ನಿರ್ಮಲ ತುಂಗೆ ಪ್ರತಿಯೊಬ್ಬರ ಕರ್ತವ್ಯ

| Published : Oct 20 2024, 02:05 AM IST / Updated: Oct 20 2024, 02:06 AM IST

ಸಾರಾಂಶ

ಶಿವಮೊಗ್ಗ ನಗರದ ಆರ್‌ಎಂಆರ್ ರಸ್ತೆಯಲ್ಲಿರುವ ಹೊಯ್ಸಳ ಪೌಂಡೇಶನ್ ಕಚೇರಿಯಲ್ಲಿ ನಡೆದ ಪೂರ್ವಬಾವಿ ಸಭೆಯಲ್ಲಿ ಸಚಿವ ಮಧು ಬಂಗಾರಪ್ಪ ಪಾಲ್ಗೊಂಡು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಅನೇಕ ಜಿಲ್ಲೆಗಳನ್ನು ಹಾದು, ಲಕ್ಷಾಂತರ ಜನರು ಬಳಸುತ್ತಿರುವ ತುಂಗೆಯ ಶುದ್ಧೀಕರಣದ ನಿರ್ಮಲ ತುಂಗೆ ಅಭಿಯಾನಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಭವಿಷ್ಯದಲ್ಲಿ ಸ್ವಚ್ಛ ತುಂಗೆ ನಮ್ಮೆಲ್ಲರ ಗುರಿಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಹೇಳಿದರು.

ಶೃಂಗೇರಿಯಿಂದ ಶ್ರೀಶೈಲದವರೆಗೆ ನಡೆಯಲಿರುವ ನಿರ್ಮಲಾ ತುಂಗಾ ಭದ್ರಾ ಅಭಿಯಾನದ ಪಾದಯಾತ್ರೆ ಹಿನ್ನೆಲೆಯಲ್ಲಿ ಶನಿವಾರ ನಗರದ ಆರ್.ಎಂ.ಆರ್. ರಸ್ತೆಯಲ್ಲಿರುವ ಹೊಯ್ಸಳ ಪೌಂಡೇಶನ್ ಕಚೇರಿಯಲ್ಲಿ ನಡೆದ ಪೂರ್ವಬಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಅಭಿಯಾನಕ್ಕೆ ರಾಜಕಾರಣ ಬೇಕಾಗಿಲ್ಲ. ನಿರ್ಮಲ ತುಂಗೆ ಪ್ರತಿಯೊಬ್ಬರ ಕರ್ತವ್ಯ. ನಾವೆಲ್ಲ ಈ ತುಂಗೆಯ ನೀರು ಕುಡಿದೇ ದೊಡ್ಡವರಾಗಿದ್ದೇವೆ ಎಂದರು.

ಇದೊಂದು ಅರ್ಥಪೂರ್ಣ ಕಾರ್ಯಕ್ರಮವಾಗಿದ್ದು, ಕೇವಲ ಸರ್ಕಾರ ಮಾತ್ರ ಈ ಕಾರ್ಯಕ್ರಮ ಮಾಡಬೇಕೆಂಬುದು ಸರಿಯಲ್ಲ. ಪ್ರತಿಯೊಬ್ಬರೂ ಈ ಕಾರ್ಯಕ್ರಮದಲ್ಲಿ ಕೈಜೋಡಿಸುವಂತೆ ಮನವಿ ಮಾಡಿದರು.

*ಮುಂದಿನ ವರ್ಷದಿಂದ ಸಾಮಾನ್ಯ ಜ್ಞಾನ ತರಗತಿ:

ವಿದ್ಯಾರ್ಥಿಗಳಲ್ಲಿ ಪರಿಸರದ ಕುರಿತು ಅರಿವು ಮೂಡಿಸಲು ಮುಂದಿನ ವರ್ಷದಿಂದ ವಾರದಲ್ಲಿ ಒಂದು ದಿನ ಸಾಮಾನ್ಯ ಜ್ಞಾನ ಪಠ್ಯ ಅಳವಡಿಸಲಾಗುವುದು. ಈ ಮೂಲಕ ಮಕ್ಕಳಲ್ಲಿ ಪರಿಸರ ಜಾಗೃತಿ ಜೊತೆಗೆ ಸಂಚಾರ ನಿಯಮಗಳ ಪಾಲನೆ, ನದಿ ಮತ್ತು ಪರಿಸರ ಸ್ವಚ್ಛತೆಯ ಬಗ್ಗೆ ಪಾಠಗಳಿರುತ್ತದೆ. ಆದರೆ ಇದಕ್ಕೆ ಪರೀಕ್ಷೆ ಇರುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

ಶಾಸಕ ಚನ್ನಬಸಪ್ಪ ಮಾತನಾಡಿ, ನಿರ್ಮಲಾ ತುಂಗಭದ್ರಾ ಅಭಿಯಾನದ ಯಶಸ್ಸಿಗೆ ಈಗಾಗಲೇ ಅನೇಕ ಸಭೆ ನಡೆಸಿ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಪ್ರಮುಖವಾಗಿ ಯುವಕರು, ವಿದ್ಯಾರ್ಥಿಗಳು ಹಾಗೂ ಸಂಘ ಸಂಸ್ಥೆಗಳಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ. ಎಲ್ಲಾ ರಾಜಕೀಯ ಪಕ್ಷಗಳು ಕೈಜೋಡಿಸಲಿದ್ದು, ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.

ಅಭಿಯಾನದ ಪ್ರಮುಖರಾದ ಡಾ.ಶ್ರೀಪತಿ ಮಾತನಾಡಿ, ತುಂಗೆಯ ನೀರು ಸ್ನಾನಕ್ಕೂ ಯೋಗ್ಯವಲ್ಲದ ಪರಿಸ್ಥಿತಿ ಬಂದಿದೆ. ಇದಕ್ಕೆ ನಾಗರಿಕರೇ ಕಾರಣ ಎಂದರು.

ರೈತರ ಜಮೀನುಗಳಿಗೆ ಹಾಕುವ ರಾಸಾಯನಿಕಗಳು ಕೂಡ ಹೇರಳ ಪ್ರಮಾಣದಲ್ಲಿ ನದಿಗೆ ಸೇರುತ್ತಿದೆ. ತುಂಗೆಯ ಮೂಲ ಶೃಂಗೇರಿಯಿಂದಲೇ ಶುದ್ಧೀಕರಣದ ಕೆಲಸವಾಗಬೇಕಾಗಿದೆ. ಇದಕ್ಕಾಗಿಯೇ ಹಲವು ಕ್ರಮಗಳ ಬಗ್ಗೆ ಮಾಹಿತಿ ಹಾಗೂ ಪಾದಯಾತ್ರೆಯ ಬಗ್ಗೆ ವಿವರ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಚಿವರಿಗೆ ಮನವಿ ಸಲ್ಲಿಸಿದರು.

ಸಭೆಯಲ್ಲಿ ಪ್ರಮುಖರಾದ ಕಾಡಾ ಅಧ್ಯಕ್ಷ ಡಾ.ಅಂಶುಮನ್, ಗಿರೀಶ್ ಪಟೇಲ್, ಎಂ.ಶಂಕರ್, ಕಲ್ಗೋಡು ರತ್ನಾಕರ್, ಚಂದ್ರಭೂಪಾಲ್, ರಮೇಶ್ ಹೆಗಡೆ, ಎಸ್.ಬಿ.ಅಶೋಕ್ಕುಮಾರ್, ಕಿರಣ್, ಕಾಂತೇಶ್ ಕದರಮಂಡಲಗಿ, ಬಾಲುನಾಯ್ಡು, ಜಿ.ಡಿ.ಮಂಜುನಾಥ್ ಮೊದಲಾದವರು ಇದ್ದರು.

ರಾಜ್ಯದ ನದಿ ಶುದ್ಧೀಕರಣಕ್ಕೆ ಸಮಿತಿ ರಚನೆ:

ತುಂಗಭದ್ರಾಯಷ್ಟೇ ಅಲ್ಲದೆ, ಇಡೀ ರಾಜ್ಯದ ಎಲ್ಲಾ ನದಿಗಳ ಶುದ್ಧೀಕರಣಕ್ಕೆ ಯೋಜನೆ ರೂಪಿಸಲು ಸಮಿತಿ ರಚಿಸಲಾಗಿದೆ. ಶಿವಮೊಗ್ಗದ ಅನೇಕ ಪರಿಸರ ಪ್ರೇಮಿಗಳು ಒಗ್ಗಟ್ಟಾಗಿ ಒಂದು ಸಮಿತಿಯನ್ನು ರಚಿಸಿ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಜಾಗೃತಿ ಮೂಡಿಸಲು ಭದ್ರಾ ಅಭಿಯಾನ ಪಾದಯಾತ್ರೆ ಮುಗಿಸಿದ್ದಾರೆ. ನದಿ ಕಲುಷಿತಗೊಳ್ಳಲು ನಾವೇ ಕಾರಣರಾಗಿದ್ದು, ತಕ್ಷಣದಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಗಂಡಾಂತರ ಕಾದಿದೆ ಎಂದು ಎಚ್ಚರಿಕೆ ನೀಡಿದರು.