ಸಾರಾಂಶ
ರಾಜ್ಯ ಸರ್ಕಾರದಿಂದ ನಮಗೆ ಯಾವುದೇ ಅನುದಾನದ ಕೊರತೆ ಆಗಿಲ್ಲ. ನನ್ನ ಕ್ಷೇತ್ರಕ್ಕೇ ₹1 ಸಾವಿರ ಕೋಟಿ ಅನುದಾನ ಸಿಕ್ಕಿದ್ದು, ಪ್ರತಿದಿನ ಹೊಸ ಕಾಮಗಾರಿಗಾಗಿ ಗುದ್ದಲಿ ಪೂಜೆ ಮಾಡಲಾಗುತ್ತಿದೆ. ಯಾರಿಗೆ ಯಾವ ಹೊಟ್ಟೆ ನೋವಿದೆಯೋ ಗೊತ್ತಿಲ್ಲ. ಅದಕ್ಕಾಗಿ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ - ಗಣಿಗ
ಬೆಂಗಳೂರು : ರಾಜ್ಯ ಸರ್ಕಾರದಿಂದ ನಮಗೆ ಯಾವುದೇ ಅನುದಾನದ ಕೊರತೆ ಆಗಿಲ್ಲ. ನನ್ನ ಕ್ಷೇತ್ರಕ್ಕೇ ₹1 ಸಾವಿರ ಕೋಟಿ ಅನುದಾನ ಸಿಕ್ಕಿದ್ದು, ಪ್ರತಿದಿನ ಹೊಸ ಕಾಮಗಾರಿಗಾಗಿ ಗುದ್ದಲಿ ಪೂಜೆ ಮಾಡಲಾಗುತ್ತಿದೆ. ಯಾರಿಗೆ ಯಾವ ಹೊಟ್ಟೆ ನೋವಿದೆಯೋ ಗೊತ್ತಿಲ್ಲ. ಅದಕ್ಕಾಗಿ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಶಾಸಕ ರವಿ ಗಣಿಗ ತಿಳಿಸಿದರು.
ವಿವಿಧ ವಿಚಾರಗಳ ಕುರಿತು ಚರ್ಚಿಸಲು ಕಾಂಗ್ರೆಸ್ ಶಾಸಕರೊಂದಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಸದಾಶಿವನಗರದ ಅವರ ನಿವಾಸದಲ್ಲಿ ಭೇಟಿಯಾಗಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರವಿ ಗಣಿಗ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಬ್ಬರೂ ಅನುದಾನ ನೀಡುತ್ತಿದ್ದಾರೆ. ನನ್ನ ಕ್ಷೇತ್ರಕ್ಕೇ ₹1 ಸಾವಿರ ಕೋಟಿ ಅನುದಾನ ಸಿಕ್ಕಿದೆ. ಪ್ರತಿದಿನ ಹೊಸ ಕಾಮಗಾರಿ ಆರಂಭಿಸಲಾಗುತ್ತಿದೆ. ಮುಖ್ಯಮಂತ್ರಿ ಅವರು ಹಣಕಾಸು ಸಚಿವರಾಗಿದ್ದು, ಅವರು ಸಹಿ ಹಾಕದೆಯೇ ಅನುದಾನ ಸಿಗುತ್ತದೆಯೇ? ಯಾರಿಗೆ ಯಾವ ನೋವಿದೆಯೋ ತಿಳಿದಿಲ್ಲ. ಏನೇ ಸಮಸ್ಯೆಗಳಿದ್ದರೂ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರಲ್ಲಿ, ಪಕ್ಷದ ವೇದಿಕೆಯಲ್ಲಿ ಮಾತನಾಡಲಿ ಎಂದರು.
ಶೃಂಗೇರಿ ಶಾಸಕ ರಾಜೇಗೌಡ ಮಾತನಾಡಿ, ಅನುದಾನದ ವಿಚಾರವಾಗಿ ಹಿರಿಯ ಶಾಸಕರು ಏತಕ್ಕಾಗಿ ಹೇಳಿದ್ದಾರೋ ತಿಳಿದಿಲ್ಲ. ನಮಗೆ ಅನುದಾನ ಸಿಗುತ್ತಿದೆ. ಅತಿವೃಷ್ಟಿ ಸಂದರ್ಭದಲ್ಲಿಯೇ ಕ್ಷೇತ್ರಕ್ಕೆ ₹50 ಕೋಟಿ ನೀಡಿದ್ದಾರೆ. ಗ್ಯಾರಂಟಿ ಯೋಜನೆಗಳ ಜತೆಗೆ ಬೇರೆ ಅನುದಾನಗಳೂ ಬರುತ್ತಿವೆ ಎಂದರು.
ವಸತಿ ಯೋಜನೆಯಲ್ಲಿ ಮನೆ ಹಂಚಿಕೆಯಲ್ಲಿ ಭ್ರಷ್ಟಾಚಾರದ ಬಗ್ಗೆ ನನಗೆ ತಿಳಿದಿಲ್ಲ. ನಮ್ಮ ಕ್ಷೇತ್ರದಲ್ಲಿ ಮನೆ ಹಂಚಿಕೆಯಲ್ಲಿ ಯಾವುದೇ ಆರೋಪವಿಲ್ಲ. ಕ್ಷೇತ್ರದಲ್ಲಿ ಅರಣ್ಯ ಸಮಸ್ಯೆಯಿದ್ದು, ನಿವೇಶನ ತೋರಿಸಿದರೆ ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಶಾಸಕರಾದ ಶಾಂತನಗೌಡ, ಜಿ.ಎಸ್. ಪಾಟೀಲ್, ಮಾಜಿ ಶಾಸಕ ರಾಜಶೇಖರ ಪಾಟೀಲ್ ಇದ್ದರು.
ಮನೆ ಮಂಜೂರಿಗೆ ಹಣ ಪಡೆಯುವ ದಾರಿದ್ರ್ಯ ಸರ್ಕಾರಕ್ಕಿಲ್ಲ: ಗಣಿಗ
ಮನೆ ಮಂಜೂರು ಮಾಡುವುದಕ್ಕೂ ಹಣ ಪಡೆಯುವಷ್ಟು ದಾರಿದ್ರ್ಯ ನಮ್ಮ ಕಾಂಗ್ರೆಸ್ ಸರ್ಕಾರ ಮತ್ತು ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ಬಂದಿಲ್ಲ. 2022ರಲ್ಲಿ ಆಯ್ಕೆಯಾದವರಿಗೆ ಈಗ ಮನೆ ನೀಡಲಾಗುತ್ತಿದೆ. ಆಗ ಮನೆ ಮಂಜೂರಾಗಿದ್ದನ್ನು ಈಗ ಬದಲಾವಣೆ ಮಾಡಲು ಸಾಧ್ಯವಿಲ್ಲ. ಜಮೀರ್ ಅಹಮದ್ ಖಾನ್ ಅವರು ಸಾಕಷ್ಟು ದಾನ-ಧರ್ಮ ಮಾಡಿದ್ದಾರೆ. ಈ ವಿಚಾರದಲ್ಲಿ ಹಣ ಪಡೆಯುವ ಅವಶ್ಯಕತೆ ಅವರಿಗಿಲ್ಲ ಎಂದು ರವಿ ಗಣಿಗ ಹೇಳಿದರು.