ಮನುಷ್ಯ ಜನಿಸಿದ ತಕ್ಷಣ ಬಹಳಷ್ಟು ಹಕ್ಕುಗಳನ್ನು ಪಡೆದುಕೊಳ್ಳುತ್ತಾನೆ. ಮಾನವ ಹಕ್ಕುಗಳು ಎಲ್ಲ ಮನುಷ್ಯರು ಜನಿಸಿದ ತಕ್ಷಣ ನೈಸರ್ಗಿಕವಾಗಿ ಬರುವ ಹಕ್ಕುಗಳಾಗಿವೆ.
ಗದಗ: ಮಾನವ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ ತಿಳಿಸಿದರು.ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ನಡೆದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನುಷ್ಯ ಜನಿಸಿದ ತಕ್ಷಣ ಬಹಳಷ್ಟು ಹಕ್ಕುಗಳನ್ನು ಪಡೆದುಕೊಳ್ಳುತ್ತಾನೆ. ಮಾನವ ಹಕ್ಕುಗಳು ಎಲ್ಲ ಮನುಷ್ಯರು ಜನಿಸಿದ ತಕ್ಷಣ ನೈಸರ್ಗಿಕವಾಗಿ ಬರುವ ಹಕ್ಕುಗಳಾಗಿವೆ. ಮನುಷ್ಯನು ಜೀವಿಸುವ ಹಕ್ಕು, ಧರ್ಮ ಸ್ವಾತಂತ್ರ್ಯ ಹಕ್ಕು, ಸಮಾನತೆ ಹಕ್ಕು, ಸಂಚರಿಸುವ ಹಕ್ಕು, ಪ್ರಾಣ ರಕ್ಷಣೆ ಹಕ್ಕು, ಯೋಗ್ಯ ಪರಿಸರದ ಹಕ್ಕು, ಶಿಕ್ಷಣದ ಹಕ್ಕು ಇವುಗಳೆಲ್ಲ ಮಾನವ ಹಕ್ಕುಗಳಾಗಿರುತ್ತವೆ. ಬೇರೆಯವರ ಸ್ವಾತಂತ್ರ್ಯವನ್ನು ಹರಣ ಮಾಡುವ ಅಧಿಕಾರ ಯಾರಿಗೂ ಇರುವುದಿಲ್ಲ. ಮಾನವ ಹಕ್ಕುಗಳ ಉಲ್ಲಂಘನೆಯಾದಾಗ ಮಾನವ ಹಕ್ಕುಗಳ ಆಯೋಗಕ್ಕೆ ಲಿಖಿತವಾಗಿ ಅಥವಾ ಆನ್‌ಲೈನ್ ಮೂಲಕವಾದರೂ ದೂರು ನೀಡಬಹುದು ಎಂದರು.ಕಾರಾಗೃಹದಲ್ಲಿ ಕೈದಿಗಳಿಗೆ, ಜೀತ ಪದ್ಧತಿ, ಭಯೋತ್ಪಾದನೆ, ಬಾಲ್ಯವಿವಾಹ ಇಂತಹ ಪ್ರಕರಣಗಳಲ್ಲ ಮಾನವ ಹಕ್ಕುಗಳ ಉಲ್ಲಂಘನೆಯಾಗುವ ಸಂಭವವಿರುತ್ತದೆ. 1993ರಲ್ಲಿ ನಮ್ಮ ದೇಶದಲ್ಲಿ ಮಾನವ ಹಕ್ಕುಗಳ ಆಯೋಗ ಸ್ಥಾಪನೆಯಾಯಿತು. ಮಾನವ ಹಕ್ಕುಗಳ ಉಲ್ಲಂಘನೆಯಾದಾಗ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಬಹುದು ಅಥವಾ ನ್ಯಾಯಾಲಯಕ್ಕೂ ದೂರು ನೀಡಬಹುದು. ಮಾನವ ಹಕ್ಕುಗಳ ಆಯೋಗಕ್ಕೆ ಶಿಕ್ಷೆ ಕೊಡುವ ಅಧಿಕಾರವಿರುವುದಿಲ್ಲ. ಆಯೋಗವು ಸಂಬಂಧಿತ ಇಲಾಖೆಯ ಅಧಿಕಾರಿಗಳಿಗೆ ವರದಿಯನ್ನು ಶಿಫಾರಸು ಮಾಡುತ್ತದೆ ಎಂದರು.
ಸಂವಿಧಾನದ ಮೂಲಭೂತ ಹಕ್ಕುಗಳೂ ಮಾನವ ಹಕ್ಕುಗಳಾಗಿವೆ. ಸಂವಿಧಾನದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಹಕ್ಕು ಮತ್ತು ಕರ್ತವ್ಯಗಳು ಇವೆ. ಯಾರೂ ಅವುಗಳನ್ನು ಉಲ್ಲಂಘನೆ ಮಾಡಬಾರದೆಂದು ತಿಳಿಸಿದರು.ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರುಡಿ ಮಾತನಾಡಿ, ಮಾನವ ಹಕ್ಕುಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮಾಡಬೇಕು. ನಾವೂ ಬದುಕಬೇಕು. ಇತರರಿಗೂ ಬದುಕಲು ಬಿಡಬೇಕು ಎಂದರು.ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎಸ್.ಜಿ. ಪಲ್ಲೇದ ಮಾತನಾಡಿ, 1948ರಲ್ಲಿ ವಿಶ್ವ ಸಂಸ್ಥೆಯಲ್ಲಿ ಮಾನವ ಹಕ್ಕುಗಳ ರಕ್ಷಣೆ ಕುರಿತು ಠರಾವು(ರೆಸಲ್ಯೂಷನ್) ಪಾಸ್ ಮಾಡಲಾಯಿತು. ನಮ್ಮ ದೇಶದಲ್ಲಿ ಮಾನವ ಹಕ್ಕುಗಳ ಆಯೋಗ 1993ರಲ್ಲಿ ಸ್ಥಾಪನೆಯಾಯಿತು. ಜೈಲಿನಲ್ಲಿ, ಪೊಲೀಸ್ ಠಾಣೆ, ಶಾಲಾ- ಕಾಲೇಜು, ಕಚೇರಿಯಲ್ಲಿಯೂ ಮಾನವ ಹಕ್ಕುಗಳ ಉಲ್ಲಂಘನೆಯಾಗುವ ಸಂಭವಗಳಿರುತ್ತವೆ.12ನೇ ಶತಮಾನದಲ್ಲಿಯೇ ಬಸವಣ್ಣನವರು ಮಾನವೀಯತೆಯ, ಸಮಾನತೆಯ ಸಂದೇಶ ಸಾರಿದ್ದಾರೆ. ಪ್ರತಿಯೊಬ್ಬರಿಗೂ ಜೀವಿಸುವ ಹಕ್ಕು, ಶಿಕ್ಷಣ ಪಡೆಯುವ ಹಕ್ಕು, ಆರೋಗ್ಯದಿಂದಿರುವ ಹಕ್ಕುಗಳು ಮಾನವ ಹಕ್ಕುಗಳಾಗಿವೆ. ಮಾನವ ಹಕ್ಕುಗಳ ಉಲ್ಲಂಘನೆಯಾದಲ್ಲಿ ಆಯೋಗಕ್ಕೆ ಶಿಕ್ಷಿಸುವ ಹಕ್ಕು ಇರುವುದಿಲ್ಲ. ಆದರೆ ವಿಚಾರಣೆ ವರದಿಯನ್ನು ಸರ್ಕಾರಕ್ಕೆ ಶಿಫಾರಸು ಮಾಡುತ್ತದೆ. ಶಿಕ್ಷಿಸುವ ಹಕ್ಕು ಸರ್ಕಾರಕ್ಕೆ ಇದೆ ಎಂದರು.
ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು, ಮಾನವ ಹಕ್ಕುಗಳ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ವೇಳೆ ಡಿವೈಎಸ್‌ಪಿ ಮಹಾಂತೇಶ ಸಜ್ಜನರ, ಉಪವಿಭಾಗಾಧಿಕಾರಿ ಗಂಗಪ್ಪ ಎಂ., ತಹಸೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು. ವೆಂಕಟೇಶ ಅಲ್ಕೋಡ್ ಅವರು ನಾಡಗೀತೆ ಪ್ರಸ್ತುತಪಡಿಸಿದರು. ಎಂ.ಎ. ಯರಗುಡಿ ನಿರೂಪಿಸಿದರು.