ಸಾರಾಂಶ
ಹುಬ್ಬಳ್ಳಿ:
ಇಲ್ಲಿಯ ವೀರಾಪೂರ ಓಣಿಯಲ್ಲಿ ಮೇ 15ರಂದು ಹತ್ಯೆಯಾಗಿದ್ದ ಅಂಜಲಿ ಅಂಬಿಗೇರ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ ಶುಕ್ರವಾರ ₹ 5 ಲಕ್ಷ ಪರಿಹಾರ ಚೆಕ್ ಹಸ್ತಾಂತರಿಸಿದರು.ಅಂಜಲಿ ಅಂಬಿಗೇರ ಹತ್ಯೆ ಖಂಡಿಸಿ ರಾಜ್ಯವ್ಯಾಪಿ ಹೋರಾಟ ನಡೆದಿದ್ದವು. ಇದಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ ಅವರ ಕುಟುಂಬಕ್ಕೆ ಪರಿಹಾರ ಒದಗಿಸುವ ಜತೆಗೆ ಆಸರೆಯಾಗುವ ಭರವಸೆ ನೀಡಿತ್ತು. ಅದರಂತೆ ಕಿತ್ತೂರು ಉತ್ಸವಕ್ಕೆ ತೆರಳುವ ಮುನ್ನ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ ಮೃತ ಅಂಜಲಿ ಸಹೋದರಿಯರಿಗೆ ಚೆಕ್ ಹಸ್ತಾಂತರಿಸಿದರು. 2024 ಮೇ 15ರಂದು ಬೆಳ್ಳಂಬೆಳಗ್ಗೆ 5.30ರ ಸುಮಾರಿಗೆ ಮನೆಗೆ ನುಗ್ಗಿದ ಆರೋಪಿ ಗಿರೀಶ ಸಾವಂತ ಎಂಬಾತ ಅಂಜಲಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ. ಹಾಡಹಗಲೇ ಕಾಲೇಜು ಕ್ಯಾಂಪಸ್‌ನಲ್ಲಿ ನೇಹಾ ಹಿರೇಮಠ ಹತ್ಯೆ ಪ್ರಕರಣ ಮಾಸುವ ಮುನ್ನವೇ ವಾಣಿಜ್ಯನಗರಿಯಲ್ಲಿ ನಡೆದಿದ್ದ ಅಂಜಲಿ ಹತ್ಯೆ ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿತ್ತು. ಈ ಪ್ರಕರಣ ಖಂಡಿಸಿ ರಾಜ್ಯವ್ಯಾಪಿ ಪ್ರತಿಭಟನೆಗಳು ಸಹ ನಡೆದಿದ್ದವು.
ಇನ್ನೊಂದೆಡೆ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ಸೇರಿ ರಾಜ್ಯದ ಜನತೆ ಕಿಡಿಕಾರಿದ್ದರಲ್ಲದೇ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದು ಆರೋಪಿ ವಿಪಕ್ಷ, ವಿವಿಧ ಸಂಘಟನೆಗಳು ಹಾಗೂ ಅಂಬಿಗೇರ ಸಮಾಜ ಸೇರಿ ಎಲ್ಲ ಸಮುದಾಯಗಳು ಒಟ್ಟುಗೂಡಿ ಹೋರಾಟ ನಡೆಸಿದ್ದರು. ಈ ವೇಳೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಾಯಕರು, ಅನೇಕ ಗಣ್ಯರು ಹಾಗೂ ಎಲ್ಲ ಸಮುದಾಯದ ಮುಖಂಡರು ವೀರಾಪೂರ ಓಣಿಯಲ್ಲಿರುವ ಅವರ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಅಲ್ಲದೇ, ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದ್ದರು.ರಾಜ್ಯವ್ಯಾಪಿ ನಡೆದಿದ್ದ ಹೋರಾಟಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ ಕುಟುಂಬಕ್ಕೆ ಪರಿಹಾರ ಮತ್ತು ಆಸರೆಯಾಗುವ ಭರವಸೆ ನೀಡಿತ್ತು. ಅದರಂತೆ ಅವರ ನಿವಾಸಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಸಹ ಭೇಟಿ ನೀಡಿ ಸಾಂತ್ವನ ಹೇಳಿ, ಪರಿಹಾರ, ಮನೆ ಹಾಗೂ ಅವರ ಬೇಡಿಕೆಗೆ ಸ್ಪಂದಿಸುವ ಭರವಸೆ ನೀಡಿದ್ದರು. ಸರ್ಕಾರ ನೀಡಿದ ಭರವಸೆಯಂತೆ ಪರಿಹಾರ ಚೆಕ್ ವಿತರಿಸಲಾಗಿದೆ. ಮುಂಬರುವ ದಿನಗಳಲ್ಲಿ ಆ ಕುಟುಂಬಕ್ಕೆ ಮನೆ ನೀಡುವ ಭರವಸೆ ನೀಡಿದೆ.
ಈ ವೇಳೆ ಶಾಸಕ ಪ್ರಸಾದ ಅಬ್ಬಯ್ಯ, ಜಿಲ್ಲಾಧಿಕಾರಿ ದಿವ್ಯಪ್ರಭು, ಕಾಂಗ್ರೆಸ್ ಮುಖಂಡರಾದ ಅಲ್ತಾಫ್ ಹಳ್ಳೂರು ಸೇರಿದಂತೆ ಇತರರು ಇದ್ದರು.ಅಂಜಲಿ ಅಂಬಿಗೇರ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಪರಿಹಾರ ನಿಧಿಯಿಂದ ಗಂಗವ್ವ ಅಂಬಿಗೇರ ಹೆಸರಿನಲ್ಲಿ ₹ 5 ಲಕ್ಷ ಪರಿಹಾರ ನೀಡಿರುವುದು ಸ್ವಾಗತಾರ್ಹ ಎಂದು ಅಂಬಿಗೇರ ಸಮಾಜದ ಮುಖಂಡ ಮನೋಜ ಕರ್ಜಗಿ ಹೇಳಿದರು. ಪರಿಹಾರ ಚೆಕ್ ಹಸ್ತಾಂತರ ನಂತರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಣ್ಣು ಮಕ್ಕಳಿರುವ ಈ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ಕಲ್ಪಿಸಿ ಕುಟುಂಬಕ್ಕೆ ಆಸರೆಯಾಗಬೇಕು. ಅಲ್ಲದೇ, ಆದಷ್ಟುಬೇಗ ಸುಸಜ್ಜಿತ ಮನೆ ನೀಡಬೇಕು. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಶಾಸಕ ಪ್ರಸಾದ ಅಬ್ಬಯ್ಯ ಸುಸಜ್ಜಿತ ಮನೆ ನೀಡುವ ಭರವಸೆ ನೀಡಿದ್ದಾರೆ. ಅದರಂತೆ ಸಿಎಂ ಸಿದ್ದರಾಮಯ್ಯ ಕೂಡಾ ಸಚಿವರಿಗೆ ಹಾಗೂ ಶಾಸಕರಿಗೆ ಶೀಘ್ರ ಮನೆ ನೀಡುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.ಸರ್ಕಾರ ನೀಡಿದ ಭರವಸೆಯಂತೆ ಮೃತ ಅಂಜಲಿ ಕುಟುಂಬಸ್ಥರಿಗೆ ₹ 5 ಲಕ್ಷ ಪರಿಹಾರದ ಚೆಕ್ ಹಸ್ತಾಂತರಿಸಲಾಗಿದೆ. ಮುಂಬರುವ ದಿನಗಳಲ್ಲಿ ಮನೆ ಕೂಡಾ ನೀಡಲು ಸರ್ಕಾರ ಕ್ರಮವಹಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.