ಶಾಸಕರು ಮೂರು ತಿಂಗಳಿಂದ ನಡೆಯುತ್ತಿರುವ ಹೋರಾಟದ ಕಡೆಗೆ ಸೌಜನ್ಯದ ಭೇಟಿ ಸಹ ಮಾಡಿಲ್ಲ, ಕ್ಷೇತ್ರದ ಜನರ ಜೀವನ, ಉಸಿರು, ಬದುಕು ಮತ್ತು ಕೃಷಿ ಮುಖ್ಯ ಎನ್ನಬೇಕೆ ಹೊರತು ಪಲಾಯನವಾದ ಮಾಡಬಾರದು
ಕೊಪ್ಪಳ: ಕೊಪ್ಪಳ ಹಾಗೂ ಸುತ್ತಮುತ್ತಲಿನ ಜನರು ಕಾರ್ಖಾನೆ ತ್ಯಾಜ್ಯದಿಂದ ನೂರೆಂಟು ಸಮಸ್ಯೆ ಎದುರಿಸುತ್ತಿದ್ದು, ಕೂಡಲೇ ಸಿಎಂ ಸಿದ್ದರಾಮಯ್ಯ ಅವರು ಸ್ಪಂದಿಸಬೇಕು ಎಂದು ಹಿರಿಯ ಸಾಹಿತಿ ಪ್ರೊ. ಕೆ.ಎಸ್. ಭಗವಾನ ಆಗ್ರಹಿಸಿದ್ದಾರೆ.
ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತ ರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಇಲ್ಲಿಯ ನಗರಸಭೆ ಎದುರಿಗೆ ಕಾರ್ಖಾನೆ ವಿಸ್ತರಣೆ ವಿರೋಧಿಸಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದ ೭೫ನೇ ದಿನದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದರು. ನಾನು ಖುದ್ದು ಭೇಟಿಯಾಗಿ ಸಿಎಂ ಸಿದ್ದರಾಮಯ್ಯ ಅವರ ಮನವೊಲಿಸುತ್ತೇನೆ ಎಂದರು.ಇದಕ್ಕೂ ಮೊದಲು ಗಿಣಿಗೇರಿ, ಅಲ್ಲಾನಗರ, ಹಿರೇಬಗನಾಳ, ಹಾಲವರ್ತಿ ಮುಂತಾದ ಗ್ರಾಮಗಳಿಗೆ ಭೇಟಿಕೊಟ್ಟು ರೈತರು, ವಿದ್ಯಾರ್ಥಿಗಳು ಹಾಗೂ ಗೃಹಿಣಿಯರೊಂದಿಗೆ ಸಂವಾದ ನಡೆಸಿದರು.
ಕೃಷಿ ಬೆಲೆ ಆಯೋಗದ ಸದಸ್ಯ ಡಿ.ಎಚ್.ಪೂಜಾರ ಮಾತನಾಡಿ, ಶಾಸಕರು ಮೂರು ತಿಂಗಳಿಂದ ನಡೆಯುತ್ತಿರುವ ಹೋರಾಟದ ಕಡೆಗೆ ಸೌಜನ್ಯದ ಭೇಟಿ ಸಹ ಮಾಡಿಲ್ಲ, ಕ್ಷೇತ್ರದ ಜನರ ಜೀವನ, ಉಸಿರು, ಬದುಕು ಮತ್ತು ಕೃಷಿ ಮುಖ್ಯ ಎನ್ನಬೇಕೆ ಹೊರತು ಪಲಾಯನವಾದ ಮಾಡಬಾರದು, ಹೋರಾಟವನ್ನುಶೀಘ್ರ ರಾಜಕ್ಕೆ ವಿಸ್ತರಿಸಲಾಗುವದು ಎಂದರು.ಹಿರಿಯ ವಕೀಲ ರಾಜು ಬಾಕಳೆ ಮಾತನಾಡಿ, ಕಾರ್ಖಾನೆ ಆರಂಭದ ಹಂತದಲ್ಲೇ ನ್ಯಾಯಾಲಯ ಮತ್ತು ರೈತರ ಬಲಪ್ರಯೋಗದಿಂದಲೂ ಸಹ ಅಂದು ಭೂಮಿ ಕಸಿದುಕೊಳ್ಳುವುದನ್ನು ತಡೆಯಲು ಪ್ರಯತ್ನಿಸಿದೇವು, ದಶಕಗಳ ಕಾಲ ನ್ಯಾಯಾಲಯದಲ್ಲಿ ಹೋರಾಡಿ ಸೋತಿವಿ, ಆದರೆ ಈಗ ಜನಸಂಗ್ರಾಮದ ಮೂಲಕ ಗೆಲವು ಸಾಧಿಸುತ್ತೇವೆ ಎಂಬ ವಿಶ್ವಾಸವಿದೆ, ಗವಿಶ್ರೀಗಳ ಆಶೀರ್ವಾದ ಸಹ ನಮಗಿದೆ ಎಂದು ಭಾವಿಸಿದ್ದೇವೆ, ಸಂಸದರು ನಮ್ಮ ಪರ ಮಾತನಾಡಿದ್ದಾರೆ, ಕಾರ್ಖಾನೆ ಬೇಕು ಎಂದು ಹೋರಾಡುವವರನ್ನು ಭೇಟಿ ಮಾಡಿ ಭೂಮಿ ಮರಳಿ ಕೊಡಿಸಲು ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದು ಬಲ ತಂದಿದೆ ಎಂದರು.
ರೈತ ಮಹಿಳೆ ಗಿರಿಯಮ್ಮ ಕುಣಿಕೇರಿ ಮತ್ತು ಹಾಲವರ್ತಿಯ ಕೃಷಿಕ ಮಾರ್ಕಂಡಯ್ಯ ಹಿರೇಮಠ ಮಾತನಾಡಿದರು.ದದೇಗಲ್ ಸದ್ಗುರು ಸಿದ್ಧಾರೂಢ ಮಠದ ಆತ್ಮಾನಂದ ಸ್ವಾಮೀಜಿಗಳು ಆಶೀರ್ವಚನ ನೀಡಿ, ಪರಿಸರ ಉಳಿವಿಗೆ ಎಲ್ಲರೂ ಸಂಕಲ್ಪ ಮಾಡೋಣ, ಜನರಿಗಾಗಿ ಹೋರಾಡೋಣ, ಜನಪ್ರತಿನಿಧಿಗಳು ನಮ್ಮ ಕೂಗು ಕೇಳಿ ಎಂದರು.
ಧರಣಿಯಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಮಲ್ಲಿಕಾರ್ಜುನ ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಪ್ರಕಾಶಕ ಡಿ.ಎಂ. ಬಡಿಗೇರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ ಎಚ್.ಎಸ್.ಪಾಟೀಲ್, ಎ.ಎಂ.ಮದರಿ, ಕೃಷಿ ಬೆಲೆ ಆಯೋಗದ ಸದಸ್ಯ ಡಿ.ಎಚ್.ಪೂಜಾರ, ರಾಜು ಬಾಕಳೆ, ರಾಜ್ಯ ರೈತ ಸಂಘದ ಮುಖಂಡ ನಜೀರಸಾಬ್ ಮೂಲಿಮನಿ, ಭೀಮಸೇನ ಕಲಕೇರಿ, ಮಹಿಳಾ ನಾಯಕಿಯರಾದ ಜ್ಯೋತಿ ಎಂ.ಗೊಂಡಬಾಳ, ಸಾವಿತ್ರಿ ಮುಜುಮದಾರ, ಖಾಸಗಿ ಶಾಲಾ ಆಡಳಿತ ಮಂಡಳಿ ಕುಸುಮ ಸಂಘಟನೆಯ ಅಧ್ಯಕ್ಷ ಶಾಯೀದ್ ತಹಶೀಲ್ದಾರ, ದಾನಪ್ಪ ಕವಲೂರು, ಅಲೀಮುದ್ದಿನ್, ಸುರೇಶ ಕುಂಬಾರ, ಶುಕರಾಜ ತಾಳಕೇರಿ, ಮಂಜು ಹಾಲವರ್ತಿ, ರಂಗ ಕಲಾವಿದೆ ಎಚ್. ಬಿ.ಸರೋಜಮ್ಮ, ಎಸ್.ಬಿ. ರಾಜೂರು, ಶಂಭುಲಿಂಗಪ್ಪ ಹರಗೇರಿ, ನಿವೃತ್ತ ಪ್ರಾಚಾರ್ಯ ಎಲ್.ಎಫ್.ಪಾಟೀಲ್, ಮೂಕಪ್ಪ ಮೇಸ್ತ್ರೀ,ಬಸಾಪುರ, ಶರಣು ಗಡ್ಡಿ, ರವಿ ಕಾಂತನವರ,ಗವಿಸಿದ್ದಪ್ಪ ಹಲಿಗಿ, ಜಿ.ಎಸ್.ಕಡೇಮನಿ, ಮಹಾದೇವಪ್ಪ ಮಾವಿನಮಡು, ಬಸವರಾಜ ನರೇಗಲ್, ಯಮನೂರಪ್ಪ ಹಾಲಳ್ಳಿ ಬಸಾಪುರ, ಮಂಗಳೇಶ ರಾಠೋಡ, ಮಂಜುನಾಥ ಕವಲೂರು, ಸಿ.ಬಿ. ಪಾಟೀಲ್, ಸುಂಕಪ್ಪ ಮೀಸಿ, ಮಲ್ಲಪ್ಪ ಮಾ.ಪಾ., ಗಣೇಶ ವಿಶ್ವಕರ್ಮ, ಸುರೇಶ ಪೂಜಾರ, ಸದಾಶಿವ ಪಾಟೀಲ್ ಸೇರಿದಂತೆ ನೂರಾರು ಜನರು ಪಾಲ್ಗೊಂಡರು.