ಸಾರಾಂಶ
ಹುಬ್ಬಳ್ಳಿ:
ದುಡ್ಡು ಇದ್ದವರು ದೊಡ್ಡವರಲ್ಲ. ಪ್ರತಿ ದಿನ ಸೊಪ್ಪು ಸೇವಿಸಿ ಆರೋಗ್ಯ ಕಾಪಾಡಿಕೊಂಡವರು ದೊಡ್ಡವರು. ಅವರೇ ನಿಜವಾದ ಶ್ರೀಮಂತರು. ಪೋಷಕಾಂಶ ಮತ್ತು ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಸೊಪ್ಪುಗಳನ್ನು ನಾವು ಪ್ರತಿದಿನ ಸೇವಿಸಬೇಕು ಎಂದು ಮೂರುಸಾವಿರ ಮಠದ ಜ. ಗುರುಸಿದ್ಧ ರಾಜಯೋಗೀಂದ್ರ ಶ್ರೀ ಕರೆ ನೀಡಿದರು.ಇಲ್ಲಿನ ಮೂರುಸಾವಿರ ಮಠದ ಮೂಜಗಂ ಸಭಾಭವನದಲ್ಲಿ ಶನಿವಾರದಿಂದ ಆರಂಭವಾದ ಎರಡು ದಿನಗಳ ಸೊಪ್ಪು ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
''''''''ಧನರೇಖೆ ಇದ್ದು ಫಲವೇನು? ಆರೋಗ್ಯ ರೇಖೆ ಇಲ್ಲದ ಮೇಲೆ'''''''' ಎಂಬ ಶರಣರ ವಚನವನ್ನು ಉಲ್ಲೇಖಿಸಿದ ಶ್ರೀಗಳು, ಆರೋಗ್ಯ ತಂದುಕೊಡುವ ಸೊಪ್ಪುಗಳನ್ನು ಬಳಸಲು ಗ್ರಾಹಕರಿಗೆ ತಿಳಿಸಿದರು. ನಮ್ಮ ಆರೋಗ್ಯ ಕಾಪಾಡಲು ಶ್ರಮಿಸುತ್ತಿರುವ ಸಾವಯವ ರೈತರನ್ನು ನಾವೆಲ್ಲ ಪ್ರೋತ್ಸಾಹಿಸಬೇಕು ಎಂದರು.ಸಹಜ ಸಮೃದ್ಧ ಇಂತಹ ನಿರ್ಲಕ್ಷಿತ ಸೊಪ್ಪು ಮತ್ತು ಧಾನ್ಯಗಳನ್ನು ಗ್ರಾಹಕರಿಗೆ ಪರಿಚಯಿಸಲು ಶ್ರಮಿಸುತ್ತಿದೆ. ಇಂತಹ ಮೇಳಗಳು ನಮ್ಮ ನಿಜವಾದ ಅನ್ನದ ಪರಿಚಯ ಮಾಡಿಕೊಡುತ್ತಿವೆ. ಸಾವಯವ ಮೇಳ ಮತ್ತು ರೈತರ ಮಾರುಕಟ್ಟೆ ನಡೆಸಲು ಮೂರು ಸಾವಿರ ಮಠದ ಸಹಕಾರ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ''''''''ಸಕತ್ ಸೊಪ್ಪು'''''''' ಪುಸ್ತಕ ಬಿಡುಗಡೆ ಮಾಡಿದ ರೋಟರಿಕ್ಲಬ್ ಹುಬ್ಬಳ್ಳಿಯ ಅಧ್ಯಕ್ಷ ಬಾಪುಗೌಡ ಬಿರಾದಾರ ಮಾತನಾಡಿ, ಸೊಪ್ಪಿನಂಥ ಆರೋಗ್ಯಪೂರ್ಣ ಬೆಳೆಗಳನ್ನು ಬೆಳೆಸುತ್ತಿರುವ ರೈತರು, ಮಹಿಳಾ ಸಂಘಗಳು ಮತ್ತು ರೈತ ಗುಂಪುಗಳಿಗೆ ಗ್ರಾಹಕರು ಒತ್ತಾಸೆಯಾಗಿ ನಿಲ್ಲಬೇಕು. ಇಂತಹ ರೈತರ ಮಾರುಕಟ್ಟೆ ಪ್ರಯತ್ನಗಳಿಗೆ ಬ್ಯಾಂಕ್ ಗಳು ಅಗತ್ಯ ಆರ್ಥಿಕ ಸಹಕಾರ ನೀಡಬೇಕು ಎಂದರು.ಅಜ್ಜಿಯ ಮಡಿಲು; ಸೊಪ್ಪಿನ ಕಡಲು ಕಾರ್ಯಕ್ರಮದ ಮೂಲಕ ಸಾಗುವಳಿ ಮಾಡದ ಸೊಪ್ಪಿನ ತಳಿಗಳ ಮಹತ್ವದ ಅರಿವು ಮೂಡಿಸುತ್ತಿರುವ ತುಮಕೂರಿನ ಮುರಳೀಧರ ಗುಂಗುರುಮಳೆ ಮಾತನಾಡಿ, ನಮಗೆ ಅರಿವಿಲ್ಲದ ನೂರಾರು ಸೊಪ್ಪುಗಳಿವೆ. ಇವು ಆಹಾರವಾಗಿ, ಔಷಧಿಯಾಗಿ ಬಳಕೆಯಾಗುತ್ತವೆ. ಇಂತಹ ಸೊಪ್ಪುಗಳ ಬಗ್ಗೆ ಅರಿತು, ಅವುಗಳ ಬಳಕೆ ಮಾಡಬೇಕು ಎಂದರು.
ಬಗೆಬಗೆಯ ಸೊಪ್ಪು ಮತ್ತು ತರಕಾರಿಗಳನ್ನು ಬೆಳೆಸುತ್ತಿರುವ ಕುಂದಗೋಳ ತಾಲೂಕಿನ ಹಿರೇಬೆಂಡಿಗೇರಿ ಗ್ರಾಮದ ಸುಂದರಮ್ಮ ದೊಡ್ಡಮನಿ, ರೋಟರಿ ಕ್ಲಬ್‌ನ ಹುಬ್ಬಳ್ಳಿಯ ಕಾರ್ಯದರ್ಶಿ ಎ.ವಿ. ಸಂಕನೂರ ಮಾತನಾಡಿದರು. ಸಹಜ ಸಮೃದ್ಧ ಸಂಸ್ಥೆಯ ನಿರ್ದೇಶಕ ಜಿ. ಕೃಷ್ಣ ಪ್ರಸಾದ್ ಪ್ರಾಸ್ತಾವಿಕ ಮಾತನಾಡಿದರು. ಮೇಳದ ಆಯೋಜಕ ಶಾಂತಕುಮಾರ್ ಸಿ ನಿರೂಪಿಸಿದರು. ನೂರಕ್ಕೂ ಅಧಿಕ ಬಗೆಯ ಸೊಪ್ಪುಗಳುವರೂರಿನ ಎಜಿಎಂ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ವಿದ್ಯಾರ್ಥಿಗಳು ಔಷಧೀಯ ಸೊಪ್ಪುಗಳನ್ನು ಪ್ರದರ್ಶಿಸಿ, ಅವುಗಳ ಮಹತ್ವದ ಕುರಿತು ಮಾಹಿತಿ ನೀಡಿದರು. ಮೇಳದಲ್ಲಿ ಗೋಕರ್ಣದ ಕೆಂಪು ಹರಿವೆ, ನಾಗರಹೊಳೆ ಕಾಡಿನ ಬೆರಕೆ ಸೊಪ್ಪು, ಮಲೆನಾಡಿನ ಔಷಧೀಯ ಸೊಪ್ಪುಗಳು, ಉತ್ತರ ಕರ್ನಾಟಕದ ಹಕ್ಕರಕಿ, ಕಿರಕಸಾಲಿ, ಬಸಳೆ ಸೊಪ್ಪುಗಳು ಮಾರಾಟಕ್ಕೆ ಸಿಗುತ್ತಿವೆ. ಜತೆಗೆ ಸೊಪ್ಪಿನ ಬೀಜಗಳು, ಸೊಪ್ಪಿನ ಮೌಲ್ಯವರ್ಧಿತ ಪದಾರ್ಥಗಳು ಮಾರಾಟಕ್ಕಿವೆ.