. ಸಿಎಂ ಸಿದ್ದರಾಮಯ್ಯ ಅವರು ಪಟ್ಟಣದ ಚಂದನ ಶಾಲೆಯಲ್ಲಿ ನಡೆಯುತ್ತಿರುವ ವಿಜ್ಞಾನ ವಿಸ್ತ್ರತ ಕಾರ್ಯಕ್ರಮಕ್ಕೆ ಆಗಮಿಸಿ ಚಂದನ ಶ್ರೀ ಪುರಸ್ಕಾರವನ್ನು ಗ್ರೇಟರ್ ಬೆಂಗಳೂರು ನಗರದ ರೂವಾರಿ, ನಿವೃತ್ತ ಐಎಎಸ್ ಅಧಿಕಾರಿ ಬಿ.ಎಸ್. ಪಾಟೀಲ ಅವರಿಗೆ ಪ್ರದಾನ ಮಾಡುವರು.

ಲಕ್ಷ್ಮೇಶ್ವರ: ಪಟ್ಟಣದ ಚಂದನ ಶಾಲೆಯಲ್ಲಿ ನಡೆಯುತ್ತಿರುವ ವಿಜ್ಞಾನ ವಿಸ್ತ್ರತ ಕಾರ್ಯಕ್ರಮ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ. 13ರಂದು ಆಗಮಿಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು.ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಸಭಾಭವನದಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲಕ್ಷ್ಮೇಶ್ವರ ಪಟ್ಟಣಕ್ಕೆ ಆಗಮಿಸುತ್ತಿರುವುದರಿಂದ ಪಕ್ಷದ ಕಾರ್ಯಕರ್ತರಲ್ಲಿ ಸಂತಸ ಮೂಡಿಸಿದೆ. ಸಿಎಂ ಸಿದ್ದರಾಮಯ್ಯ ಅವರು ಪಟ್ಟಣದ ಚಂದನ ಶಾಲೆಯಲ್ಲಿ ನಡೆಯುತ್ತಿರುವ ವಿಜ್ಞಾನ ವಿಸ್ತ್ರತ ಕಾರ್ಯಕ್ರಮಕ್ಕೆ ಆಗಮಿಸಿ ಚಂದನ ಶ್ರೀ ಪುರಸ್ಕಾರವನ್ನು ಗ್ರೇಟರ್ ಬೆಂಗಳೂರು ನಗರದ ರೂವಾರಿ, ನಿವೃತ್ತ ಐಎಎಸ್ ಅಧಿಕಾರಿ ಬಿ.ಎಸ್. ಪಾಟೀಲ ಅವರಿಗೆ ಪ್ರದಾನ ಮಾಡುವರು. ನಂತರ ಚಂದನ ಶಾಲೆಯಲ್ಲಿ ನಿರ್ದೇಶಕ, ನಿವೃತ್ತ ಶಿಕ್ಷಕ ಎಚ್.ಸಿ. ರಟಗೇರಿ ಅವರ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸುವರು.ಚಂದನ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಟಿ. ಈಶ್ವರ ಮಾತನಾಡಿ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸುತ್ತಿರುವುದು ಪಕ್ಷದ ಕಾರ್ಯಕರ್ತರಲ್ಲಿ ಹುರುಪು ಮೂಡಿಸಿದೆ. ಡಿ. 13ರಂದು ಬೆಳಗ್ಗೆ 11 ಗಂಟೆಗೆ ಆಗಮಿಸುವ ಮುಖ್ಯಮಂತ್ರಿಗಳು ಚಂದನ ಶಾಲೆಯಲ್ಲಿ ಕಳೆದ 10 ವರ್ಷದಿಂದ ನಡೆಯುತ್ತಿರುವ ವಿಜ್ಞಾನ ವಿಸ್ತ್ರತ ಕಾರ್ಯಕ್ರಮ ಉದ್ಘಾಟಿಸುವರು. ಈ ವೇಳೆ ದೇಶದ ಪ್ರಸಿದ್ಧ ವಿಜ್ಞಾನಿಗಳು ಭಾಗವಹಿಸುವರು. ನಂತರ ಚಂದನ ಶಾಲೆಯ ನಿರ್ದೇಶಕರಾಗಿದ್ದ ನಿವೃತ್ತ ಶಿಕ್ಷಕ ಎಚ್.ಸಿ. ರಟಗೇರಿ ಅವರ ಕಂಚಿನ ಪುತ್ಥಳಿ ಅನಾವರಣ ಮಾಡುವರು ಎಂದರು.ಕಾರ್ಯಕ್ರಮದಲ್ಲಿ ಸಾವಿರಾರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮತ್ತು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಆಗಮಿಸುವರು ಎಂದರು.

ಮಾಜಿ ಶಾಸಕ ಡಿ.ಆರ್. ಪಾಟೀಲ, ಮಾಜಿ ಸಚಿವ ಬಿ.ಆರ್. ಯಾವಗಲ್ಲ, ಜಿ.ಎಸ್. ಗಡ್ಡದೇವರಮಠ, ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ, ಹುಮಾಯೂನ್ ಮಾಗಡಿ, ಜಿ.ಆರ್. ಕೊಪ್ಪದ, ಆನಂದ ಗಡ್ಡದೇವಮಠ, ಜಿ.ವಿ. ಪಾಟೀಲ, ನಾಗರಾಜ ಮಡಿವಾಳರ, ಚನ್ನಪ್ಪ ಜಗಲಿ, ಸೋಮಣ್ಣ ಬೆಟಗೇರಿ, ವೀರೇಂದ್ರಗೌಡ ಪಾಟೀಲ, ಜಯಕ್ಕ ಕಳ್ಳಿ, ಭಾಗ್ಯಶ್ರೀ ಲಮಾಣಿ ಇತರರು ಇದ್ದರು. ಸಿಎಂ ಸಿದ್ದರಾಮಯ್ಯ ಆಗಮನ, ಭರದ ಸಿದ್ದತೆ

ಲಕ್ಷ್ಮೇಶ್ವರ: ಪಟ್ಟಣಕ್ಕೆ ಡಿ. ೧೩ರಂದು ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯನವರು ಸ್ಕೂಲ್ ಚಂದನಕ್ಕೆ ಆಗಮಿಸುತ್ತಿರುವುದರಿಂದ ಕಾರ್ಯಕ್ರಮದ ಸಿದ್ಧತೆ ಭರದಿಂದ ನಡೆದಿವೆ. ಮಂಗಳವಾರ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅವರು ಪಟ್ಟಣಕ್ಕೆ ಆಗಮಿಸಿ ಪರಿಶೀಲಿಸಿದರು.ಜಿಲ್ಲಾಧಿಕಾರಿಗಳು ಹೆಲಿಕಾಪ್ಟರ್ ಇಳಿಯುವ ಸ್ಥಳ ಮತ್ತು ಮುಖ್ಯಮಂತ್ರಿಗಳು ಭಾಗಿಯಾಗುವ ಕಾರ್ಯಕ್ರಮದ ಸ್ಥಳಗಳನ್ನು ಪರಿಶೀಲಿಸಿದರು. ಉಮಾ ವಿದ್ಯಾಲಯ ಹೈಸ್ಕೂಲ್ ಮೈದಾನದಲ್ಲಿ ಹೆಲಿಪ್ಯಾಡ್ ಸಿದ್ಧಗೊಳ್ಳಲಿದೆ.

ಈ ಸಂದರ್ಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ರೋಹನ್‌ ಜಗದೀಶ, ಡಿವೈಎಸ್‌ಪಿ ಮುರ್ತೂಜಾ ಖಾದ್ರಿ, ತಹಸೀಲ್ದಾರ್ ಧನಂಜಯ ಎಂ., ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ನಾಣಕೀ ನಾಯಕ್, ಲೋಕೋಪಯೋಗಿ ಇಲಾಖೆ ಎಇಇ ಫಕ್ಕೀರೇಶ ತಿಮ್ಮಾಪೂರ, ಸಿಪಿಐ ಬಿ.ವಿ. ನ್ಯಾಮಗೌಡ, ಪಿಎಸ್‌ಐ ನಾಗರಾಜ ಗಡದ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯ ಕರಡಿ ಅನೇಕರಿದ್ದರು.