ತೆರವುಗೊಳಿಸುವ ಕಾರ್ಯ ನಿಲ್ಲಿಸುವುದಿಲ್ಲ

| Published : Oct 26 2024, 12:58 AM IST

ಸಾರಾಂಶ

ನಗರದ ಗೂಡಂಗಡಿಗಳನ್ನು ತೆರವುಗೊಳಿಸುವ ಕಾರ್ಯ ಯಾವುದೇ ಕಾಲಕ್ಕೂ ನಿಲ್ಲಿಸುವುದಿಲ್ಲ ಎಂದು ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಹೇಳಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ನಗರದ ಗೂಡಂಗಡಿಗಳನ್ನು ತೆರವುಗೊಳಿಸುವ ಕಾರ್ಯ ಯಾವುದೇ ಕಾಲಕ್ಕೂ ನಿಲ್ಲಿಸುವುದಿಲ್ಲ ಎಂದು ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಹೇಳಿದರು.

ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರವನ್ನು ಸುಂದರಗೊಳಿಸಲು ಪಣತೊಟ್ಟಿರುವೆ. ಇದರಲ್ಲಿ ಯಾವು ಗೂಡಂಗಡಿಗಳನ್ನು ತೆರವುಗೊಳಿಸಲು ಯಾರಿಗೂ ಒತ್ತಾಯ ಮಾಡಿಲ್ಲ. ಎಲ್ಲರೂ ಸ್ವಯಂ ಪ್ರೇರಣೆಯಿಂದ ತೆರವುಗೊಳಿಸುತ್ತಿದ್ದಾರೆ. ಆದರೆ, ಅಂಬೇಡ್ಕರ್ ವೃತ್ತದ ಬಳಿಯಿರುವ ಅಂಗಡಿಗಳನ್ನು ತೆರವುಗೊಳಿಸಿದಾಗ ಪ್ರತಿಭಟನೆ ಮಾಡದೇ ಬಸವೇಶ್ವರ ವೃತ್ತದಲ್ಲಿರುವ ಗೋಡಂಗಡಿಗಳನ್ನು ತೆರವುಗೊಳಿಸಲು ಮುಂದಾದಾಗ ಹೋರಾಟ ಏಕೆ? ಅಲ್ಲಿ ಬಿಜೆಪಿ ಕಾರ್ಯಕರ್ತರ ಗೂಡಂಗಡಿಗಳು ಇರುವುದರಿಂದ ಮಾಜಿ ಶಾಸಕರು ಹಾಗೂ ಅವರ ಅನುಯಾಯಿಗಳು ತೆರವುಗೊಳಿಸಬಾರದೆಂದು ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದರು.ಮಾಜಿ ಶಾಸಕ ರಮೇಶ ಭೂಸನೂರ ಮತ್ತು ಸಂತೋಷ ಪಾಟೀಲ ಅವರು ತಿಳುವಳಿಕೆ ಉಳ್ಳವರು ಈ ರೀತಿಯ ವರ್ತನೆ ಸರಿಯಲ್ಲ. ಜಿಲ್ಲಾಧಿಕಾರಿಗಳು ತೆರವುಗೊಳಿಸಲು ಅನುಮತಿ ನೀಡಿಲ್ಲವೆಂದು ಹೇಳುವ ಅವರು ಡಿಸಿ ಅವರು ತೆರವುಗೊಳಿಸಬಾರದೆಂದು ಹೇಳಿದ್ದು ಪುರಾವೆ ಏನಾದರೂ ಇದ್ದರೇ ತೋರಿಸಬೇಕು. ನಾನು ಜಿಲ್ಲಾಧಿಕಾರಿಗಳ ಬಳಿ ಪರವಾನಿಗೆ ಕೇಳಲು ಹೋದಾಗ ಸ್ಥಳೀಯವಾಗಿ ಅಭಿವೃದ್ಧಿಪರ ಚಟುವಟಿಕೆಗಳಿಗೆ ನಮ್ಮ ಅನುಮತಿ ಬೇಕಾಗಿಲ್ಲ. ಸ್ಥಳೀಯವಾಗಿ ಇಲ್ಲಿಯ ವ್ಯವಸ್ಥೆಯನ್ನು ಸುಧಾರಣೆ ಮಾಡಲು ನೀವು ಸ್ವನಿರ್ಧಾರ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ ಎಂದು ತಿಳಿಸಿದರು.೨೦ ವರ್ಷದಿಂದ ಬಸ್ ನಿಲ್ದಾಣದ ಎದುರಿರುವ ಚರಂಡಿ ತುಂಬಿಹೋಗಿತ್ತು. ಅದನ್ನು 3 ದಿನಗಳಲ್ಲೇ ಸ್ವಚ್ಛಗೊಳಿಸಿದ್ದೇನೆ. ಬಿಜೆಪಿಯವರು ೧೩ ವರ್ಷಗಳಿಂದ ತೆರವುಗೊಳಿಸದೇ ಇದ್ದ ಗೂಡಂಗಡಿಗಳನ್ನು ಈಗೇಕೆ ತೆರವುಗೊಳಿಸುತ್ತಿದ್ದೀರಿ ಎಂದು ಪ್ರಶ್ನಿಸುತ್ತಾರೆ. ಇದರ ಅರ್ಥ ೧೩ ವರ್ಷದಿಂದ ಅಭಿವೃದ್ಧಿ ಆಗದೇ ಇದ್ದರೇ ಈಗ ಅಭಿವೃದ್ಧಿ ಮಾಡಬಾರದು ಎಂದು ಅರ್ಥವೇ?. ಇದರಲ್ಲಿ ನನ್ನ ಸ್ವಹಿತಾಶಕ್ತಿ ಇಲ್ಲ. ಬಡವರನ್ನು ನೋಯಿಸಬೇಕೆಂಬ ಇರಾದೇಯೂ ಇಲ್ಲ. ಪಟ್ಟಣವನ್ನು ಅಭಿವೃದ್ಧಿ ಹಾಗೂ ಸೌಂದರ್ಯೀಕರಣ ಮಾಡಬೇಕೆನ್ನುವ ಏಕೈಕ ಉದ್ದೇಶ ನನ್ನದು ಎಂದು ಮನವಿ ಮಾಡಿದರು.ದಿನಾಲೂ ನೂರಾರು ಸಾರ್ವಜನಿಕರು ನನಗೆ ಕರೆ ಮಾಡಿ ನೀವು ಮಾಡುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ. ದಿಟ್ಟತನದ ಕಾರ್ಯ ಕೈಗೆತ್ತಿಕೊಂಡ ಕೆಲಸದಿಂದ ಹಿಂದಕ್ಕೆ ಸರಿಯಬೇಡಿ ಎಂದು ಹೇಳುತ್ತಿದ್ದಾರೆ. ಬಜಾರ್ ಲೈನ್‌ಗೆ ಅನ್ವಯಿಸದ ತೆರವು ಕಾರ್ಯ ಇಲ್ಲಿ ಏಕೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಎಲ್ಲ ಅಂಗಡಿ ಮಾಲೀಕರಿಗೆ ದಾಖಲಾತಿಗಳನ್ನು ಒದಗಿಸಲು ನೋಟಿಸ್ ಕಳುಹಿಸಿದ್ದೇನೆ. ಎಷ್ಟೇ ಪ್ರಭಾವಿಗಳಿದ್ದರೂ ರಸ್ತೆಯ ಮೇಲೆ ಅತಿಕ್ರಮಣ ಮಾಡಿದ್ದರೇ ತೆರವುಗೊಳಿಸುವ ಕಾರ್ಯ ಶೀಘ್ರ ಆರಂಭಿಸಲಾಗುವುದು ಎಂದು ತಿಳಿಸಿದರು.ಗೂಡಂಗಡಿಗಳೆಂದರೇ ತಳ್ಳುವ ಗಾಡಿಯ ಮೇಲೆ ವಸ್ತುಗಳನ್ನು ತೆಗೆದುಕೊಂಡು ಬಂದು ದಿನವೀಡಿ ವ್ಯಾಪಾರ ಮಾಡಿಕೊಂಡು ಸಂಜೆ ಗಾಡಿಗಳನ್ನು ಮನೆಗೆ ಒಯ್ಯುಯುವುದು. ಅದನ್ನು ಬಿಟ್ಟು ಅಲ್ಲಿ ಸುಸರ್ಜಿತ ಶೆಡ್‌ಗಳನ್ನು ನಿಲ್ಲಿಸಿ ಬೇರೆಯವರಿಗೆ ಬಾಡಿಗೆ ಕೊಡುವುದು ಅದು ಗೂಡಂಗಡಿ ಎನಿಸಿಕೊಳ್ಳುವುದಿಲ್ಲ ಎಂದು ಕಿಡಿಕಾರಿದರು.ಈ ವೇಳೆ ಪುರಸಭೆ ಉಪಾಧ್ಯಕ್ಷ ರಾಜಣ್ಣ ನಾರಾಯಣಕರ ಸಿಬ್ಬಂದಿ ಸಿದ್ದು ಅಂಗಡಿ, ಜೆಇ ಅಜರ್ ನಾಟಿಕಾರ್ ಇದ್ದರು.ನೂರಾರು ಜನರು ಈ ಕಾರ್ಯಕ್ಕೆ ಬೆಂಬಲಿಸುತ್ತಿರುವಾಗ ನಾಲ್ಕರು ಜನರಿಗಾಗಿ ಕಾರ್ಯ ಸ್ಥಗಿತಗೊಳಿಸುವ ಮಾತೆ ಇಲ್ಲ. ಶಾಸಕರು ಅಭಿವೃದ್ಧಿಗೆ ಸಹಕರಿಸುತ್ತಿದ್ದಾರೆ. ಇನ್ನಷ್ಟು ಹೆಚ್ಚಿನ ಅನುದಾನ ಪುರಸಭೆಗೆ ಒದಗಿಸಿಕೊಟ್ಟರೆ ಪಟ್ಟಣದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತೇನೆ.

-ಶಾಂತು ಬಿರಾದಾರ, ಪುರಸಭೆ ಅಧ್ಯಕ್ಷರು.