್ ಸರ್ಕಾರದ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಇಲ್ಲಿನ ಅಶೋಕನಗರದಲ್ಲಿರುವ ಜಿಲ್ಲಾ ಸಹಕಾರ ಯೂನಿಯನ್ ಕಚೇರಿ ಎದುರು ಸೇರಿದ ಬಿಜೆಪಿ ಕಾರ್ಯಕರ್ತರು ಹಾಗೂ ಹಾಲು ಉತ್ಪಾದಕರು ಸಹಾಯಕ ನಿಬಂಧಕರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಎಂ.ರೂಪ ಆಯ್ಕೆಯನ್ನು ಅಸಿಂಧುಗೊಳಿಸಿರುವುದಕ್ಕೆ ಸರ್ವೋಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಅದನ್ನು ಲೆಕ್ಕಿಸದೆ ಸಹಾಯಕ ನಿಬಂಧಕಿ ಅನಿತಾ ಅವರು ಏಕಾಏಕಿ ನೋಟೀಸ್ ನೀಡುವ ಮೂಲಕ ರಾಜಕೀಯ ಕಿರುಕುಳ ನೀಡುತ್ತಿದ್ದಾರೆ ಎಂದು ಟೀಕಿಸಿದರು.

ರೂಪ ಸಹಾಯಕ ರಿಜಿಸ್ಟ್ರಾರ್ ಅವರಿಗೆ ವಕಾಲತ್ತು ಅರ್ಜಿ ಸಲ್ಲಿಸಲು ವಕೀಲರೊಂದಿಗೆ ಹೋದಾಗಲೂ ದಾಖಲಿಸಿಕೊಳ್ಳದೆ ತಿರಸ್ಕರಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆಸದೆ ಏಕಾಏಕಿ ರಾಜ್ಯ ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ ಮೇರೆಗೆ ನೋಟೀಸ್ ನೀಡುವ ಮೂಲಕ ಏಕಪಕ್ಷೀಯವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.ಸಹಕಾರ ತತ್ವದಡಿ ಆಯ್ಕೆಯಾಗಿರುವ ರೂಪಾ ಮಂಡ್ಯ ಹಾಲು ಒಕ್ಕೂಟದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಕ್ಷೇತ್ರದ ರೈತರು, ಹಾಲು ಉತ್ಪಾದಕರಿಗೆ ಒಕ್ಕೂಟದಿಂದ ಸೌಲಭ್ಯ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ ಅವರ ಸೇವೆಯನ್ನು ಪರಿಗಣಿಸದೆ ರಾಜಕೀಯ ದುರುದ್ದೇಶದಿಂದ ಬಿಜೆಪಿ ಕಾರ್ಯಕರ್ತರಾಗಿರುವ ರೂಪಾಗೆ ನೋಟೀಸ್ ನೀಡಿರುವುದು ಸರಿಯಲ್ಲ. ಇಂತಹ ರಾಜಕೀಯ ದ್ವೇಷವನ್ನು ಬಿಟ್ಟು ಸರಿಯಾದ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿ ಅಭಿವೃದ್ಧಿಯ ಪರವಾಗಿ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದಾರೆ.ಸಹಕಾರ ಕಾಯಿದೆ 29(ಸಿ) ಪ್ರಕಾರ ಎಷ್ಟು ಪ್ರಕರಣಗಳನ್ನು ತಮ್ಮ ಇಲಾಖೆಯಲ್ಲಿ ದಾಖಲಿಸಿದ್ದೀರಿ, ಎಷ್ಟು ಪ್ರಕರಣಗಳನ್ನು ವಿಲೇವಾರಿ ಮಾಡಿದ್ದೀರಿ, ಇನ್ನು ಎಷ್ಟು ಬಾಕಿ ಇವೆ ಎಂಬುದನ್ನು ಮೊದಲು ತಿಳಿಸಿ ಎಂದು ಒತ್ತಾಯಿಸಿರುವ ಕಾರ್ಯಕರ್ತರು, ರೂಪ ಅವರ ಪ್ರಕರಣದಲ್ಲಿ ಏಕಿಷ್ಟು ಆತುರ, ಅವರ ವಿರುದ್ಧ ಇನ್ಯಾವ ಷಡ್ಯಂತ್ರ ರೂಪಿಸಿದ್ದೀರಿ ಎಂದು ಖಾರವಾಗಿ ಪ್ರಶ್ನಿಸಿದರು.ರೂಪಾ ಅವರಿಗೆ ನೀಡಿರುವ ನೋಟೀಸ್ ವಾಪಸ್ಸು ಪಡೆದು ತಕ್ಷಣ ಅವರಿಂದ ವಕಾಲತ್ತು ಪಡೆದು ಪ್ರಕರಣ ದಾಖಲಿಸಿ ವಿಚಾರಣೆ ನಡೆಸಬೇಕು. ಒಂದು ವೇಳೆ ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಲ್ಲಿ ಸಹಕಾರ ಇಲಾಖೆ ಸಹಾಯಕ ನಿಬಂಧಕಿ ಅನಿತಾ ಹಾಗೂ ಉಸ್ತುವಾರಿ ಸಚಿವರು, ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾದ್ಯಂತ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಮನ್‌ಮುಲ್ ನಿರ್ದೇಶಕಿ ಎಂ.ರೂಪ, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ್ ಜಯರಾಂ, ಸಿ.ಟಿ.ಮಂಜುನಾಥ, ವಸಂತಕುಮಾರ್, ವಿವೇಕ್, ಶಿವಕುಮಾರ ಆರಾಧ್ಯ, ಹೊಸಹಳ್ಳಿ ಶಿವು, ವಿದ್ಯಾನಾಗೇಂದ್ರ, ಮಮತಾ, ಶಿವಮ್ಮ, ಸರಸ್ವತಿ, ಜಯಮ್ಮ, ಜಯಶೀಲಾ ಇತರರಿದ್ದರು.