ಸಾರಾಂಶ
ಬಳ್ಳಾರಿ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಅಧಿಕಾರಿಗಳು ಮಾಡಿರುವ ತಪ್ಪಿನಿಂದಾಗಿ ಆಗಿರುವ ದೋಷಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಪ್ರತಿ ವಿಷಯಕ್ಕೆ ₹250 ಪಾವತಿ ಮಾಡಬೇಕು. ಇದರಲ್ಲಿ ವಿದ್ಯಾರ್ಥಿಗಳ ತಪ್ಪೇನೂ ಇಲ್ಲದೆ ದಂಡ ತೆರಬೇಕು.
ಸೋಮರಡ್ಡಿ ಅಳವಂಡಿ
ಕೊಪ್ಪಳ: ಬಳ್ಳಾರಿ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯಲ್ಲಿ ಏನೇನು ಭಾನಗಡಿಗಳು ಆಗುತ್ತಿವೆ ಎನ್ನುವುದಕ್ಕೆ ಲೆಕ್ಕವೇ ಇಲ್ಲದಂತಾಗಿವೆ. ವಿಶ್ವವಿದ್ಯಾಲಯದ ಅಧಿಕಾರಿಗಳು, ಸಿಬ್ಬಂದಿ ಮಾಡುವ ತಪ್ಪಿಗೆ ವಿದ್ಯಾರ್ಥಿಗಳು ದಂಡ ತೆರಬೇಕಾದ ಪರಿಸ್ಥಿತಿ ಎದುರಾಗಿದೆ.ಹೌದು! ಈ ವಿಶ್ವವಿದ್ಯಾಲಯದಲ್ಲಿ ಮೇಲಧಿಕಾರಿಗಳು ನಡೆದಿದ್ದೇ ದಾರಿ. ಅವರು ಮಾಡಿದ್ದೇ ಕಾನೂನು. ಇಲ್ಲಿ ವಿದ್ಯಾರ್ಥಿಗಳಿಂದ ಹಣ ಸುಲಿಯಲು ಏನೆಲ್ಲ ತಂತ್ರ ಮಾಡುತ್ತಾರೆ ಎನ್ನುವ ಕುರಿತು ಸಮಗ್ರ ತನಿಖೆ ಮಾಡಬೇಕು ಎಂಬ ಒತ್ತಾಯ ಈಗ ಎಲ್ಲೆಡೆ ಕೇಳಿಬರುತ್ತಿದೆ.
ಪರೀಕ್ಷೆಯಲ್ಲಿ ಡಿಬಾರ್ ಆದ ವಿದ್ಯಾರ್ಥಿ ₹10 ಸಾವಿರ ದಂಡ ಪಾವತಿ ಮಾಡಿದರೆ, ಮರುಪರೀಕ್ಷೆ ಬರೆಯುವುದಕ್ಕೆ ಅವಕಾಶ ಕೊಡುವ ವಿಚಿತ್ರ ನಿರ್ಧಾರವನ್ನು ವಿಶ್ವವಿದ್ಯಾಲಯ ತೆಗೆದುಕೊಂಡಿತ್ತು. ಅದು ವ್ಯಾಪಕ ಟೀಕೆಗೆ ಗುರಿಯಾಗಿದ್ದರಿಂದ ವಾಪಸ್ ಪಡೆಯಲಾಯಿತು. ಇದಲ್ಲದೆ ಬಾಕಿ ಉಳಿಸಿಕೊಂಡ ವಿಷಯಗಳ ಪರೀಕ್ಷೆ ಬರೆಯಲು ಗೋಲ್ಡನ್ ಚಾನ್ಸ್ ಕೊಟ್ಟಿದ್ದರು. ಅದಕ್ಕೂ ಶುಲ್ಕ ನಿಗದಿ ಮಾಡಿದ್ದರು.ಈಗ ವಿವಿ ಅಧಿಕಾರಿಗಳು ಮಾಡಿರುವ ತಪ್ಪಿನಿಂದಾಗಿ ಆಗಿರುವ ದೋಷಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಪ್ರತಿ ವಿಷಯಕ್ಕೆ ₹250 ಪಾವತಿ ಮಾಡಬೇಕು. 10 ವಿಷಯಗಳು ಇದ್ದರೆ ₹2500 ಪಾವತಿ ಮಾಡಬೇಕು. ಇದರಲ್ಲಿ ವಿದ್ಯಾರ್ಥಿಗಳ ತಪ್ಪೇನೂ ಇರುವುದಿಲ್ಲ. ಹೀಗೆ, ಪದೇ ಪದೇ ವಿದ್ಯಾರ್ಥಿಗಳಿಂದ ಹಣ ಸುಲಿಗೆ ಮಾಡಲು ಒಂದಿಲ್ಲೊಂದು ಯೋಜನೆಗಳನ್ನು ಈ ವಿವಿಯಲ್ಲಿ ಜಾರಿ ಮಾಡಿದಂತೆ ಕಾಣುತ್ತದೆ.
ಅದು ಹೇಗೆ ಇರುತ್ತದೆ ಎಂದರೆ, ಅಂಕಪಟ್ಟಿ ಅಕ್ಷರ ದೋಷ ಮಾಡುವುದು, ಅದನ್ನು ತಿದ್ದಿಸಿಕೊಳ್ಳಲು ಶುಲ್ಕ ಪಡೆಯುವುದು. ಇದಕ್ಕಾಗಿ ಬಳ್ಳಾರಿ ವಿವಿಯಲ್ಲಿ ಇರುವ ವಿದ್ಯಾರ್ಥಿಗಳು ಅನುಭವಿಸುವ ಯಾತನೆ ಅಷ್ಟಿಷ್ಟಲ್ಲ.ಲೆಕ್ಕಪತ್ರದ ತನಿಖೆಯಾಗಲಿ: ವಿವಿಯಲ್ಲಿ ನಡೆಯುತ್ತಿರುವ ಕೋಟ್ಯಂತರ ರುಪಾಯಿ ವಹಿವಾಟಿನ ಕುರಿತು ಸಾಕಷ್ಟು ಅನುಮಾನಗಳು ಇವೆ. ಹೀಗಾಗಿ, ಇದರ ಸಮಗ್ರ ತನಿಖೆಯಾಗಬೇಕು ಎಂದು ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜು ಪ್ರಾಚಾರ್ಯರು, ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಆಗ್ರಹಿಸುತ್ತಾರೆ.
ಬಳ್ಳಾರಿ ವಿವಿಯಲ್ಲಿ ಕಳೆದ ಐದು ವರ್ಷಗಳಲ್ಲಿ ಆಗಿರುವ ಲೆಕ್ಕಪತ್ರ, ಮುದ್ರಣ, ಖರ್ಚು ಸೇರಿದಂತೆ ಎಲ್ಲದರ ಬಗ್ಗೆಯೂ ಪ್ರತ್ಯೇಕ ತನಿಖೆಯಾದಾಗಲೇ ಸತ್ಯ ಬೆಳಕಿಗೆ ಬರುತ್ತದೆ ಎನ್ನುವ ಮಾತು ಕೇಳಿ ಬರುತ್ತಿದೆ.ತಪ್ಪದ ಗೋಳು: ವಿವಿಯಲ್ಲಿ ಫಲಿತಾಂಶದ ಗೋಳು ಅಷ್ಟೇ ಅಲ್ಲ, ಅದರ ಹೊರತಾಗಿಯೂ ಹಲವು ಸಮಸ್ಯೆಗಳಿವೆ. ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ, ಮೂಲಭೂತ ಸೌಕರ್ಯಗಳ ಕೊರತೆ ಇದೆ. ಅಂತಿಮವಾಗಿ ಈ ಎಲ್ಲ ಸಮಸ್ಯೆಗಳ ಫಲಾನುಭವಿಗಳು ವಿದ್ಯಾರ್ಥಿಗಳೇ ಆಗಿದ್ದಾರೆ.ವಿಶ್ವವಿದ್ಯಾಲಯದವರು ಮಾಡುವ ತಪ್ಪಿಗೆ ನಾವು ದಂಡ ತೆರಬೇಕಾಗಿದೆ. ನಾವು ಸರಿಯಾಗಿ ಭರ್ತಿ ಮಾಡಿದ್ದರೂ ಸಹ ಅಂಕಪಟ್ಟಿಯಲ್ಲಿ ದೋಷ ಮಾಡಲಾಗುತ್ತದೆ. ಅದನ್ನು ಸರಿಪಡಿಸಿಕೊಳ್ಳಲು ನಾವು ದಂಡ ತೆರಬೇಕಾಗುತ್ತದೆ ಎಂದು ವಿದ್ಯಾರ್ಥಿ ಮಹೇಶ ಹೇಳುತ್ತಾರೆ.ಬಳ್ಳಾರಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಅಕ್ರಮಗಳ ಸಮಗ್ರ ತನಿಖೆಯಾಗಬೇಕು. ಈ ಕುರಿತು ಶೀಘ್ರದಲ್ಲಿಯೇ ನಾವು ಹೋರಾಟ ರೂಪಿಸುತ್ತಿವೆ. ವಿದ್ಯಾರ್ಥಿಗಳಿಂದ ಮಾಹಿತಿ ಪಡೆದು, ಸರ್ಕಾರಕ್ಕೆ ದೂರು ಸಲ್ಲಿಸುತ್ತೇವೆ ಎಂದು ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಅಮರೇಶ ಕಡಗದ ಹೇಳುತ್ತಾರೆ.