ಮುಂಡರಗಿ: ಎಸ್ಎಸ್‌ಎಲ್‌ಸಿ ಪರೀಕ್ಷೆ ಕರ್ತವ್ಯಕ್ಕೆ ನಿಯೋಜಿಸಿರುವ ಎಲ್ಲ ಹಂತದ ಸಿಬ್ಬಂದಿ ಪರೀಕ್ಷೆಯ ಕರ್ತವ್ಯದಲ್ಲಿ ಯಾವುದೇ ಲೋಪವಾಗದಂತೆ ಕಾರ್ಯಗಳನ್ನು ನಿರ್ವಹಿಸಬೇಕು ಎಂದು ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ತಾಕೀತು ಮಾಡಿದರು.
ಸೋಮವಾರ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆ ಕುರಿತು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಶ್ನೆಪತ್ರಿಕೆ ವಿತರಣೆ ಬಹಳಷ್ಟು ಜಾಗೃತೆಯಿಂದ ಆಯಾ ಕೇಂದ್ರಕ್ಕೆ ಸಮಯಕ್ಕೆ ಸರಿಯಾಗಿ ತಲುಪಿಸುವುದರ ಜತೆಗೆ ಸರಕಾರಿ ಪರೀಕ್ಷಾ ಗೈಡ್‌ಲೈನ್ಸ್ ಪ್ರಕಾರ ಪ್ರಶ್ನೆ ಪತ್ರಿಕೆಗಳು ಎಲ್ಲಿಯೂ ಹೊರಗೆ ಹೋಗದಂತೆ ಕಸ್ಟಡಿಯನ್ ಮತ್ತು ಅಧೀಕ್ಷಕರು ಮಾರ್ಗಾಧಿಕಾರಿಗಳು ಬಹಳಷ್ಟು ಎಚ್ಚರಿಕೆಯಿಂದ ವಿತರಣೆ ಮಾಡಬೇಕು ಎಂದರು.ಎಲ್ಲ ಕಸ್ಟಡಿಯನ್ ಸೇರಿದಂತೆ ಅಧೀಕ್ಷಕರು ಮುಂಜಾಗೃತೆ ವಹಿಸಿ ಕಟ್ಟುನಿಟ್ಟಿನಿಂದ ಕಾರ್ಯನಿರ್ವಹಿಸಬೇಕು. ಬೆಳಗ್ಗೆ 8 ಗಂಟೆಗೆ ಎಲ್ಲ ಸಂಬಂಧಿಸಿದ ಸಿಬ್ಬಂದಿ ಪರೀಕ್ಷಾ ಕರ್ತವ್ಯದಲ್ಲಿ ಹಾಜರಿರಬೇಕು. ಪ್ರಶ್ನೆಪತ್ರಿಕೆ ಕೇಂದ್ರಗಳಿಗೆ ವಿತರಣೆ ಮಾಡಲು ನಿಯೋಜಿಸಿದ ಅಧಿಕಾರಿಗಳು ತಮಗಿಷ್ಟ ಬಂದ ಮಾರ್ಗಕ್ಕೆ ಹೋಗುವ ಬದಲು ಮೊದಲೇ ನಿರ್ಧರಿಸಿದ ಮಾರ್ಗಗಳಲ್ಲಿಯೇ ಹೋಗಿ ಆಯಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ತಲುಪಿಸಬೇಕು ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣಿಗೇರಿ ಮಾತನಾಡಿ, ಮುಂಡರಗಿ ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಪ್ರೌಢಶಾಲೆ, ಎಸ್‌ಎಫ್‌ಎಸ್ ಶಾಲೆ ಹಾಗೂ ವಿ.ಜಿ. ಲಿಂಬಿಕಾಯಿ ಪ್ರೌಢಶಾಲೆ, ಡಂಬಳ, ಪೇಠಾಲೂರು, ಬಾಗೇವಾಡಿ, ಕೊರ್ಲಹಳ್ಳಿ ಆದರ್ಶ ವಿದ್ಯಾಲಯ, ಕದಾಂಪುರ ಗ್ರಾಮಗಳಲ್ಲಿ ಸೇರಿ ತಾಲೂಕಿನಾದ್ಯಂತ ಒಟ್ಟು 8 ಪರೀಕ್ಷಾ ಕೇಂದ್ರಗಳಿದ್ದು, 8 ಜನ ಅಧೀಕ್ಷಕರನ್ನು ನೇಮಕ ಮಾಡಲಾಗಿದೆ. ಒಟ್ಟು ತಾಲೂಕಿನಲ್ಲಿ 2255 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದರು.
ಪರೀಕ್ಷೆ ಸಂದರ್ಭದಲ್ಲಿ ಪರೀಕ್ಷೆಗೆ ಹಾಜರಾಗುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಸಾರಿಗೆ ಸಂಸ್ಥೆಯ ಬಸ್ಸುಗಳ ಸೌಲಭ್ಯ ಮಾಡಲು ಸಾರಿಗೆ ಇಲಾಖೆಗೆ ತಿಳಿಸಲಾಗಿದೆ. ಒಂದು ಕೊಠಡಿಯಲ್ಲಿ 24 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಿದ್ದು, ಒಂದು ಡೆಸ್ಕ್‌ಗೆ ಒಬ್ಬ ವಿದ್ಯಾರ್ಥಿ ಕುಳಿತುಕೊಳ್ಳುವಂತೆ ವ್ಯವಸ್ಥೆ ಮಾಡಲಾಗುವುದು ಎಂದರು. ಸಭೆಯಲ್ಲಿ ತಾಪಂ ಇಒ ವಿಶ್ವನಾಥ ಹೊಸಮನಿ, ವಿವಿಧ ಕೇಂದ್ರದ ಅಧೀಕ್ಷಕರು, ಕಸ್ಟಡಿಯನ್, ಮಾರ್ಗಾಧಿಕಾರಿಗಳು, ಹಾಗೂ ಪಿಎಸ್‌ಐ ಬಿ.ಎನ್. ಯಳವತ್ತಿ, ಪುರಸಭೆ ಅಧಿಕಾರಿ, ಬಿಆರ್‌ಪಿ ಹನುಮರೆಡ್ಡಿ ಇಟಗಿ ಉಪಸ್ಥಿತರಿದ್ದರು.